ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಆಗ್ರಹಿಸಿ ಎಐಡಿಎಸ್‌ಒಯಿಂದ ಮೈಸೂರಲ್ಲಿ ಪ್ರತಿಭಟನೆ ನಡೆಸಲಾಯಿತು. ಸುಭಾಷ್ ಬೆಟ್ಟದ ಕೊಪ್ಪ, ಚಂದ್ರಕಲಾ, ಸ್ವಾತಿ, ನಿತಿನ್, ಚಂದನ, ಚಂದ್ರಿಕಾ, ಹೇಮಾ, ದಿಶಾ, ಅಂಜಲಿ, ನಂದೀಶ್, ದೀಕ್ಷಿತಾ ಇದ್ದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಕಸ್ಮಿಕವಲ್ಲ, ಆಡಳಿತ ವೈಫಲ್ಯ
ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಮೈಸೂರು: ವೈದ್ಯಕೀಯ ಕೋರ್ಸ್ ಪ್ರವೇಶ ಪರೀಕ್ಷೆಯಾದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ರಾಮಸ್ವಾಮಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಒಂದು ಆಕಸ್ಮಿಕ ಅವಘಡವಲ್ಲ. ಇದು ಆಡಳಿತ ವೈಫಲ್ಯ ಕಿರೀಟಕ್ಕೆ ಮತ್ತೊಂದು ಗರಿ. 2022, 2024ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಹಿಂದಿನ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಬಿಹಾರದ ಕೆಲವರನ್ನು ಬಂಧಿಸಿದ್ದರೂ ಸೋರಿಕೆ ಮೂಲವನ್ನು ಹಿಡಿಯಲು ವ್ಯವಸ್ಥೆ ವಿಫಲವಾಯಿತು.
ಇದಕ್ಕೆ ಈ ವರ್ಷದ ಸೋರಿಕೆಯೇ ಪುರಾವೆ. ಪ್ರತಿ ವರ್ಷವೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದರೂ ಕ್ರಮ ವಹಿಸಿದೆ ಲಕ್ಷಾಂತರ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ. ಶಿಕ್ಷಣ ಸಚಿವರಿಂದ ಹಿಡಿದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಯಾರೊಬ್ಬರೂ ಇದರ ಜವಾಬ್ದಾರಿ ಹೊರಲು ಸಿದ್ಧರಿಲ್ಲ. ಇದುವೇ ಸಮಸ್ಯೆಯ ಅಗಾಧತೆಯನ್ನು ಎತ್ತಿ ತೋರಿಸುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದ ಕೊಪ್ಪ ಮಾತನಾಡಿ, ನೀಟ್ ಕೋಚಿಂಗ್ ಇಂಡಸ್ಟ್ರಿಯ ವಾರ್ಷಿಕ ಆದಾಯ 1 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿದೆ. ಪ್ರತಿ ವರ್ಷ ನೀಟ್ ಪರೀಕ್ಷೆಗಾಗಿ ವಿದ್ಯಾರ್ಥಿಗಳ ಕುಟುಂಬಗಳು ಸುಮಾರು 1.32 ಲಕ್ಷ ಕೋಟಿ ರೂ.ಖರ್ಚು ಮಾಡುತ್ತವೆ. ಇದು ಕೇಂದ್ರ ಸರ್ಕಾರದ ಸಂಪೂರ್ಣ ಶಿಕ್ಷಣ ಬಜೆಟ್‌ಗೆ 1.4 ಲಕ್ಷ ಕೋಟಿ ರೂಪಾಯಿಗೆ ಬಹುತೇಕ ಸಮನಾಗಿದೆ. ಕೋಚಿಂಗ್ ಮಾಫಿಯಾದ ಕಬಂಧ ಬಾಹುಗಳಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ನಲುಗುತ್ತಿದೆ ಎಂದು ಕಿಡಿಕಾರಿದರು.
ಕಳೆದ 10 ವರ್ಷಗಳಲ್ಲಿ 1.3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇದೇ ಅವಧಿಯಲ್ಲಿ 1.5 ಲಕ್ಷ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಆತ್ಮಹತ್ಯೆಗಿಂತಲೂ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾಗಿದೆ. ಈ ವರ್ಷ ನೀಟ್ ಪರೀಕ್ಷೆ ರದ್ದಾದ ಮೇಲೆ ಕಳೆದ 48 ಗಂಟೆಗಳಲ್ಲಿ 6, ಒಟ್ಟಾರೆ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿತ್ಯ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿದೆ. ಇದು ವ್ಯವಸ್ಥೆ ಮಾಡಿರುವ ಕಗ್ಗೊಲೆ. ಇದು ವ್ಯವಸ್ಥೆಯ ವೈಫಲ್ಯವಲ್ಲ, ವ್ಯವಸ್ಥಿತವಾದ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ಇಂದು ಶಿಕ್ಷಣ ಮಾರಾಟದ ವಸ್ತುವಾಗಿದೆ. ಬಂಡವಾಳ ಹೂಡಿ ಲಾಭ ಮಾಡುವಂತಹ ಲಾಭದಾಯಕ ಕ್ಷೇತ್ರವಾಗಿ ಮಾರ್ಪಾಡಾಗಿದೆ. ಒಂದು ರಾಷ್ಟ್ರ ಒಂದು ಪರೀಕ್ಷೆಯ ಮುಖವಾಡದ ಹಿಂದೆ ವೈದ್ಯಕೀಯ ಶಿಕ್ಷಣವನ್ನು ಜಾಗತಿಕ ಸರಕಾಗಿ ಮಾಡಿ ಲಕ್ಷಾಂತರ ಬಡ, ಗ್ರಾಮೀಣ ಮಕ್ಕಳು ವೈದ್ಯರಾಗುವ ಸಾಧ್ಯತೆಯನ್ನು ಕಿತ್ತುಕೊಂಡಿದೆ. ಶಿಕ್ಷಣದ ವ್ಯಾಪಾರೀಕರಣ, ಕಾರ್ಪೊರೇಟೀಕರಣದ ವಿರುದ್ಧ ಸಮರ ಸಾರಬೇಕಾದ ಅವಶ್ಯಕತೆ ಇದೆ ಎಂದು ಗುಡುಗಿದರು.
ಬೇಡಿಕೆ ಏನು..?
ಎನ್‌ಟಿಎ ರದ್ದುಪಡಿಸಿ, ಹಗರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ, ಜಿಲ್ಲಾ ಕಾರ್ಯದರ್ಶಿ ನಿತಿನ್, ಪದಾಧಿಕಾರಿಗಳಾದ ಚಂದನ, ಚಂದ್ರಿಕಾ, ಹೇಮಾ, ದಿಶಾ, ಅಂಜಲಿ, ನಂದೀಶ್, ದೀಕ್ಷಿತಾ, ವಿದ್ಯಾರ್ಥಿಗಳು ಭಾಗವಹಿಸಿದ್ದರು