ಸರ್ಕಾರಿ ಶಾಲೆಗಳ ಉಳಿವಿಗಾಗಿ ಪ್ರತಿಭಟನೆ

ಎಚ್.ಡಿ.ಕೋಟೆ ತಾಲೂಕು ಕಚೇರಿ ಮುಂಭಾಗ ಎಐಡಿಎಸ್‌ಒ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶದಲ್ಲಿ ಉಪ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಎಚ್.ಡಿ.ಕೋಟೆ ತಾಲೂಕು ಕಚೇರಿ ಮುಂಭಾಗ ಎಐಡಿಎಸ್‌ಒ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶದಲ್ಲಿ ಉಪ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಪಾಲಕರು ಭಾಗಿ
ಎಚ್.ಡಿ.ಕೋಟೆ: ಕೆಪಿಎಸ್- ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ 40ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದನ್ನು ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಜೇಷನ್ (ಎಐಡಿಎಸ್‌ಒ) ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಮಾವೇಶದಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ 300ಕ್ಕೂ ಹೆಚ್ಚು ಪಾಲಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಸಮಾವೇಶದಲ್ಲಿ ಎಐಡಿಎಸ್‌ಒ ಉಪಾಧ್ಯಕ್ಷೆ ಅಪೂರ್ವ ಮಾತನಾಡಿ, 2025ರ ಅಕ್ಟೋಬರ್ 15 ಹಾಗೂ ಡಿಸೆಂಬರ್ 30ರಂದು ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಆದೇಶಗಳ ಪ್ರಕಾರ, ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗೆ ಒಂದು ಸರ್ಕಾರಿ ಶಾಲೆಯಂತೆ, ಕೇವಲ 6,000 ಶಾಲೆಗಳು ಉಳಿದು 40,000 ಸರ್ಕಾರಿ ಶಾಲೆಗಳು ನಶಿಸಿ ಹೋಗಲಿವೆ ಎಂದರು.
ಕೆಪಿಎಸ್- ಮ್ಯಾಗ್ನೆಟ್ ಶಾಲೆಗಳ ಐದು ಕಿಲೋಮೀಟರ್ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಇದಾಗಿದೆ. 6ನೇ ತರಗತಿಯಿಂದ ಮಕ್ಕಳಿಗೆ ಮಣ್ಣಿನ ಹಣತೆ ಮಾಡುವ, ಅಡಕೆ ಸುಲಿಯುವ ಕೌಶಲಗಳನ್ನು ಕಲಿಸುವುದಾಗಿ ಶಿಕ್ಷಣ ಮಂತ್ರಿಗಳು ಬಹಿರಂಗಪಡಿಸಿದ್ದಾರೆ. ಕಾರ್ಮಿಕರ ಮಕ್ಕಳನ್ನು, ಕಾರ್ಮಿಕರನ್ನಾಗಿಯೇ ಉಳಿಸುವ ಕುತಂತ್ರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಎಸ್- ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುತ್ತಿದೆ. ಇದೀಗ ಸರ್ಕಾರ ಪಿ.ಎಂ.ಶ್ರೀ ಯೋಜನೆಯ ಹೆಸರಿನಲ್ಲಿ ಪಿಯು ಕಾಲೇಜುಗಳನ್ನು ಕೂಡ ವಿಲೀನಗೊಳಿಸಲಾಗುತ್ತಿದೆ. ಶಿಕ್ಷಣಕ್ಕೆ 8 ಗ್ಯಾರಂಟಿಗಳನ್ನು ನೀಡಿ ದೇಶದಲ್ಲೇ ಮಾದರಿ ಶಾಲಾ ವ್ಯವಸ್ಥೆ ನಿರ್ಮಿಸುತ್ತೇವೆ ಎಂದು ಸರ್ಕಾರವು ಹೇಳುತ್ತಿದೆ. ಆದರೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಂಶವನ್ನು ನಯವಾಗಿ ತಳ್ಳಿ ಹಾಕುತ್ತಾ ಗ್ಯಾರಂಟಿಗಳ ಮುಖವಾಡದಲ್ಲಿ ನಾಡಿನ ಜನತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಮೋಸ ಮಾಡುತ್ತಿದೆ ಎಂದರು.
ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮವನ್ನು ಆರಂಭಿಸಲು ರಾಜ್ಯ ಸರ್ಕಾರವು ಆದೇಶಿಸಿದೆ. ಈ ಮೂಲಕ ಕನ್ನಡ ಶಾಲೆಗಳನ್ನು ಮುಚ್ಚಲು ಸರ್ಕಾರ ತಯಾರಿ ಮಾಡುತ್ತಿದೆ ಎಂದು ದೂರಿದರು.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಅನೇಕ ಹಳ್ಳಿಗಳ ಶಾಲೆಗಳನ್ನು ವಿಲೀನಗೊಳಿಸುವ ಅಧಿಕೃತ ಪಟ್ಟಿ ಈಗಾಗಲೇ ಹೊರಬಿದ್ದಿದ್ದು, ಗ್ರಾಮಸ್ಥರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಚನ್ನಪಟ್ಟಣದ ಪಾದರಹಳ್ಳಿ ಕೆಪಿಎಸ್- ಮ್ಯಾಗ್ನೆಟ್ ಶಾಲೆಯನ್ನು ಆಯ್ಕೆ ಮಾಡಿ ಸುತ್ತಲಿನ ಹಳ್ಳಿಗಳ ಪಾಲಕರ ಹತ್ತಿರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಹೋಗಲು ಒಪ್ಪಿಗೆ ಇದೆ ಎಂಬ ಮುಚ್ಚಳಿಕೆ ಪತ್ರಕ್ಕೆ ಮೋಸದಿಂದ ಸಹಿ ಹಾಕಿಸಿಕೊಳ್ಳಲಾಗಿದೆ. ರಾಜ್ಯ ಸರ್ಕಾರವು ತನ್ನ ಹಠಮಾರಿ ಧೋರಣೆಯನ್ನು ಈ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು.
ರಾಜ್ಯ ರೈತ ಸಂಘಟನೆಯ ತಾಲೂಕು ಅಧ್ಯಕ್ಷ ಪಳನಿಸ್ವಾಮಿ ಮಾತನಾಡಿ, ಸರ್ಕಾರ ಕಾಲಕ್ರಮೇಣವಾಗಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆ ಮಾಡಿ, ಸರ್ಕಾರಿ ಶಾಲೆಗಳನ್ನು ನಿರ್ನಾಮ ಮಾಡಲು ಟೊಂಕಕಟ್ಟಿ ನಿಂತಿದೆ. ಪ್ರಥಮವಾಗಿ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕು. ನಮ್ಮ ರೈತ ಸಂಘಟನೆಯಿಂದ ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ತೀವ್ರ ವಿರೋಧವಿದೆ ಎಂದರು.
ನಿವೃತ್ತ ಉಪನ್ಯಾಸಕಿ ಲತಾ ಮೈಸೂರು ಮಾತನಾಡಿ, ನಾನು ಕನ್ನಡ ಶಾಲೆಯಲ್ಲಿ ಓದಿ, ಕನ್ನಡ ಪ್ರಾಧ್ಯಾಪಕಿ ಆಗಿ ನಿವೃತ್ತಿಯಾಗಿದ್ದಾನೆ. ಆಡಳಿತಶಾಹಿಗಳು ದುಡಿಯುವ ಜನಗಳಿಂದ ಶಿಕ್ಷಣ ಕಸಿದುಕೊಂಡು ಜೀತದಾಳುಗಳನ್ನು ಸೃಷ್ಟಿ ಮಾಡುವ ಹುನ್ನಾರ ಮಾಡ್ತಿದೆ. ಸ್ವಾತಂತ್ರ್ಯ ಚಳವಳಿಯಷ್ಟೇ ಮುಖ್ಯವಾದ ಸರ್ಕಾರಿ ಶಾಲೆ ಉಳಿಸಿ ಚಳವಳಿ ನಮ್ಮ ಮುಂದೆ ಬಂದಿದೆ. ನಾವು ಅದನ್ನು ನಿರ್ವಹಿಸಬೇಕು ಎಂದರು.
ಸಮಾವೇಶದಲ್ಲಿ ರೈತ ಸಂಘಟನೆಯ ರಾಜ್ಯ ಮುಖಂಡ ಎಚ್.ಪಿ.ಶಿವಪ್ರಕಾಶ್, ಕಾರ್ಮಿಕ ಸಂಘಟನೆಯ ಮುಖಂಡ ಹರೀಶ್, ಮಹಿಳಾ ಹೋರಾಟಗಾರ್ತಿ ಸೀಮಾ, ಆದಿವಾಸಿ ಸಂಘಟನೆಯ ಸುನಿಲ್, ಯುವಜನ ಸಂಘಟನೆಯ ಸುಮಾ ಮಾತನಾಡಿದರು.
ನಂತರ ಉಪತಹಸೀಲ್ದಾರ್ ಮಹೇಶ್ ಹಾಗೂ ಶಿಕ್ಷಣ ಇಲಾಖೆಯ ನಂಜರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಮಾವೇಶದಲ್ಲಿ ಜಿಲ್ಲಾ ಕಾರ್ಯದರ್ಶಿ ನಿತಿನ್, ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಚಂದನ, ಚಂದ್ರಿಕಾ, ಅಭಿಷೇಕ್, ದೀಕ್ಷಿತ, ಪೂರ್ಣಿಮಾ, ನೀತುಶ್ರೀ, ಬಸವರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net