ರೈಲ್ವೆ ಪಿಂಚಣಿದಾರರ ಸಮಸ್ಯೆಗೆ ಶೀಘ್ರ ಪರಿಹಾರ

ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ಸೋಮವಾರ ಅಖಿಲ ಭಾರತ ಪಿಂಚಣಿ ಅದಾಲತ್-2025 ಆಯೋಜಿಸಲಾಗಿತ್ತು. ಮುದಿತ್ ಮಿತ್ತಲ್, ಪಾರ್ಥಸಾರಥಿ, ತಿರುಮಲ ರೆಡ್ಡಿ, ಹರ್ಷವರ್ಧನ, ಪೃಥ್ವಿ ಎಸ್.ಹುಲ್ಲತ್ತಿ ಇತರರಿದ್ದರು.
ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ಸೋಮವಾರ ಅಖಿಲ ಭಾರತ ಪಿಂಚಣಿ ಅದಾಲತ್-2025 ಆಯೋಜಿಸಲಾಗಿತ್ತು. ಮುದಿತ್ ಮಿತ್ತಲ್, ಪಾರ್ಥಸಾರಥಿ, ತಿರುಮಲ ರೆಡ್ಡಿ, ಹರ್ಷವರ್ಧನ, ಪೃಥ್ವಿ ಎಸ್.ಹುಲ್ಲತ್ತಿ ಇತರರಿದ್ದರು.
Published on
ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ಸೋಮವಾರ ನಗರದ ರೈಲ್ವೆ ಆಫೀಸರ್ ಕ್ಲಬ್‌ನಲ್ಲಿ ಅಖಿಲ ಭಾರತ ಪಿಂಚಣಿ ಅದಾಲತ್-2025 ಆಯೋಜಿಸಲಾಗಿತ್ತು.
ಎರಡು ಹೊಸ ಪ್ರಕರಣಗಳು ಸೇರಿದಂತೆ ಒಟ್ಟು 32 ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಾಯಿತು. ಅದಾಲತ್‌ನಲ್ಲಿ ಒಟ್ಟು 32 ಪ್ರಕರಣಗಳ ಪೈಕಿ 16 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಉಳಿದ ಪ್ರಕರಣಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ತಿಳಿಸಿದರು.
ಆರ್ಥಿಕ ಮತ್ತು ಕಾರ್ಮಿಕ ಕಲ್ಯಾಣ ವಿಭಾಗಗಳ ಸಮನ್ವಯದ ಮೂಲಕ ಪಿಂಚಣಿದಾರರ ಸಮಸ್ಯೆಗಳನ್ನು ಪರಿಹರಿಸಿ, ವ್ಯರ್ಥ ಅಲೆದಾಟ, ಅನಗತ್ಯ ದಾಖಲೆ ಪಡೆಯುವುದನ್ನು ತಪ್ಪಿಸಲಾಗುತ್ತದೆ ಎಂದರು.
ರೈಲ್ವೆ ಇಲಾಖೆಯ ಉನ್ನತೀಕರಣದಲ್ಲಿ ನಿವೃತ್ತ ನೌಕರರ ಶ್ರಮ ಅಧಿಕವಾಗಿದೆ. ಇಲಾಖೆಯು ನಿವೃತ್ತ ನೌಕರರ ಹಿತ ಕಾಯುತ್ತದೆ. ಪ್ರತಿ ಪಿಂಚಣಿದಾರರ ಸಮಸ್ಯೆ ಪರಿಹರಿಸಲು ಇಂದು ರೈಲ್ವೆ ಇಲಾಖೆ ದೇಶದಲ್ಲಿ ಅದಾಲತ್ ಆಯೋಜಿಸಿದ್ದು, ಇಲ್ಲಿ ನಿವೃತ್ತರ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಿ ಅವರ ಹಿತ ಕಾಯುವಲ್ಲಿ ಇಲಾಖೆ ಶ್ರಮ ವಹಿಸುತ್ತಿದೆ ಎಂದರು.
ನಿವೃತ್ತಿ ಸಂದರ್ಭದಲ್ಲಿ ಸೇವಾ ದಾಖಲೆ, ಪಿಪಿಒ(ನಿವೃತ್ತ ಸೇವಾ ಪ್ರಮಾಣ ಪತ್ರ), ಸೆಟಲ್ಮೆಂಟ್ ಶೀಟ್, ಪೆನ್ಷನ್ ವಿವರಣಾ ಪತ್ರ, ಕೌಟುಂಬಿಕ ಪೆನ್ಷನ್ ಸದಸ್ಯರ ವಿವರ ಸೇರಿದಂತೆ ಅನೇಕ ದಾಖಲೆಗಳ ಮುದ್ರಿತ ಪ್ರತಿಗಳನ್ನು ನೀಡಲಾಗುವುದು ಎಂದು ತಿಳಿಸಿದರು. 
ಕೌಟುಂಬಿಕ ಪೆನ್ಷನ್ ಪಡೆಯುವಲ್ಲಿ ಆ ಪಿಂಚಣಿದಾರರ ಕುಟುಂಬದಲ್ಲಿ ಕೆಲವೊಂದು ಸಮಸ್ಯೆ ಇರುವುದರಿಂದ ಆಗ ಪಿಂಚಣಿ ಪಡೆಯುವಲ್ಲಿ ಅಡೆತಡೆ ಆಗುವುದು, ಸೂಕ್ತ ದಾಖಲೆ ನೀಡಿದರೆ ಅದನ್ನು ಶೀಘ್ರದಲ್ಲಿ ಪರಿಹಾರ ಮಾಡಲಾಗುತ್ತದೆ ಎಂದು ತಿಳಿಸಿದರು.
ರೈಲ್ವೆ ಪಿಂಚಣಿದಾರರ ಕಲ್ಯಾಣ ಸಂಘದ ಅಧ್ಯಕ್ಷ ಪಾರ್ಥಸಾರಥಿ, ಸಹಾಯಕ ಕಾರ್ಮಿಕ ಅಧಿಕಾರಿ ತಿರುಮಲ ರೆಡ್ಡಿ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಹರ್ಷವರ್ಧನ, ಹಿರಿಯ ವಿಭಾಗೀಯ ಹಣಕಾಸು ವ್ಯವಸ್ಥಾಪಕ ಪೃಥ್ವಿ ಎಸ್.ಹುಲ್ಲತ್ತಿ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ವಿಷ್ಣುಗೌಡ ಇತರರಿದ್ದರು.
-----------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net