ಮುಂಗಾರು ಮಳೆ ಪ್ರಮಾಣ ಕುಸಿತ

ಕೈಕೊಟ್ಟ ಮಳೆ, ಒಣಗುತ್ತಿದೆ ಬೆಳೆ
ಕೈಕೊಟ್ಟ ಮಳೆ, ಒಣಗುತ್ತಿದೆ ಬೆಳೆ
Published on
ಸಿ.ಎನ್.ವಿಜಯ್ ಪಿರಿಯಾಪಟ್ಟಣ
ಜೂನ್ ತಿಂಗಳು ಕಳೆಯುತ್ತಾ ಬಂದರೂ ತಾಲೂಕಿನಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಈ ಬಾರಿಯ ಮುಂಗಾರು ಕೈಕೊಟ್ಟ ಕಾರಣ ರೈತರಲ್ಲಿ ಆತಂಕದ ಛಾಯೆ ಕವಿದಿದೆ. ವಾತಾವರಣದ ಏರುಪೇರಿನಿಂದ ಈ ಬಾರಿ ತಾಲೂಕಿನಲ್ಲಿ ವಿವಿಧ ಬೆಳೆಗಳ ಇಳುವರಿಯೂ ಕುಂಠಿತವಾಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.
ಸಾಮಾನ್ಯವಾಗಿ ಕೇರಳಂನಲ್ಲಿ ಮುಂಗಾರು ಮಳೆ ಮಾರುತಗಳು ಪ್ರವೇಶಗೊಂಡ ಒಂದೆರಡು ದಿನಗಳಲ್ಲಿ ಕೊಡಗು ಜಿಲ್ಲೆ ಮತ್ತು ಗಡಿಭಾಗದ ಗ್ರಾಮಗಳಿಗೆ ವರುಣನ ಕೃಪೆಯಾಗುತ್ತದೆ. ಕೇರಳಂ ಮಾರುತಗಳಿಂದ ಮೈಸೂರು ಜಿಲ್ಲೆಯಲ್ಲಿ ಮೊದಲು ವರ್ಷಧಾರೆ ಪಡೆಯುವ ತಾಲೂಕು ಪಿರಿಯಾಪಟ್ಟಣವಾಗಿದೆ ಎಂಬುದೇ ವಿಶೇಷ. ಹೀಗಿರುವಾಗ ತಾಲೂಕಿನ ಕೃಷಿ ಭೂಮಿಗೆ ಈ ಬಾರಿ ಬರದ ಛಾಯೆ ಮೂಡುತ್ತಿದೆ. ಮೇ ತಿಂಗಳ ಕೊನೆಯ ವಾರದಲ್ಲೇ ಅವಧಿಗೆ ಮುನ್ನ ರಾಜ್ಯದಲ್ಲಿ ಮುಂಗಾರು ಮಳೆ ಆರಂಭಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆರಂಭದಲ್ಲಿ ಕೊಂಚ ಮಳೆ ಸುರಿಯಿತು. ನಂತರ ವರುಣ ನಾಪತ್ತೆಯಾದ. ಇದೀಗ ಜೂನ್ ತಿಂಗಳು ಇನ್ನೇನು ಮುಗಿಯುತ್ತಾ ಬಂದರೂ ಮುಂಗಾರು ಪ್ರಭಾವವೇ ಇಲ್ಲದಂತಾಗಿದೆ. ಮಳೆರಾಯನ ಕೊರತೆಯಿಂದ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಾದ ತಂಬಾಕು, ಮತ್ತು ಶುಂಠಿ ಸೇರಿದಂತೆ ಮುಸುಕಿನ ಜೋಳ ಬೆಳೆಗಳಿಗೆ ಈಗ ನೀರಿನ ಅಗತ್ಯತೆ ಇದೆ. ಹಾಗಾಗಿ ಮಳೆಯ ನಿರೀಕ್ಷೆಯಲ್ಲಿ ರೈತರು ಅಗಸದತ್ತ ಮುಖ ಮಾಡಿದ್ದಾರೆ. ತಾಲೂಕಿನ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚದುರಿದಂತೆ ಮಳೆಯಾಗಿದೆಯಾದರೂ ಇದು ಬೆಳೆಗಳಿಗೆ ಸಾಕಾಗುತ್ತಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ವರ್ಷಧಾರೆಯಾಗದ ಕಾರಣ ಈಗಾಗಲೇ ಬಿತ್ತನೆ ಮಾಡಿರುವ ಅನ್ನದಾತರು ಕಂಗಾಲಾಗಿ ಕುಳಿತಿದ್ದಾರೆ. ಬಹುತೇಕ ಜಮೀನುಗಳಲ್ಲಿ ಅಗತ್ಯವಿರುವ ಕೃಷಿ ಚಟುವಟಿಕೆಗಳು ನಡೆಯುತ್ತಿವೆಯಾದರೂ ತುರ್ತಾಗಿ ಒಂದು ಹದ ಮಳೆ ಬಿದ್ದರೆ ಮಾತ್ರ ಬೆಳೆಗಳು ಚೇತರಿಸಿಕೊಳ್ಳಲಿವೆ. ಉತ್ತಮ ಇಳುವರಿ ನೀಡಲಿವೆ.
ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಜನವರಿಯಿಂದ ಜೂನ್ ತಿಂಗಳವರೆಗೆ ತಾಲೂಕಿನಲ್ಲಿ 282 ಮಿ. ಮೀ. ಮಳೆಯಾಗಬೇಕಿತ್ತು. ಆದರೆ ಈವರೆಗೆ ಕೇವಲ 171 ಮಿ. ಮೀ. ಮಾತ್ರ ಮಳೆಯಾಗಿದೆ. ಶೇ. 39 ರಷ್ಟು ಮಳೆಯ ಪ್ರಮಾಣ ಕೊರತೆಯಾಗಿದೆ. ತಾಲೂಕಿನಲ್ಲಿ
ಪ್ರಸಕ್ತ ಸಾಲಿನ ಜೂನ್‌ನಲ್ಲಿ 76.9 ಮಿ. ಮೀ. ವಾಡಿಕೆ ಮಳೆ ಸುರಿಯಬೇಕಿತ್ತು. ಆಗ ಬೆಳೆಗಳಿಗೆ ಹದವಾಗುತ್ತಿತ್ತು. ಆದರೆ ವರುಣನ ಆವಕೃಪೆಯಿಂದಾಗಿ ಕೇವಲ 43.6 ಮಿ. ಮೀ. ಮಳೆಯಾಗಿದೆ. ಒಂದೇ ತಿಂಗಳಿನಲ್ಲಿ ಒಟ್ಟಾರೆ ಶೇ. 43 ರಷ್ಟು ಮಳೆಯ ಕೊರತೆಯಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ರೈತರ ಆರ್ಥಿಕ ಚೈತನ್ಯವಾಗಿದೆ. ಈ ವರ್ಷ 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ನಾಟಿ ಮಾಡುವ ಗುರಿ ಹೊಂದಲಾಗಿತ್ತು. ಮೇ ತಿಂಗಳಿನಲ್ಲಿ ಉತ್ತಮ ಮಳೆಯಾಗಿದ್ದರಿಂದ 25, 180 ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ನಾಟಿ ಕಾರ್ಯ ಮಾಡಲಾಗಿದೆ. ಇನ್ನುಳಿದಂತೆ 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳದ ಬಿತ್ತನೆ ಆಗಬೇಕಿತ್ತು. ಈವರೆಗೆ 8, 800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ಮಳೆಯ ನಿರೀಕ್ಷೆಯಲ್ಲೇ ಈ ಎಲ್ಲಾ ಪ್ರಕ್ರಿಯೆಗಳೂ ನಡೆದಿದ್ದವು. ಪ್ರಮುಖ ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ಬಾಳೆ ಬೆಳೆಗಳಿಗೆ ಸಕಾಲದಲ್ಲಿ ನೀರು ನೀಡಲು ಸಾಧ್ಯವಾಗದ ಕಾರಣ ರೈತರು ಪರಿತಪಿಸುತ್ತಿದ್ದಾರೆ. ಶುಂಠಿ, ಹಲಸಂದೆ, ತೊಗರಿ, ಉದ್ದು, ರಾಗಿ, ಸೇರಿದಂತೆ ವಿವಿಧ ಬೆಳೆಗಳಿಗೂ ನೀರಿನ ಅಗತ್ಯವಿದೆ. ತಾಲೂಕಿನ ಕೆರೆ ಕಟ್ಟೆಗಳು ಮುಂಗಾರು ಮಳೆಯಿಂದ ಭರ್ತಿಯಾಗದ ಕಾರಣ ಕೊಳವೆ ಬಾವಿಗಳೂ ನಿರೀಕ್ಷಿತ ಪ್ರಮಾಣದಲ್ಲಿ ಗದ್ದೆ, ತೋಟಗಳಿಗೆ ನೀರು ನೀಡಲು ಆಗುತ್ತಿಲ್ಲ. ಇದು ಕೃಷಿಕರನ್ನು ಆತಂಕದಲ್ಲಿ ಮುಳುಗಿಸಿದೆ.
