ಜಯಲಕ್ಷ್ಮೀಪುರಂನ ವಿ.ವಿ. ಹೆರಿಗೆ ಆಸ್ಪತ್ರೆಯಲ್ಲಿ ಶಾಸಕ ಕೆ.ಹರೀಶ್‌ಗೌಡ ಅವರು ಮಕ್ಕಳಿಗೆ ಪೋಲಿಯೋ ಹಾಕಿದರು. ಜಿ.ಲಕ್ಷ್ಮೀಕಾಂತ್ ರೆಡ್ಡಿ, ಎಸ್.ಯುಕೇಶ್ ಕುಮಾರ್, ಡಾ.ಪಿ.ಸಿ.ಕುಮಾರಸ್ವಾಮಿ ಇನ್ನಿತರರಿದ್ದರು.
ಮೈಸುರು: ಜಿಲ್ಲೆಯಲ್ಲಿ ಪ್ರಸ್ತಕ ಸಾಲಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು. 0-5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಯಲಕ್ಷ್ಮೀಪುರಂನ ವಿ.ವಿ. ಹೆರಿಗೆ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಶಾಸಕ ಕೆ.ಹರೀಶ್‌ಗೌಡ ಅವರು ಮಕ್ಕಳಿಗೆ ಪೋಲಿಯೋ ಹಾಕುವುದರ ಮೂಲಕ ಉದ್ಘಾಟಿಸಿದರು.
ಸುಮಾರು 1,600 ಅಧಿಕ ಬೂತ್‌ಗಳಲ್ಲಿ ಲಸಿಕೆ ನೀಡಲಾಯಿತು. 4000 ಅಧಿಕ ಸಿಬ್ಬಂದಿ, ವೈದ್ಯರು ಮತ್ತು ತಾಲೂಕು ವೈದ್ಯಾಧಿಕಾರಿಗಳು ಒಳಗೊಂಡ ತಂಡಗಳು ಲಸಿಕಾ ಕಾರ್ಯಕ್ರಮದಲ್ಲಿ ತಮ್ಮನ್ನು ಸಕ್ರಿಯವಾಗಿದ್ದರು. ಸಂಚಾರಿ ತಂಡಗಳು, ಟ್ರಾನ್ಸಿಟ್ ತಂಡಗಳು, ಲಸಿಕಾ ಕಾರ್ಯಕರ್ತರು, ಮೇಲ್ವಿಚಾರಕರು ಸಹ ಭಾಗಿಯಾಗಿದ್ದಾರೆ.
ಬೂತ್‌ಗಳಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ನಡೆದ ಬಳಿಕ ಡಿ.22ರಿಂದ ಮೂರು ದಿನಗಳ ಕಾಲ ಮನೆ ಮನೆಗೆ ಭೇಟಿ ಕಾರ್ಯಕ್ರಮ ನಡೆಯಲಿದ್ದು, ವಲಸೆ ಮಕ್ಕಳು, ಸ್ಲಂಗಳಲ್ಲಿರುವ ಮಕ್ಕಳಿಗೆ ಆದ್ಯತೆ ನೀಡಿ ಅವರ ಬಾಯಿಯ ಮೂಲಕ ಎರಡು ಹನಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಮಗು ಸಹ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಹಿಂದೆ ಎಷ್ಟು ಬಾರಿ ಪೋಲಿಯೋ ಲಸಿಕೆ ಪಡೆದಿದ್ದರೂ ಸಹ ಮತ್ತೆ ಲಸಿಕೆ ಹಾಕಿಸುವುದು ಅವಶ್ಯಕವಾಗಿದೆ. ಈ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಸುಳ್ಳು ವದಂತಿಗೆ ಕಿವಿಗೊಡದೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಪಾಲಕರಿಗೆ ವೈದ್ಯರು ತಿಳಿಹೇಳಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್‌ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಸತೀಶ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮಹಮ್ಮದ್ ಶಿರಾಜ್ ಅಹಮದ್ ಇನ್ನಿತರರಿದ್ದರು