ಮಾಜಿ ಸಂಸದ ಪ್ರತಾಪ್ ಸಿಂಹ ಬಂಧನಕ್ಕೆ ಆಗ್ರಹಿಸಿ ದಲಿತ ಮಹಾ ಸಭಾದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಎಸ್.ರಾಜೇಶ್, ಕುರುಬಾರಹಳ್ಳಿ ಪ್ರಕಾಶ್, ರಾಜಶೇಖರ್ ಇನ್ನಿತರರಿದ್ದರು.
ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದನ್ನು ಸಹಿಸದೆ ಪ್ರತಾಪ್ ಸಿಂಹ ಆಧಾರ ರಹಿತ ಆರೋಪ
*
ವಿಜಯವಾಣಿ ಸುದ್ದಿಜಾಲ ಮೈಸೂರು
ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ದಲಿತ ಮಹಾ ಸಭಾದಿಂದ ಪುರಭವನ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಯತೀಂದ್ರ ಅವರ ವರುಣ ಕ್ಷೇತ್ರ ಸೇರಿದಂತೆ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದನ್ನು ಸಹಿಸದೆ ಪ್ರತಾಪ್ ಸಿಂಹ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಯತೀಂದ್ರ ಅವರು ವರ್ಗಾವಣೆ, ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಸಾಕ್ಷ್ಯಾಧಾರ ನೀಡಲಿ. ಈ ರೀತಿ ಸುಳ್ಳು ಆರೋಪ ಮಾಡುವ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಜಿ ಸಿಎಂ ಯಡಿಯೂರಪ್ಪ ಅವರ ಅವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ವರ್ಗಾವಣೆ ದಂಧೆಯಲ್ಲಿ ತೊಡಗಿ ಕೋಟ್ಯಂತರ ರೂ. ಹಣ ಮಾಡಿರುವುದನ್ನು ಪ್ರತಾಪ್ ಸಿಂಹ ಮರೆತಂತಿದೆ ಎಂದು ಕಿಡಿ ಕಾರಿದರು.
ಯತೀಂದ್ರ ಕ್ಷೇತ್ರದ ಜನತೆಯ ವಿಶ್ವಾಸ, ಪ್ರೀತಿ ಗಳಿಸಿ ಜನಪ್ರಿಯರಾಗುತ್ತಿರುವುದನ್ನು ಸಹಿಸಿಕೊಳ್ಳದೆ, ಭವಿಷ್ಯದ ಹಿಂದುಳಿದ ವರ್ಗದ ಜನಪ್ರಿಯ ನಾಯಕರಾಗುತ್ತಾರೆಂದು ಅಸಮಾಧಾನಗೊಂಡು, ಈ ರೀತಿಯ ಆಧಾರರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೋಷಿತ ಸಮುದಾಯದ ನಾಯಕನನ್ನು ತೇಜೋವಧೆ ಮಾಡುವ, ಅವರ ಆತ್ಮಸ್ಥೆರ್ಯ ಕುಗ್ಗಿಸುವ ಹೇಳಿಕೆ ನೀಡುತ್ತಿರುವ ಪ್ರತಾಪ್ ಸಿಂಹ ಅವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ದಲಿತ ಮಹಾಸಭಾ ಅಧ್ಯಕ್ಷ ಎಸ್.ರಾಜೇಶ್, ಮುಖಂಡರಾದ ಕುರುಬಾರಹಳ್ಳಿ ಪ್ರಕಾಶ್, ರಾಜಶೇಖರ್, ಸುನಿಲ್ ನಾರಾಯಣ, ಸೈಯ್ಯದ್, ರವಿ ನಾಯಕ್, ಶಿವಶಂಕರಮೂರ್ತಿ, ರಹೀಮ್, ಲೋಕೇಶ್‌ಕುಮಾರ್ ಮಾದಾಪುರ, ರವಿನಂದನ್ ಇನ್ನಿತರರಿದ್ದರು.