ವಿರೋಧದ ನಡುವೆಯೇ ಕಂಬಳ ಆಯೋಜನೆಗೆ ಸದ್ದಿಲ್ಲದೆ ಸಿದ್ದತೆ

  ಕಂಬಳ ಆಯೋಜನೆಗೆ ಉದ್ದೇಶಿಸಿರುವ ಸಾತಗಳ್ಳಿಯ ಸ್ಥಳದಲ್ಲಿ ಮರಗಳನ್ನು ತೆರವುಗೊಳಿಸಿರುವುದು.
ಕಂಬಳ ಆಯೋಜನೆಗೆ ಉದ್ದೇಶಿಸಿರುವ ಸಾತಗಳ್ಳಿಯ ಸ್ಥಳದಲ್ಲಿ ಮರಗಳನ್ನು ತೆರವುಗೊಳಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರ ವಿರೋಧದ ನಡುವೆಯೂ ತಯಾರಿ
  • ದಸರಾ ಉಪಸಮತಿಯಲ್ಲಿ ಸೇರ್ಪಡೆ

ಮೈಸೂರು: 

ಸಾರ್ವಜನಿಕರ ವಿರೋಧದ ನಡುವೆಯೂ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ  ಕ್ರೀಡೆಯಾಗಿರುವ ಕಂಬಳ ಆಯೋಜಿಸಲು ಸದ್ದಿಲ್ಲದೆ ತಯಾರಿ ನಡೆದಿದೆ.

ಕರಾವಳಿಯ ಕ್ರೀಡೆಯನ್ನು ಮೈಸೂರು ನಗರದಲ್ಲಿ ಆಯೋಜಿಸುವುದಕ್ಕೆ ಪರಿಸರ ಹೋರಾಟಗಾರರು, ದಲಿತ, ರೈತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದಕ್ಕೆ ಸೊಪ್ಪು ಹಾಕದ ಜಿಲ್ಲಾಡಳಿತ ಕಂಬಳ ಆಯೋಜನೆಗೆ ಮುಂದಾಗಿದೆ.
ದಸರಾದಲ್ಲಿ ಕಂಬಳ ಆಯೋಜನೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶೇಷ ಕಾಳಜಿ ತೋರಿದ್ದಾರೆ. ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕಂಬಳ ಆಯೋಜನೆ ನಿರ್ಧಾರ ಮಾಡಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅಧ್ಯಕ್ಷತೆಯ ಸಭೆಯಲ್ಲೂ 17 ಉಪ ಸಮಿತಿಗಳನ್ನು ನೇಮಕ ಮಾಡಲಾಗಿತ್ತು.
ಆಗಸ್ಟ್ ಮೊದಲ ವಾರದಲ್ಲಿ ದಸರಾ ವಿಶೇಷ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ದಸರಾ ಉಪ ಸಮಿತಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಆದರೆ, ಮಾಧ್ಯಮಗಳಿಗೆ ಈ ಪಟ್ಟಿಯನ್ನೂ ಇನ್ನೂ ಬಿಡುಗಡೆ ಮಾಡಿಲ್ಲ ಎಂಬುದು ವಿಶೇಷ. ಈ ಪಟ್ಟಿಯಲ್ಲಿ ಕಂಬಳವೂ ಸೇರ್ಪಡೆಯಾಗಿದೆ. ಕಂಬಳ ದಸರಾದ 18ನೇ ಉಪ ಸಮಿತಿಯಾಗಿ ಜಾಗ ಪಡೆದುಕೊಂಡಿದೆ.
ಐವರ ಸಮಿತಿ: ಉಪ ವಿಶೇಷಾಧಿಕಾರಿಯಾಗಿ ಜಿಪಂ ಸಿಇಒ ಎಸ್.ಯುಕೇಶ್‌ಕುಮಾರ್, ಕಾರ್ಯಾಧ್ಯಕ್ಷರಾಗಿ ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಸಹ ಕಾರ್ಯಾಧ್ಯಕ್ಷರಾಗಿ ಪರಮೇಶ್, ಕಾರ್ಯದರ್ಶಿಯಾಗಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಪದ್ಮನಾಭ, ಸಹ ಕಾರ್ಯದರ್ಶಿಯಾಗಿ ನಗರ ಪಾಲಿಕೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೈತ್ರಿ ಈ ಸಮಿತಿಯಲ್ಲಿದ್ದಾರೆ.

