ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಕ್ರಾರ್ಡ್ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಕ್ರಾರ್ಡ್ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
Published on
ಮೈಸೂರು: ರಾಷ್ಟ್ರೀಯ ಶೈಕ್ಷಣಿಕ ಠೇವಣಿ ಕೋಶ ಹಾಗೂ ಎಸ್‌ಎಸ್‌ಪಿ ತಾಂತ್ರಿಕ ದೋಷದಿಂದಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳ ಫಲಿತಾಂಶ, ವಿದ್ಯಾರ್ಥಿ ವೇತನ ಪಡೆಯಲು ಪರದಾಡುವಂತಾಗಿದೆ ಎಂದು ಆರೋಪಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಕ್ರಾಫರ್ಡ್ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
ಮೈಸೂರು ವಿವಿಯಲ್ಲಿ ಓದುತ್ತಿರುವ ಪ್ರಸ್ತುತ ಸ್ನಾತಕೋತ್ತರ ವಿದ್ಯಾರ್ಥಿಗಳ ಹಿಂದಿನ ವರ್ಷದ ಅಂಕ ಪಟ್ಟಿಗಳನ್ನು ರಾಜ್ಯ ವಿದ್ಯಾರ್ಥಿಗಳ ವೇತನ ತಂತ್ರಾಂಶಕ್ಕೆ ಅಪ್‌ಡೇಟ್ ಮಾಡುವುದರಲ್ಲಿನ ಗೊಂದಲ ಬಗೆಹರಿಸುವಂತೆ ಒತ್ತಾಯಿಸಿದರು.
ಮೈಸೂರು ವಿವಿಯ ಎಂಬಿಎ, ಎಂಎಸ್‌ಸಿ, ಎಂಸಿಎ ಹಾಗೂ ಎಂಎ ಸ್ನಾತಕೋತ್ತರ ವಿದ್ಯಾರ್ಥಿಗಳ ಹಿಂದಿನ ವರ್ಷದ ಅಂಕಗಳನ್ನು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶಕ್ಕೆ ಮಾಹಿತಿ ನೀಡದ ಹಾಗೂ ರಾಷ್ಟ್ರೀಯ ಶೈಕ್ಷಣಿಕ ಠೇವಣಿ ಕೋಶದ ತಾಂತ್ರಿಕ ಗೊಂದಲದಿಂದ ಹಲವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆತಿಲ್ಲ. ಈ ಕಾರಣದಿಂದ ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿಂದ ಆತಂಕದಲ್ಲಿದ್ದು, ತಾವು ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಲ್ಲಿ ವಿಚಾರಿಸಿದ್ದು, ಇದು ವಿವಿಗೆ ಸಂಬಂಧಿಸಿದ್ದು ಎಂದು ಹೇಳುತ್ತಾರೆ. ಮೈಸೂರು ವಿವಿ ಇದು ಕಾಲೇಜಿನಲ್ಲಿ ಉಂಟಾಗಿರುವ ಸಮಸ್ಯೆ ಎಂದು ಹೇಳುತ್ತ ವಿದ್ಯಾರ್ಥಿಗಳನ್ನು ಅಲ್ಲಿಂದಿಲ್ಲಿಗೆ ಅಲೆಯುವಂತೆ ಮಾಡುತ್ತಿರುವುದು ಅಮಾನವೀಯವಾಗಿದೆ ಎಂದು ಕಿಡಿಕಾರಿದರು.
ಹಿಂದಿನ ವರ್ಷದ ಅಂಕಗಳು ಅಪ್‌ಡೇಟ್ ಆಗದಿರುವುದಕ್ಕೆ ಮೂಲ ಕಾರಣವನ್ನು ಮೈಸೂರು ವಿವಿ ಮತ್ತು ರಾಜ್ಯ ಸರ್ಕಾರ ಪತ್ತೆಹಚ್ಚಿ, ಕೂಡಲೇ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಮೈಸೂರು ವಿವಿ ಮತ್ತು ಕಾಲೇಜುಗಳ ಎದುರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಕಾರ್ಯದರ್ಶಿ ನಿತಿನ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಅಭಿಷೇಕ್, ವಿದ್ಯಾರ್ಥಿಗಳಾದ ಹೇಮಂತ್, ಮಹೇಶ್, ಭೂಮಿಕಾ, ಹರ್ಷಿತಾ, ವೀರೇಂದ್ರ, ಲೋಹಿತ, ಪಲ್ಲವಿ ಹಲವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net