ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ

 ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಮಂಗಳವಾರ ಮೈಸೂರಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಮಂಗಳವಾರ ಮೈಸೂರಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Published on
ಮೈಸೂರು: ನಗರಕ್ಕೆ ಆಗಮಿಸಿದ ಬಾಂಗ್ಲಾದೇಶದ ವಲಸಿಗರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಪೊಲೀಸರು ಗೃಹ ಸಚಿವರನ್ನು ಓಲೈಸುವ ಸಲುವಾಗಿ ಹಿಂದೂಪರ ಸಂಘಟನೆ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅಕ್ರಮ ಬಾಂಗ್ಲಾ ವಲಸಿಗರು ಮೈಸೂರಿಗೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದೇ ಹಿಂದೂ ಪರ ಸಂಘಟನೆ ಕಾರ್ಯಕರ್ತರು. ಈ ಮೂಲಕ ಪೊಲೀಸರ ಕಾರ್ಯಾಚರಣೆಗೆ ಹಿಂದೂ ಸಂಘಟನೆ ಕಾರ್ಯಕರ್ತರು ನೆರವು ನೀಡಿದ್ದಾರೆ. ಆದರೆ, ಪೊಲೀಸರು ಅಕ್ರಮ ವಲಸಿಗರ ಮೇಲೆ ಕ್ರಮ ತೆಗೆದುಕೊಳ್ಳದೇ ನಮ್ಮ 6 ಮಂದಿ ಕಾರ್ಯಕರ್ತರ ಮೇಲೆ ದೂರು ದಾಖಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರದಲ್ಲಿ ನ್ಯಾಯಸಮ್ಮತ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ. ಅಕ್ರಮವಾಗಿ ನಮ್ಮ ದೇಶಕ್ಕೆ ಯಾರೇ ಬಂದರೂ ಅವರನ್ನು ತಡೆಯೋದು ಪೊಲೀಸರ ಕರ್ತವ್ಯ. ಆದರೆ, ವಲಸಿಗರ ಮೇಲೆ ಕ್ರಮ ತೆಗೆದುಕೊಳ್ಳೋದು ಬಿಟ್ಟು ನಮ್ಮವರ ಮೇಲೇ ಕ್ರಮ ಜರುಗಿಸುವುದು ಸರಿಯಲ್ಲ. ರೈಲು ನಿಲ್ದಾಣಗಳಲ್ಲಿ ಪೊಲೀಸರು ಹೆಚ್ಚಿನ ತಪಾಸಣೆ ಮಾಡಬೇಕು. ಅಕ್ರಮ ವಲಸಿಗರು ಬರದಂತೆ ತಡೆಯಬೇಕು ಎಂದು ಆಗ್ರಹಿಸಿದರು.
ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತದ ಅಧ್ಯಕ್ಷ ಮಹೇಶ್ ಮಾತನಾಡಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುಮ್ಮಕ್ಕಿನಿಂದಲೇ ಹಿಂದೂಪರ ಸಂಘಟನೆ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೂರು ಬೋಗಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಬರುತ್ತಾರೆ ಎಂಬ ಮಾಹಿತಿ ಇತ್ತು. ಪೊಲೀಸರಿಗೆ ಈ ವಿಚಾರ ತಿಳಿಸಿ ಹಿಂದೂ ಕಾರ್ಯಕರ್ತರು ಸಹಕಾರಕ್ಕೆ ನಿಂತರು. ಸಹಕಾರ ಕೊಟ್ಟವರ ಮೇಲೆಯೇ ಪೊಲೀಸರು ಎಫ್‌ಐಆರ್ ಹಾಕಿದರು. ಆಧಾರ್ ಕಾರ್ಡ್ ಮಾತ್ರ ಪರಿಶೀಲನೆ ಮಾಡೋದು ಪೊಲೀಸರ ಕರ್ತವ್ಯ ಅಲ್ಲ. ಶಂಕಿತರ ಬಗ್ಗೆ ಎಲ್ಲ ಆಯಾಮದಲ್ಲೂ ತನಿಖೆ ಮಾಡಬೇಕಿತ್ತು. ಹಿಂದೂ ಕಾರ್ಯಕರ್ತರ ಹೋರಾಟಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇತ್ತು. ಆದರೆ, ನಮ್ಮ ವಿರುದ್ಧವೇ ಎಫ್‌ಐಆರ್ ಮಾಡಿದ್ದಾರೆ, ಇದಕ್ಕೆ ನಾವು ಹೆದರೋದಿಲ್ಲ. ಕಾನೂನಿನ ಅಡಿಯಲ್ಲೇ ಇನ್ನು ಮುಂದೆ ಅಕ್ರಮ ವಲಸಿಗರನ್ನು ಹಿಮ್ಮೆಟ್ಟಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಬಿಜೆಪಿ ಮುಖಂಡರಾದ ಫಣೀಶ್, ವಸಂತ್ ಕುಮಾರ್, ಗಿರಿಧರ್, ಪ್ರಭಾಕರ್ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net