ರೇಡಿಯಾಲಜಿ ಸೌಲಭ್ಯ ಬಡ ಜನರಿಗೆ ತಲುಪಲಿ: ಡಾ.ಬಿ.ದಿನೇಶ್ ಅಭಿಮತ

ಜಯದೇವ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ಡಾ.ಜ್ಞಾನ್ ಪಿ.ಲಾಲ್ ಸಿಎಂಇ-2026 ಕಾರ್ಯಕ್ರಮ
ಜಯದೇವ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ಡಾ.ಜ್ಞಾನ್ ಪಿ.ಲಾಲ್ ಸಿಎಂಇ-2026 ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಬಿ.ದಿನೇಶ್ ಹೇಳಿಕೆ
  • ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ರೇಡಿಯಾಲಜಿಯು ವೈದ್ಯರ ಕಣ್ಣುಗಳಂತೆ ಕೆಲಸ
  • ಅತ್ಯಾಧುನಿಕ ರೇಡಿಯಾಲಜಿ ಸೌಲಭ್ಯಗಳು ಇನ್ನೂ ನಗರ ಕೇಂದ್ರಗಳಿಗೆ ಮಾತ್ರ ಸೀಮಿತ
ಮೈಸೂರು: ರೇಡಿಯಾಲಜಿ ಕ್ಷೇತ್ರದಲ್ಲಿ ಆಗಿರುವ ಉತ್ತಮ ಬದಲಾವಣೆಗಳ ಫಲ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ದೊರೆಯಬೇಕು ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ.ದಿನೇಶ್ ಅಭಿಪ್ರಾಯಪಟ್ಟರು. 
ಭಾರತೀಯ ರೇಡಿಯಾಲಜಿ ಮತ್ತು ಇಮೇಜಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ನಗರದ ಜಯದೇವ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ಡಾ.ಜ್ಞಾನ್ ಪಿ.ಲಾಲ್ ಸಿಎಂಇ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ರೇಡಿಯಾಲಜಿಯು ವೈದ್ಯರ ಕಣ್ಣುಗಳಂತೆ ಕೆಲಸ ಮಾಡುತ್ತದೆ. ಇದು ಚಿಕಿತ್ಸೆಯನ್ನು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿಸಿದೆ. ರೇಡಿಯಾಲಜಿಯು ದೇಹದ ಒಳಗಿನ ಭಾಗಗಳ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಕ್ಷ-ಕಿರಣ, ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಮೂಲಕ ಮೂಳೆ ಮುರಿತ, ಗೆಡ್ಡೆಗಳು ಮತ್ತು ಆಂತರಿಕ ಗಾಯಗಳನ್ನು ಅತ್ಯಂತ ನಿಖರವಾಗಿ ಗುರುತಿಸಿ ಚಿಕಿತ್ಸೆ ನೀಡಬಹುದು. ಆದರೆ, ಈ ಸೇವೆಗಳ ಬೆಲೆ ದುಬಾರಿಯಾಗಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ದೊರೆಯಬೇಕಿದೆ ಎಂದು ತಿಳಿಸಿದರು. 
ವೈದ್ಯಕೀಯ ಕ್ಷೇತ್ರವು ಕೃತಕ ಬುದ್ಧಿಮತ್ತೆ ಮತ್ತು ಅತ್ಯಾಧುನಿಕ ಇಮೇಜಿಂಗ್ ತಂತ್ರಜ್ಞಾನಗಳ ಯುಗವನ್ನು ಪ್ರವೇಶಿಸಿದೆ. ಆದರೆ, ಅತ್ಯಾಧುನಿಕ ರೇಡಿಯಾಲಜಿ ಸೌಲಭ್ಯಗಳು ಇನ್ನೂ ನಗರ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿದ್ದು, ಗ್ರಾಮೀಣ ಮತ್ತು ಗಡಿ ಪ್ರದೇಶದ ಜನರಿಗೆ ಈ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಿ ವಿಸ್ತರಣೆಯಾಗಬೇಕಿದೆ ಎಂದರು. 
ರೇಡಿಯಾಲಜಿ ತಂತ್ರಜ್ಞಾನದಿಂದ ನಿಖರವಾದ ರೋಗ ಪತ್ತೆ, ಶಸ್ತ್ರಚಿಕಿತ್ಸೆಯ ಅಗತ್ಯತೆ ಕಡಿಮೆ ಮಾಡುವುದು, ಸಕಾಲಕ್ಕೆ ಚಿಕಿತ್ಸೆ ದೊರೆಯುವುದು, ವೇಗದ ಫಲಿತಾಂಶ ದೊರೆಯುತ್ತದೆ. ಅಲ್ಲದೆ ನೀಡಿದ ಚಿಕಿತ್ಸೆ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅನುಕೂಲಕಾರಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರೇಡಿಯಾಜಿಯು ವೈದ್ಯಕೀಯ ಕ್ಷೇತ್ರದ ಪ್ರಮುಖ ವಿಭಾಗವಾಗಿ ಬೆಳವಣಿಗೆಯಾಗಲಿದೆ ಎಂದರು. 