ತಯಾರಿ ಶುರು:

ಈಗಾಗಲೇ ಕಂಬಳ ಆಯೋಜನೆಗೆ ಉದ್ದೇಶಿಸಿರುವ ಸಾತಗಳ್ಳಿಯ ಸ್ಥಳದಲ್ಲಿ ಪರಿಸರ ಹೋರಾಟಗಾರರ ವಿರೋಧದ ನಡುವೆಯೂ ಸಿದ್ಧತೆ ಮುಂದುವರಿದಿದೆ. ಮರ-ಗಿಡಗಳನ್ನು ತೆರವು ಮಾಡಿ ಸ್ಥಳವನ್ನು ಹದ ಮಾಡಲಾಗುತ್ತಿದೆ.
ಸದರಿ ಸ್ಥಳವನ್ನು ಸೈಕ್ಲಿಂಗ್ ವೆಲೊಡ್ರೋಮ್ ನಿರ್ಮಾಣಕ್ಕೆ ಕ್ರೀಡಾ ಇಲಾಖೆಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಹಸ್ತಾಂತರಕ್ಕೂ ಮುನ್ನವೇ ಮರಗಳ ಕಟಾವು ಮಾಡಿರುವುದನ್ನು ಖಂಡಿಸಿ ಪರಿಸರ ಹೋರಾಟಗಾರರು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.
ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲೇ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧಿಸಿದ್ದರು. ಆದರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೊಸತನ ಇರಬೇಕೆಂದು ಕಂಬಳ ಆಯೋಜನೆಗೆ ಮುಂದಾಗಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದರು.
ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆಗೆ ಸುಮಾರು 8ರಿಂದ 10 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಇಷ್ಟೊಂದು ದುಬಾರಿ ಹಣವನ್ನು ವಿನಿಯೋಗಿಸಿ ಕಂಬಳ ಆಯೋಜಿಸಬೇಕೆ? ಎಂದು ಮೈಸೂರಿನ ನಾಗರಿಕರು ಪ್ರಶ್ನಿಸಿದ್ದಾರೆ.  

ಸಿದ್ದರಾಮಯ್ಯ ಬಳಿ ನಿಯೋಗ:

ದಸರಾದಲ್ಲಿ ಕಂಬಳ ಆಯೋಜಿಸದಂತೆ ರಾಜ್ಯ ಸರ್ಕಾರಕ್ಕೆ ಸಲಹೆ ಕೊಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆ. 20ರಂದು ಪರಿಸರ, ರೈತ ಮತ್ತು ದಲಿತ ಹೋರಾಟಗಾರರ ನಿಯೋಗವು ಮನವಿ ಮಾಡಲು ನಿರ್ಧರಿಸಿದೆ ಎಂದು ಪರಿಸರ ಬಳಗದ ಕಾರ್ಯದರ್ಶಿ ಪರಶುರಾಮೇಗೌಡ ತಿಳಿಸಿದ್ದಾರೆ. 
ಈ ಬಾರಿಯ ಪೂರ್ವ ಮುಂಗಾರು, ಮುಂಗಾರು ಮಳೆ ಕೈಕೊಟ್ಟಿದೆ. ಬರದ ಛಾಯೆ ಆವರಿಸುವ ಸಾಧ್ಯತೆ ಇದೆ. ಕಾವೇರಿ ಸಂಘರ್ಷ ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಉಲ್ಬಣವಾಗಬಹುದು. ಪರಿಸ್ಥಿತಿ ಸಂಕಟದಲ್ಲಿದ್ದರೂ ರಾಜ್ಯ ಸರ್ಕಾರ ಹಠದಿಂದ ಕಂಬಳ ಆಯೋಜನೆಗೆ ಮುಂದಾಗಿರುವುದು ವಿಷಾದನೀಯ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net