ಮೈಸೂರು: ವೆನೆಜುವೆಲಾದ ಮೇಲೆ ಅಮೆರಿಕ ಮಿಲಿಟರಿ ದಾಳಿ ನಡೆಸಿ ಅಧ್ಯಕ್ಷರನ್ನು ಬಂಧಿಸಿರುವುದನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ (ಎಸ್‌ಯುಸಿಐ) ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಪುರಭವನ ಆವರಣದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಯಿತು.
ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಮಾದಕ ದ್ರವ್ಯಗಳ ಕಳ್ಳಸಾಗಣೆ ಮಾಡಿಸುತ್ತಿದ್ದಾರೆ ಎಂದು ಅಮೆರಿಕ ಮಾಡಿರುವ ಆರೋಪ ಹಾಸ್ಯಾಸ್ಪದ. ಅಮೆರಿಕ ಈ ಹಿಂದೆ ಇರಾಕಿನಲ್ಲಿ ಸಮೂಹ ವಿನಾಶದ ಅಸ್ತ್ರಗಳು ಇವೆ ಎಂದು ಆರೋಪಿಸಿ ವರ್ಷಗಟ್ಟಲೆ ಯುದ್ಧ ನಡೆಸಿ ಅಧ್ಯಕ್ಷ ಸದ್ದಾಂ ಹುಸೇನ್ ಅವರನ್ನು ಸೆರೆ ಹಿಡಿದು ಹತ್ಯೆ ಮಾಡಿತ್ತು. ಆದರೆ, ಇದುವರೆಗೂ ಅಮೆರಿಕ ಆರೋಪಿಸಿದ ಶಸ್ತ್ರಾಸ್ತ್ರಗಳು ಪತ್ತೆಯಾಗಲಿಲ್ಲ. ಅಲ್ಲಿ ಪ್ರಜಾತಂತ್ರದ ಬದಲಿಗೆ ಮತ್ತಷ್ಟು ಅರಾಜಕತೆ, ಇಸ್ಲಾಮಿಕ್ ಮತೀಯವಾದ ಬೆಳೆದಿದೆ ಎಂದು ಎಸ್‌ಯುಸಿಐಸಿ ಜಿಲ್ಲಾ ಕಾರ್ಯದರ್ಶಿ ಬಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ವಿರುದ್ಧ ಯುದ್ಧ ಸಾರಿ, ಈಗ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸಿರಿಯಾದ ಚುನಾಯಿತ ಸರ್ಕಾರ ಬೀಳಿಸಿ ಐಸಿಸ್ ಕೈಗೆ ಕೊಡಲಾಗಿದೆ. ಇಂತಹ ಅಮೆರಿಕ ಇದೀಗ ವೆನೆಜುವೆಲಾದಲ್ಲಿ ಪ್ರಜಾತಾಂತ್ರಿಕ ಸರ್ಕಾರ ತರುವುದೆಂದು ಹೇಳಿದರೆ ನಂಬಲು ಅಸಾಧ್ಯ. ವಾಸ್ತವದಲ್ಲಿ ವೆನೆಜುವೆಲಾ ಜಗತ್ತಿನಲ್ಲೇ ಅತಿಹೆಚ್ಚು ಕಚ್ಚಾತೈಲದ ನಿಕ್ಷೇಪ ಹೊಂದಿದೆ. ಅಲ್ಲಿ ಎಲ್ಲ ತೈಲೋದ್ಯಮವನ್ನು ರಾಷ್ಟ್ರೀಕರಣಗೊಳಿಸಿದ ಹಿನ್ನೆಲೆಯಲ್ಲಿ ಅಮೆರಿಕ ವೆನೆಜುವೆಲದ ಮೇಲೆ ಕತ್ತಿ ಮಸೆಯುತ್ತಿದೆ. ಹೀಗಾಗಿ ಅಮೆರಿಕದ ಆಕ್ರಮಣದ ವಿರುದ್ಧ ಜಗತ್ತಿನ ಶಾಂತಿಪ್ರಿಯ ಜನತೆ ತೀವ್ರವಾಗಿ ಹೋರಾಡಬೇಕು. ವೆನೆಜುವೆಲಾದ ಅಧ್ಯಕ್ಷರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್‌ಯುಸಿಐಸಿ ಪದಾಧಿಕಾರಿಗಳಾದ ಎಂ.ಉಮಾದೇವಿ, ಯಶೋಧರ್, ಪಿ.ಎಸ್.ಸಂಧ್ಯಾ, ಹರೀಶ್, ಸುಮಾ, ಮುದ್ದುಕೃಷ್ಣ, ಆಸಿಯಾ ಬೇಗಂ, ನೀತುಶ್ರೀ, ಪುಷ್ಪಾ ಹಾಗೂ ಇತರರು ಇದ್ದರು.