ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದಲ್ಲಿ ಶ್ರೀ ಸೂರ್ಯಸಿಂಹಾಸನ ಮಠಕ್ಕೆ ಭಾನುವಾರ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಆಲ್ದೂರು ಸಿ.ರಾಜಶೇಖರ್, ರಾಜಪ್ಪ, ರಾಮಸಮುದ್ರ ಪುಟ್ಟಸ್ವಾಮಿ, ಬಸವರಾಜು, ಶಿವಮೂರ್ತಿ ಇತರರು ಇದ್ದರು.
ಸಚಿವರ ಖಾತೆ ಹಂಚಿಕೆ ಸಂಬಂಧ ನಿರೀಕ್ಷೆಯಾಗಲಿ ಅಥವಾ ಒತ್ತಡ ಇಲ್ಲ. ಯಾವುದೇ ಖಾತೆ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುವುದು ನನ್ನ ಕರ್ತವ್ಯ ಮತ್ತು ಧರ್ಮವಾಗಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ತಾಲೂಕಿನ ವಾಟಾಳು ಗ್ರಾಮದಲ್ಲಿರುವ ಶ್ರೀ ಸೂರ್ಯಸಿಂಹಾಸನ ಮಠಕ್ಕೆ ಭಾನುವಾರ ಭೇಟಿ ನೀಡಿ, ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಮಾತನಾಡಿದರು. ಸಚಿವರಾಗಿ ರಾಜ್ಯದ ಜನರ ಸೇವೆಯನ್ನು ಪರಿಣಾಮಕಾರಿಯಾಗಿ ಮಾಡುವ ಸಂಕಲ್ಪ ಮಾಡಲು ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು.
ಮುಖ್ಯಮಂತ್ರಿಗಳು ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಜನರ ಆಶೀರ್ವಾದ ಹಾಗೂ ಪಕ್ಷದ ನಾಯಕರ ವಿಶ್ವಾಸದಿಂದ ದೊರೆತಿರುವ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ವಾಟಾಳು ಮಠದ ಶ್ರೀಗಳ ಭೇಟಿ ಒಂದು ಔಚಿತ್ಯಪೂರ್ಣ ಕಾರ್ಯವಾಗಿದ್ದು, ಶ್ರೀಗಳ ಆಶೀರ್ವಾದ ಪಡೆಯುವ ಉದ್ದೇಶದಿಂದ ಆಗಮಿಸಿದ್ದೇನೆ ಎಂದು ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಸರಳ, ಸಜ್ಜನಿಕೆ ಹಾಗೂ ಜನಪರ ಕಾಳಜಿಯುಳ್ಳ ರಾಜಕಾರಣಿ. ಹಿಂದುಳಿದ ವರ್ಗಗಳ ಜನರ ಬಗ್ಗೆ ಕಾಳಜಿ ಹೊಂದಿರುವ ಅವರು, ಸಮಾಜದ ದುರ್ಬಲ ವರ್ಗಗಳ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿದ್ದಾರೆ. ರಾಜಕಾರಣದಲ್ಲಿ ಒಬ್ಬ ವ್ಯಕ್ತಿ ಈ ಎತ್ತರಕ್ಕೆ ಬೆಳೆಯಬೇಕಾದರೆ ಜನರ ಮೇಲಿನ ಕಾಳಜಿ, ಸರಳತೆ ಹಾಗೂ ಜನರೊಂದಿಗೆ ಹೊಂದಿರುವ ಉತ್ತಮ ಬಾಂಧವ್ಯ ಕಾರಣವಾಗುತ್ತದೆ. ಪುಟ್ಟರಂಗಶೆಟ್ಟಿಯವರಲ್ಲಿರುವ ಜನಪರ ಕಾಳಜಿಯೇ ಅವರನ್ನು ಇಂದಿನ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ತಿಳಿಸಿದರು.
ಮಠದ ಕಿರಿಯ ಶ್ರೀ ಶಿವಕುಮಾರಸ್ವಾಮಿ, ಚಾ.ನಗರ ಎಪಿಎಂಸಿ ಮಾಜಿ ಅಧ್ಯಕ್ಷ ಆಲ್ದೂರು ಸಿ.ರಾಜಶೇಖರ್, ನಗರಸಭೆ ಮಾಜಿ ಉಪಾಧ್ಯಕ್ಷ ಆರ್.ಎಂ.ರಾಜಪ್ಪ, ಮಾಜಿ ಸದಸ್ಯರಾದ ರಾಮಸಮುದ್ರ ಪುಟ್ಟಸ್ವಾಮಿ, ಬಸವರಾಜು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಶಿವಮೂರ್ತಿ, ಸಚಿವರ ಆಪ್ತ ಸಹಾಯಕ ವಿನೋದ್, ಮುಖಂಡರಾದ ರಾಮಸಮುದ್ರ ಪ್ರಸನ್ನ, ಇ.ಕೆ.ವೆಂಕಟರಾಮು, ಶಿವಣ್ಣ, ನಿವೃತ್ತ ಪಿಡಿಒ ಮಹದೇವಯ್ಯ, ರಾಜಶೇಖರ್‌ಶೆಟ್ಟಿ, ಬಸವರಾಜು, ಕುಮಾರ್, ಕಾವೇರಿಪುರ ಮಹದೇವಶೆಟ್ಟಿ, ವಾಟಾಳ್‌ಪುರ ಸುರೇಶ್ ಇತರರು ಇದ್ದರು.