ಮೈಸೂರಿನಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರತಿಭಟನೆ

 ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೈಸೂರು ಜಿ.ಪಂ. ಕಚೇರಿ ಎದುರು ಗುರುವಾರ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೈಸೂರು ಜಿ.ಪಂ. ಕಚೇರಿ ಎದುರು ಗುರುವಾರ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು.
Published on
ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಯಿತು.
ಬೇಡಿಕೆ ಈಡೇರಿಸುವಂತೆ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಆದರೆ, ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಕಳೆದ ಡಿ.22ರಂದು ಸಂಘಟನೆಯ ಮುಖಂಡರ ಸಭೆ ಕರೆದು ಬೇಡಿಕೆ ಈಡೇರಿಕೆಯ ಭರವಸೆ ನೀಡಲಾಗಿತ್ತು. ಆದರೆ, ಭರವಸೆ ನೀಡಿ 3 ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. 19 ಬೇಡಿಕೆಗಳಲ್ಲಿ ಸರ್ಕಾರದ ಹಂತದಲ್ಲಿರುವ ಬೇಡಿಕೆಗಳನ್ನು ಹೊರತುಪಡಿಸಿ 7 ಬೇಡಿಕೆಗಳನ್ನು ಈಡೇರಿಸಿ ಆದೇಶ ನೀಡುವುದಾಗಿ ನೀಡಿದ್ದ ಭರವಸೆ ಸಾಕಾರವಾಗಿಲ್ಲ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುವುದು. ಈ ಹೋರಾಟದಲ್ಲಿ ಏನಾದರೂ ಅನಾಹುತವಾದರೆ ಅದಕ್ಕೆ ನೇರವಾಗಿ ಆರ್‌ಡಿಪಿಆರ್‌ಇಲಾಖೆಯೆ ಹೊಣೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಬಸವರಾಜ್ ಎಚ್ಚರಿಸಿದರು.
ಬೇಡಿಕೆಗಳು: ಎಲ್ಲ ನೌಕರರಿಗೆ 5000 ರೂ. ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಬೇಕು, ನೌಕರರು ನಿವೃತ್ತಿ, ನಿಧನ ಹೊಂದಿದರೆ ಅವರಿಗೆ 6 ಲಕ್ಷ ರೂ ಇಡುಗಂಟು ನೀಡಬೇಕು, ಸೇವಾ ಹಿರಿತನದ ಆಧಾರದಲ್ಲಿ ವೇತನ ನೀಡಬೇಕು, ಸ್ವಚ್ಛವಾಹಿನಿ ನೌಕರರ ಸಭೆ ಮಾಡಿ ಅವರ ಪ್ರಮುಖ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು, ಪ್ರತಿಯೊಂದು ಪಂಚಾಯಿತಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ತುಂಬಬೇಕು, ಕಳೆದ 18-20 ವರ್ಷಗಳಿಂದ ಡಾಟಾ ಎಂಟ್ರಿ ಆಪರೇಟರ್‌ಗಳಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಅನುಮೋದನೆ ನೀಡಬೇಕು, 2ನೇ ಡಾಟಾ ಎಂಟ್ರಿ ಆಪರೇಟರ್ ನೇಮಕಾತಿ ಆಗಬೇಕು ಎಂದು ಆಗ್ರಹಿಸಿದರು.
ಭವಿಷ್ಯನಿಧಿ ಜಾರಿ ಮಾಡಬೇಕು, ಅಕಾಲಿಕ ಮರಣ ಹೊಂದಿದ ನೌಕರರ ಕುಟುಂಬದವರನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಬೇಕು, ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಟಿ.ಎಸ್.ದಿನೇಶ್, ಲೋಕೇಶ್ ಕಿರಿಜಾಜಿ, ಎಚ್.ಜೆ. ಜಗದೀಶ್, ಕರಿಗೌಡ, ಸೋಮೇಶ್, ನಂಜುಂಡ ಸ್ವಾಮಿ, ಕೇತುಪುರ ನಾಗರಾಜ್, ರಾಜಣ್ಣ ಹುಲ್ಲಳ್ಳಿ, ಪ್ರಕಾಶ್, ರೇಖಾ, ದಿವ್ಯ, ಗೀತಾ, ಮಹೇಶ್ವರಿ, ರಮೇಶ, ಕೃಷ್ಣ, ವರುಣಾ, ಕಿರಣ್ ಹಾಗೂ ಇತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net