ರಸಗೊಬ್ಬರಗಳನ್ನು ನೀಡಿದ್ದಾರೆ
ಜೂನ್ ಆರಂಭದಲ್ಲೇ ರೈತರು ರಸಗೊಬ್ಬರಗಳನ್ನು ಖರೀದಿಸಿ ಮೊದಲ ಹಂತದಲ್ಲಿ ಬೆಳೆಗಳಿಗೆ ನೀಡಿದ್ದಾರೆ. ಬೋರ್‌ವೆಲ್ ವ್ಯವಸ್ಥೆ ಇದ್ದವರು ಪ್ರಮುಖ ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ಬಾಳೆಗೆ ಈಗಾಗಲೇ ಮೊದಲ ಹಂತದ ಗೊಬ್ಬರ ನೀಡುವ ಕಾರ್ಯ ಮುಗಿಸಿದ್ದಾರೆ. ಸ್ಪಿಂಕ್ಲರ್‌ಗಳ ಮೂಲಕ ನೀರು ನೀಡುತ್ತಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಾಟಿ ಮಾಡಿರುವ ತಂಬಾಕಿಗೆ ಒಂದು ಹಂತದ ರಸಗೊಬ್ಬರ ಪೂರೈಕೆಯಾಗಿದೆ. ಈಗ ಕೀಟನಾಶಕಗಳ ಸಿಂಪರಣೆ ನಡೆಯುತ್ತಿದೆ. ಮೇ ತಿಂಗಳಿನಲ್ಲಿ ಬಿತ್ತನೆಯಾಗಿರುವ ಮುಸುಕಿನ ಜೋಳದಲ್ಲಿ ಬೂದುರೋಗ ಕಂಡುಬರುತ್ತಿದೆ. ಜೂನ್ ಕೊನೆಯ ವಾರದಲ್ಲಾದರೂ ಉತ್ತಮ ಮಳೆಯಾದರೆ ರೋಗ ಉಲ್ಬಣವಾಗುವ ಸಾಧ್ಯತೆಗಳು ಇವೆ. ಏಪ್ರಿಲ್‌ನಲ್ಲಿ ನಾಟಿಯಾಗಿರುವ ತಂಬಾಕು ಗಿಡಗಳು ಉತ್ತಮವಾಗಿ ಬೆಳೆದಿವೆ. ಈ ತಿಂಗಳ ಕೊನೆಗೂ ಮಳೆರಾಯ ಕೈ ಕೊಟ್ಟರೆ ಅವಧಿಗೆ ಮೊದಲೇ ಎಲೆಗಳು ಹಣ್ಣಾಗುವ ಆತಂಕ ಎದುರಾಗಿದೆ. ನಿತ್ಯ ಮುಗಿಲು ನೋಡಿ ವರುಣನ ಕೃಪೆ ಬೇಡುವುದೇ ಕೃಷಿಕರ ಕಾಯಕವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net