ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದಲ್ಲಿ ವಿಶ್ವ ಗ್ಲಾಕೋಮಾ ಸಪ್ತಾಹದ ಅಂಗವಾಗಿ ಬುಧವಾರ ಆಯೋಜಿಸಿದ್ದ ಜಾಗೃತಿ ಅಭಿಯಾನವನ್ನು ಗಣ್ಯರು ಉದ್ಘಾಟಿಸಿದರು. ಎಸ್.ಪಿ. ಮಂಜುನಾಥ್, ಡಾ. ಕುಮಾರಸ್ವಾಮಿ, ಡಾ.ಬೃಂದಾ, ಡಾ.ಎಚ್.ಬಸವನಗೌಡಪ್ಪ, ಡಾ.ಸಿ.ಪಿ.ಮಧು ಇದ್ದರು.
ಕಣ್ಣಿನ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಹೇಳಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದಲ್ಲಿ ವಿಶ್ವ ಗ್ಲಾಕೋಮಾ ಸಪ್ತಾಹದ ಅಂಗವಾಗಿ ಬುಧವಾರ ಆಯೋಜಿಸಿದ್ದ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ಲಾಕೋಮಾ ಕಣ್ಣಿನ ನರಗಳಿಗೆ ಹಾನಿ ಉಂಟು ಮಾಡುವ ಗಂಭೀರ ಕಾಯಿಲೆ. ಸಮಸ್ಯೆಯನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದರಿಂದ ದೃಷ್ಟಿ ಕಾಪಾಡಿಕೊಳ್ಳಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಶಾಶ್ವತವಾಗಿ ದೃಷ್ಟಿ ನಷ್ಟವಾಗುವ ಸಾಧ್ಯತೆ ಇದೆ. ಆದ್ದರಿಂದ ಜನರು ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈದ್ಯರು, ಆರೋಗ್ಯ ಇಲಾಖೆ ಹಾಗೂ ತಜ್ಞರು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಗ್ಲಾಕೋಮಾ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರಸ್ವಾಮಿ ಮಾತನಾಡಿ, ಗ್ಲಾಕೋಮಾ ನಿಯಂತ್ರಣಕ್ಕಾಗಿ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಣ್ಣಿನ ಕಾಯಿಲೆಗಳ ಬಗ್ಗೆ ಅರಿವು ಹೆಚ್ಚಿಸಬೇಕು. ಆರೋಗ್ಯ ಇಲಾಖೆ, ಆಸ್ಪತ್ರೆಗಳು ಹಾಗೂ ವೈದ್ಯರು ಒಟ್ಟಾಗಿ ಕೆಲಸ ಮಾಡಿ ಕಣ್ಣಿನ ಪರೀಕ್ಷೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೆ ಗ್ಲಾಕೋಮಾ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಅಂಧತ್ವ ನಿಯತ್ರಣಾಧಿಕಾರಿ ಡಾ.ಬೃಂದಾ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಎಚ್.ಬಸವನಗೌಡಪ್ಪ, ವೈದ್ಯಕೀಯ ನಿರ್ದೇಶಕ ಡಾ.ಸಿ.ಪಿ.ಮಧು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.