ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ದಿನಪತ್ರಿಕೆ ಓದಿರಿ: ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಸಲಹೆ
ಪತ್ರಿಕಾ ದಿನಾಚರಣೆ ಅಂಗವಾಗಿ ಮಯೂರ ಕನ್ನಡ ಯುವಕರ ಬಳಗದಿಂದ ಹಳೇ ಸಂತೆಪೇಟೆಯಲ್ಲಿ ಪತ್ರಿಕಾ ದಿನ ಆಚರಿಸಲಾಯಿತು. ಎಚ್.ವಿ.ರಾಜೀವ್, ಮಡ್ಡೀಕೆರೆ ಗೋಪಾಲ್, ರಘುರಾಮ್ ವಾಜಪೇಯಿ, ವಿಕ್ರಂ ಅಯ್ಯಂಗಾರ್, ಬಸವರಾಜ್ ಬಸಪ್ಪ, ಜಿ.ರಾಘವೇಂದ್ರ, ರಮಾಬಾಯಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು, ವ್ಯವಹಾರ ಜ್ಞಾನ ವೃದ್ಧಿಸಿಕೊಳ್ಳಲು ದಿನಪತ್ರಿಕೆ ಓದುವ ದಿನಚರಿಯನ್ನು ರೂಢಿಸಿಕೊಳ್ಳಬೇಕು
ಸಾರ್ವಜನಿಕವಾಗಿ ಪತ್ರಿಕಾ ಮಾಧ್ಯಮ ಮುದ್ರಣ ಹೊರಹೊಮ್ಮಿದ್ದು ಮೈಸೂರಿನಲ್ಲಿಯೇ ಪ್ರಥಮವಾಗಿದೆ
ಮೈಸೂರು:ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿತ್ಯ ಪೈಪೋಟಿ ಎದುರಿಸಿ ವ್ಯವಹಾರ ಜ್ಞಾನ ವೃದ್ಧಿಸಿಕೊಳ್ಳಲು ದಿನಪತ್ರಿಕೆಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪತ್ರಿಕಾ ದಿನಾಚರಣೆ ಅಂಗವಾಗಿ ಮಯೂರ ಕನ್ನಡ ಯುವಕರ ಬಳಗದಿಂದ ಹಳೇ ಸಂತೆಪೇಟೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಕನ್ನಡ ದಿನಪತ್ರಿಕೆಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿದಿನ ಎಲ್ಲ ಕ್ಷೇತ್ರಗಳಲ್ಲಿಯೂ ಪೈಪೋಟಿ ಹೆಚ್ಚುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು, ವ್ಯವಹಾರ ಜ್ಞಾನ ವೃದ್ಧಿಸಿಕೊಳ್ಳಲು ದಿನಪತ್ರಿಕೆ ಓದುವ ದಿನಚರಿಯನ್ನು ರೂಢಿಸಿಕೊಳ್ಳಬೇಕು. ಆಗ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಾಧ್ಯ ಎಂದು ಹೇಳಿದರು.
ಹಿರಿಯ ಸಮಾಜ ಸೇವಕ ರಘುರಾಮ್ ವಾಜಪೇಯಿ ಮಾತನಾಡಿ, ಮೈಸೂರು ನಿಜವಾದ ಅರ್ಥದಲ್ಲಿ ಪತ್ರಿಕೆಗಳ ತವರೂರು. ಮಂಗಳೂರು ಸಮಾಚಾರ ಎಂಬುದು ಕ್ರಿಶ್ಚಿಯನ್ ಮಿಷಿನರಿಗಳ ಮಾಸಿಕ ಸಂಚಿಕೆ ಮೊದಲಿಗಾಗಿ ಹೊರಹೊಮ್ಮಿದ್ದರೂ ಸಾರ್ವಜನಿಕವಾಗಿ ಪತ್ರಿಕಾ ಮಾಧ್ಯಮ ಮುದ್ರಣ ಹೊರಹೊಮ್ಮಿದ್ದು ಮೈಸೂರಿನಲ್ಲಿಯೇ ಪ್ರಥಮವಾಗಿದೆ ಎಂದು ಹೇಳಿದರು.
ಹಾಗಾಗಿ ಪತ್ರಿಕಾ ಮಾಧ್ಯಮಕ್ಕೆ ಮೈಸೂರಿನಲ್ಲಿ ವಿಶಿಷ್ಟ ಸ್ಥಾನವಿದೆ. ಅದರಲ್ಲೂ ತಾತಯ್ಯ ಅವರನ್ನು ಮಹಾತ್ಮ ಗಾಂಧಿ ಪತ್ರಿಕಾರಂಗದ ಭೀಷ್ಮ ಎಂದು ಕರೆದಿದ್ದರು. ಸಾಕಷ್ಟು ಉತ್ತಮ ಪತ್ರಕರ್ತರನ್ನು ಮೈಸೂರು ನೀಡಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಓದುಗರಿಗೆ ಸುದ್ದಿ ನೀಡಬೇಕು ಎನ್ನುವ ಧಾವಂತದಲ್ಲಿರುವ ಪತ್ರಕರ್ತರು, ಹಗಲುರಾತ್ರಿ ಎನ್ನದೇ ದುಡಿಯುತ್ತಾರೆ. ಕುಟುಂಬದ ಸದಸ್ಯರೊಂದಿಗೆ ಬೆರೆಯಲು ಅವರಲ್ಲಿ ಸಮಯ ಇರುವುದಿಲ್ಲ. ಮಾಧ್ಯಮ ಇಲ್ಲದಿದ್ದರೆ ಸಮಾಚಾರಗಳು ಹೊರ ಜಗತ್ತಿಗೆ ತಿಳಿಯುತ್ತಲೇ ಇರಲಿಲ್ಲ ಎಂದರು.
ಕೆ.ಆರ್.ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ.ರಾಘವೇಂದ್ರ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಎಸ್.ಎನ್.ರಾಜೇಶ್, ಹಿರಿಯ ಪತ್ರಿಕಾ ವಿತರಕರಾದ ರಮಾಬಾಯಿ, ರಾಕೇಶ್, ಹರೀಶ್ ನಾಯ್ಡು ಇತರರು ಇದ್ದರು.