ಕಾರ್ಡಿಯಾಲಜಿ, ಗ್ಯಾಸ್ಟ್ರೋ ಎಂಟರಾಲಜಿ ಸೇರಿದಂತೆ ಹಲವು ವಿಶೇಷತೆಗಳಿಗೆ ಇಮೇಜಿಂಗ್ ಬೆಂಬಲ ಅನಿವಾರ್ಯವಾಗಿದೆ. ಭಾರತದಲ್ಲಿ ಪ್ರಸ್ತುತ ಸುಮಾರು 20 ಸಾವಿರ ನೋಂದಾಯಿತ ರೇಡಿಯಾಲಜಿಸ್ಟ್‌ಗಳಿದ್ದಾರೆ. ಇದು 150 ಕೋಟಿ ಮೀರಿದ ಜನಸಂಖ್ಯೆಗೆ ಸಾಕಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. 
ನಿತ್ಯ 30 ತೆರೆದ ಹೃದಯ ಶಸ್ತ್ರಚಿಕಿತ್ಸೆ: 
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪ್ರಸ್ತುತ 8 ರೇಡಿಯಾಲಜಿಸ್ಟ್‌ಗಳಿದ್ದಾರೆ. ಆಧುನಿಕ ಎಂಆರ್‌ಐ, ಸಿಟಿ ಮತ್ತು ಅಲ್ಟ್ರಾಸೌಂಡ್ ಸೌಲಭ್ಯಗಳಿವೆ. ರಾಜ್ಯದಲ್ಲಿ ಜಯದೇವ ಸಂಸ್ಥೆಗೆ ಪ್ರತಿದಿನ ಸುಮಾರು 2 ಸಾವಿರ ರೋಗಿಗಳು ಬರುತ್ತಾರೆ. 30 ಓಪನ್ ಹಾರ್ಟ್ ಸರ್ಜರಿಗಳು ಮತ್ತು 200ಕ್ಕೂ ಹೆಚ್ಚು ಕ್ಯಾಥೆಟರ್ ಆಧಾರಿತ ಪ್ರಕ್ರಿಯೆಗಳು ನಡೆಯುತ್ತವೆ. ಈ ಎಲ್ಲ ಚಿಕಿತ್ಸೆಗಳಿಗೂ ರೇಡಿಯಾಲಜಿ ಬೇಕಾಗಿದೆ ಎಂದು ಡಾ.ದಿನೇಶ್ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೇಡಿಯಾಲಜಿ ಮತ್ತು ಇಮೇಜಿಂಗ್ ಅಸೋಸಿಯೇಷನ್ ನಿರ್ಗಮಿತ ಅಧ್ಯಕ್ಷ ಉಮೇಶ್ ಕೃಷ್ಣಮೂರ್ತಿ, ಚುನಾಯಿತ ಅಧ್ಯಕ್ಷ ಸಿ.ಪಿ.ನಂಜರಾಜ್, ಉಪಾಧ್ಯಕ್ಷ ಎಂವಿಕೆ ರಾವ್, ಕಾರ್ಯದರ್ಶಿ ನಟೇಶ ಗುಪ್ತಾ, ವಿಜಯ ಸಾರಥಿ, ಮೈಸೂರು ರೇಡಿಯಾಲಜಿಸ್ ಅಸೋಸಿಯೇಷನ್ ಅಧ್ಯಕ್ಷ ಶಿವಪ್ರಸಾದ್, ಅಮರನಾಥ್ ಇನ್ನಿತರರಿದ್ದರು.
ಫೋಟೋ (ಮೇ 09, ಸ್ಕಾೃನ್-23)
ನಗರದಲ್ಲಿ ಆಯೋಜಿಸಿದ್ದ ಡಾ.ಜ್ಞಾನ್ ಪಿ.ಲಾಲ್ ಸಿಎಂಇ 2026 ಕಾರ್ಯಕ್ರಮವನ್ನು ಜಯದೇವ ಹೃದ್ರೋಗ ಮತ್ತು ಸಂಶೋಧನೆ ಸಂಸ್ಥೆಯ ನಿರ್ದೇಶಕ ಡಾ.ಬಿ.ದಿನೇಶ್ ಉದ್ಘಾಟಿಸಿದರು. ಉಮೇಶ್ ಕೃಷ್ಣಮೂರ್ತಿ, ಅಮರನಾಥ್, ಸಿ.ಪಿ.ನಂಜರಾಜ್, ಉಪಾಧ್ಯಕ್ಷ ಎಂವಿಕೆ ರಾವ್, ನಟೇಶ ಗುಪ್ತಾ, ವಿಜಯ ಸಾರಥಿ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net