ಎಸ್‌ಸಿ-ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

 ಎಸ್‌ಸಿ-ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಸಿಪಿಐ(ಎಂ)ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಜಗದೀಶ್ ಸೂರ್ಯ,  ಕೆ.ಬಸವರಾಜ್, ಜಿ.ಜಯರಾಮ್, ಎನ್.ವಿಜಯ್ ಕುಮಾರ್ ಇನ್ನಿತರರಿದ್ದರು.
ಎಸ್‌ಸಿ-ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಸಿಪಿಐ(ಎಂ)ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಜಗದೀಶ್ ಸೂರ್ಯ, ಕೆ.ಬಸವರಾಜ್, ಜಿ.ಜಯರಾಮ್, ಎನ್.ವಿಜಯ್ ಕುಮಾರ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಪಿಐ(ಎಂ)ಕಾರ್ಯಕರ್ತರಿಂದ ಪ್ರತಿಭಟನೆ
  • ಸಂಸದ ಯದುವೀರ್ ಕಚೇರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಕೆ
ಮೈಸೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಳ ಜಾರಿಗೆ ಕೇಂದ್ರ ಸರ್ಕಾರವು ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಕಾರ್ಯಕರ್ತರು ನಗರದ ಗನ್‌ಹೌಸ್ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಒಳಮೀಸಲಾತಿ ಜಾರಿಗೊಳಿಸಬೇಕು. ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳದ ತೀರ್ಮಾನ ಅಂಗೀಕರಿಸಿ ಸಂವಿಧಾನದ 9ನೇ ಶೆಡ್ಯೂಲ್‌ಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಚೇರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಮೀಸಲಾತಿ ಪ್ರಮಾಣ ಹೆಚ್ಚಿಸುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಬೇಕು. ಇದನ್ನು ಸಂವಿಧಾನದ ಶೆಡ್ಯೂಲ್ 9ರಲ್ಲಿ ಸೇರಿಸಿ ಕೇಂದ್ರದಲ್ಲಿ ಇರುವಂತೆ ಶೇ.17 ಮತ್ತು ಶೇ.7ರ ಜಾರಿಗೆ ಅನುವು ಮಾಡಿಕೊಡಬೇಕು. ಇದಕ್ಕಾಗಿ ರಾಜ್ಯದ ಸಂಸದರು ಒತ್ತಡದ ಪ್ರಯತ್ನ ನಡೆಸಬೇಕು. ಶೆಡ್ಯೂಲ್ 9ಕ್ಕೆ ಸೇರ್ಪಡೆ ಮಾಡದಿರುವುದು ಈಗಿನ ಸಮಸ್ಯೆಯ ಒಂದು ಪ್ರಧಾನ ಅಂಶವಾಗಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
ನಿರುದ್ಯೋಗ ಸಮಸ್ಯೆಯ ಗಂಭೀರತೆ ಅರ್ಥ ಮಾಡಿಕೊಂಡು ಕೇಂದ್ರ ಸರ್ಕಾರವು, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಬ್ಯಾಕ್‌ಲಾಗ್ ಹುದ್ದೆಗಳನ್ನು ಸಾಮಾನ್ಯ ಗುಂಪಿಗೆ ವರ್ಗಾಯಿಸಬಾರದು. ಹಾಗೆಯೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸುಮಾರು 3 ಲಕ್ಷ ಉದ್ಯೋಗ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು, ಸಂಸ್ಥೆಗಳಲ್ಲಿ ಕಾಯಂ ನೇಮಕಾತಿಯೇ ಸ್ಥಗಿತಗೊಂಡಂತಾಗಿದೆ ಅಥವಾ ಇಲ್ಲದಂತಾಗಿದೆ. ಇದರಿಂದ ವಾಸ್ತವವಾಗಿ ಮೀಸಲಾತಿಯೇ ಇಲ್ಲದಂತಾಗಿದೆ. ಆದ್ದರಿಂದ ಎಲ್ಲ ಸಾರ್ವಜನಿಕ ರಂಗಗಳಲ್ಲೂ ಕಾಯಂ ಉದ್ಯೋಗ ತುಂಬಬೇಕು. ಮೀಸಲಾತಿಯನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಉದಾರೀಕರಣ ಮತ್ತು ಖಾಸಗೀಕರಣದಿಂದ ಪ್ರಧಾನವಾಗಿ ಉದ್ಯೋಗಗಳ ಸೃಷ್ಟಿಯು ಖಾಸಗಿ ರಂಗದಲ್ಲೇ ಹೆಚ್ಚಾಗಿ ಇರುವುದು. ಆದರೆ ಇಲ್ಲಿ ಮೀಸಲಾತಿ ನೀತಿಯೇ ಇಲ್ಲವಾಗಿದೆ. ಆದ್ದರಿಂದ ಖಾಸಗಿ ರಂಗದಲ್ಲೂ ಮೀಸಲಾತಿ ನೀತಿ ಜಾರಿಗೊಳಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಸಮುದಾಯಗಳ ಪ್ರಗತಿ, ಅಭಿವೃದ್ಧಿಗೆ ಸಹಾಯಕವಾಗಿರುವ ಉಪಯೋಜನೆಗಳಿಗೆ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ ಮೊತ್ತ ಕಡಿಮೆಯಾಗುತ್ತಿದೆ. ಜನಸಂಖ್ಯೆ ಅನುಗುಣವಾಗಿ ಉಪ ಯೋಜನೆಗಳಿಗೆ ಹಣ ಹಂಚಿಕೆಗೆ ಕ್ರಮ ವಹಿಸಬೇಕು. ಜತೆಗೆ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಉಪಯೋಜನೆಗಳಿಗಾಗಿ ಭಾರತ ಸರ್ಕಾರ ಕಾಯ್ದೆಯೊಂದನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ನೇಮಕಾತಿ ಪ್ರಕ್ರಿಯೆಯ ರೋಸ್ಟರ್ ನಿಯಮದಲ್ಲಿ ಎಡ, ಬಲ, ಸ್ಪಶ್ಯ, ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗದ ರೀತಿಯಲ್ಲಿ ರಾಜ್ಯ ಸರ್ಕಾರ ಖಾತ್ರಿಗೊಳಿಸಬೇಕು. ರಾಜ್ಯ ಸರ್ಕಾರವು ಅಲೆಮಾರಿ, ಆದಿವಾಸಿ ಮತ್ತು ಅಂಚಿನ ಜಾತಿಗಳಿಗೆ ಒಳಮೀಸಲಾತಿ ಪ್ರವರ್ಗವನ್ನು ರೂಪಿಸಬೇಕು. ಒಳಮೀಸಲಾತಿ ಜಾರಿಗೊಳಿಸಿ 56,432 ಉದ್ಯೋಗ ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆ ನಿಲ್ಲಬಾರದು. ವಿಳಂಬ ಆಗಬಾರದು. ಒಳಮೀಸಲಾತಿಯ ಎಲ್ಲ ಪ್ರವರ್ಗಗಳಿಗೂ ನ್ಯಾಯಸಮ್ಮತವಾದ ರೀತಿಯಲ್ಲಿ ರೋಸ್ಟರ್ ಬಿಂದು ಅಳವಡಿಸಬೇಕು ಎಂದು ಆಗ್ರಹಿಸಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಜಿಲ್ಲಾ ಸಮಿತಿ ಸದಸ್ಯರಾದ ಕೆ.ಬಸವರಾಜ್, ಜಿ.ಜಯರಾಮ್, ಎನ್.ವಿಜಯ್ ಕುಮಾರ್, ಶಾಕುಂತಲ ಮೆಹಬೂಬ್, ಸ್ಥಳೀಯ ಸಮಿತಿ ಕಾರ್ಯದರ್ಶಿ ಎನ್.ಸುಬ್ರಹ್ಮಣ್ಯ, ಸದಸ್ಯರಾದ ರಾಜೇಂದ್ರ, ಬಸವಯ್ಯ, ಬಾಲಾಜಿರಾವ್, ಸುಬ್ರಹ್ಮಣ್ಯ, ಎಂ.ಬಿ.ಕೃಷ್ಣಪ್ಪ, ಚಂದ್ರಶೇಖರ್, ರಘು ಪೂಜಾರ, ಪುಟ್ಟಮಲ್ಲಯ್ಯ, ಮುಳ್ಳೂರು ಮಹದೇವ, ಶ್ರೀಧರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net