ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ

ವಿವಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ವಿವಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ, ರಾಜ್ಯ ಸರ್ಕಾರ ಕೂಡಲೇ ಬರ ಪರಿಹಾರ ಘೋಷಿಸಲು ಆಗ್ರಹ
ರಾಜ್ಯದ ಸುಮಾರು 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೂಡಲೇ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ಪರಿಹಾರ ಘೋಷಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬರದ ಕಾರಣ ಮೇವು, ನೀರು ಜಾನುವಾರುಗಳಿಗೆ ಸಿಗುತ್ತಿಲ್ಲ. ಬೆಳೆದಿರುವ ರಾಗಿ, ಜೋಳ, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿಗಳೂ ಹಾಳಾಗಿವೆ. ಹೀಗಾಗಿ ಕೂಡಲೆ ರೈತರಿಗೆ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು. ಸರ್ಕಾರದ ವ್ಯಾಪ್ತಿಗೆ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಾಲ ಮನ್ನಾ ಮಾಡಬೇಕು. ಖಾಸಗಿ ಫೈನಾನ್ಸ್‌ಗಳ ಕಿರುಕುಳ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಬಣ್ಣಾರಿ ಸಕ್ಕರೆ ಕಾರ್ಖಾನೆಯು ಕಳೆದ ಸಾಲಿನಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ರೈತರಿಗೆ ಸುಮಾರು 8 ಕೋಟಿ ರೂ.ಬಾಕಿ ಹಣ ಪಾವತಿಸಬೇಕಿದೆ. ಈ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಅಲ್ಲಿಯವರೆಗೆ ಕಾರ್ಖಾನೆ ಆರಂಭಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಖಾನೆ ಮಾಲೀಕರೊಂದಿಗೆ ರೈತರ ಸಭೆ ನಡೆಸಿ ಬಾಕಿ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಪದಾಧಿಕಾರಿಗಳಾದ ಎಚ್.ಎಸ್.ರಾಜು, ಪ್ರಕಾಶ್ ಗಾಂಧಿ, ಕೆರೆಹುಂಡಿ ರಾಜಣ್ಣ, ಹೊಸಪುರ ಮಾದಪ್ಪ, ಮಲಿಯೂರು ಮಹೇಂದ್ರ ಇದ್ದರು.

ಸಚಿವರಿಗೆ ಮನವಿ:

ಪ್ರತಿಭಟನೆಯ ನಂತರ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪ್ರತಿಭಟನಾಕಾರರು, ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸರ್ಕಾರದಿಂದ ತಕ್ಷಣ ಬರ ಘೋಷಣೆ ಮಾಡಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಬಣ್ಣಾರಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿ ರೈತರ ಬಾಕಿ ಹಣ ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net