ತೈಲ ದರ ಏರಿಕೆ ಖಂಡಿಸಿ ಪ್ರತಿಭಟನೆ

 ಕಳೆದ 10 ದಿನಗಳಲ್ಲಿ 4 ಬಾರಿ ತೈಲ ದರ ಏರಿಕೆ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರ ಕ್ರಮವನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕಳೆದ 10 ದಿನಗಳಲ್ಲಿ 4 ಬಾರಿ ತೈಲ ದರ ಏರಿಕೆ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರ ಕ್ರಮವನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಧರಣಿ
ಮೈಸೂರು: ಕಳೆದ 10 ದಿನಗಳಲ್ಲಿ 4 ಬಾರಿ ತೈಲ ದರ ಏರಿಕೆ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರ ಕ್ರಮವನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ರಾಮಸ್ವಾಮಿ ವೃತ್ತದ ಬಳಿ ಸೇರಿದ ಪ್ರತಿಭಟನಾಕಾರರು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಇಂಧನ ದರ ಏರಿಕೆಯನ್ನು ವಾಪಸ್ ಪಡೆಯಲು ಒತ್ತಾಯಿಸಿದರು.
ಪಶ್ಚಿಮ ಏಷ್ಯಾದ ಯುದ್ಧದ ಕಾರಣದಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಈ ಏರಿಕೆಗೆ ತಕ್ಕಂತೆ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿವೆ ಎಂಬುದಾಗಿ ಕೇಂದ್ರ ಸರ್ಕಾರ ಸಮಾರ್ಥನೆ ನೀಡುತ್ತಿದೆ. ಆದರೆ ಯುದ್ಧ ಆರಂಭವಾಗಿದ್ದು ಫೆಬ್ರವರಿ 28ರಂದು. ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಬರುವವರೆಗೆ ದರ ಏರಿಕೆಯನ್ನು ಕಂಪನಿಗಳೇ ತಡೆ ಹಿಡಿದವೇ ಎಂಬುದಕ್ಕೆ ಬಿಜೆಪಿಯೇ ಉತ್ತರಿಸಬೇಕು. ಸಾಲದೆಂಬಂತೆ ಅಡುಗೆ ಅನಿಲ, ಸಿಎನ್‌ಜಿಗಳ ದರವನ್ನು ಕೂಡ ಏರಿಕೆ ಮಾಡಲಾಗಿದೆ. ಇದರಿಂದ ಜನಸಾಮಾನ್ಯರು, ಹೋಟೆಲ್ ಉದ್ಯಮಿಗಳು, ಆಟೋ ಚಾಲಕರು ಸೇರಿದಂತೆ ಎಲ್ಲರಿಗೂ ಹೊರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗ ಜಾಗತಿಕ ಮಾರುಕಟ್ಟೆಯ ದರದ ನೆಪ ನೀಡುವ ಕೇಂದ್ರ ಸರ್ಕಾರ, ಕೋವಿಡ್ ಮತ್ತು ನಂತರದ ಅವಧಿಯಲ್ಲಿ ಕಚ್ಚಾತೈಲದ ಬೆಲೆ ಕುಸಿತವಾದಾಗ ಅಥವಾ ರಷ್ಯಾ ದೇಶದಿಂದ ರಿಯಾಯಿತಿ ದರದಲ್ಲಿ ಖರೀದಿ ಮಾಡಿದಾಗ ಅದರ ಪ್ರಯೋಜನವನ್ನು ದೇಶದ ಜನರಿಗೆ ಕೊಡಲಿಲ್ಲ ಏಕೆ? ಬದಲಿಗೆ ಕೇಂದ್ರದ ಅಬಕಾರಿ ಸುಂಕ ಏರಿಕೆ ಮಾಡಲಾಯಿತು. ಕಳೆದ 12 ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲೆ 43 ಲಕ್ಷ ಕೋಟಿ ರೂಪಾಯಿಯಷ್ಟು ತೆರಿಗೆಯನ್ನು ಜನರಿಂದ ಸುಲಿಗೆ ಮಾಡಿದೆ ಎಂದು ಕಿಡಿಕಾರಿದರು.
ಪೆಟ್ರೋಲ್, ಡೀಸೆಲ್ ದರದಲ್ಲಿ ಸುಮಾರು ಅರ್ಧದಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆಯೇ ಇದೆ. ತೈಲ ಕಂಪನಿಗಳ ಲಾಭ, ಡೀಲರ್‌ಗಳ ಕಮಿಷನ್ ಬಿಟ್ಟು ಕೂಡ, ಗ್ರಾಹಕರು ಕೇಂದ್ರದ ತೆರಿಗೆ 20 ರೂ. ಮತ್ತು ರಾಜ್ಯದ ತೆರಿಗೆ  25 ರೂ. ಪಾವತಿಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಪರಸ್ಪರ ದೂಷಿಸುತ್ತಾ ಜನರನ್ನು ಮೂರ್ಖರನ್ನಾಗಿ ಮಾಡುತ್ತಿವೆ. ಇಂಧನ ಬೆಲೆಗಳು ಹೆಚ್ಚಾದರೆ ಜನರ ಪ್ರಯಾಣ, ಸಾರಿಗೆ ವೆಚ್ಚ ಹೆಚ್ಚಳವಾಗಿ ಒಟ್ಟಾರೆ ಹಣದುಬ್ಬರಕ್ಕೆ ಕಾರಣವಾಗುತ್ತದೆ. ಜನರ ನೈಜ ಆದಾಯ ಕುಸಿಯುತ್ತಲೇ ಇದೆ.
 ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಜನ ಸಂಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ತೆರಿಗೆಗಳನ್ನು ಕಡಿತ ಮಾಡಬೇಕು, ಪರ್ಯಾಯ ತೈಲ ಮೂಲಗಳನ್ನು ಹುಡುಕಬೇಕು. ತಮ್ಮ ಸ್ವಾರ್ಥಕ್ಕೆ ಯುದ್ಧ ಹೂಡದಂತೆ ಅಮೆರಿಕಾ -ಇಸ್ರೇಲ್‌ಗಳ ಮೇಲೆ ಜಾಗತಿಕ ಒತ್ತಡ ತರಬೇಕು ಎಂದು ಆಗ್ರಹಿಸಿದರು.
ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಜಿಲ್ಲಾ ಸಮಿತಿಯ ಸದಸ್ಯರಾದ ಎಂ. ಉಮಾದೇವಿ, ಚಂದ್ರಶೇಖರ ಮೇಟಿ, ಪಿ.ಎಸ್.ಸಂಧ್ಯಾ, ಜಿ.ಎಸ್.ಸೀಮಾ , ಯಶೋಧರ್, ಹರೀಶ್, ಸುನಿಲ್, ಸುಮಾ, ಬಸವರಾಜು, ಚಂದ್ರಕಲಾ, ನೀತುಶ್ರೀ, ಪುಷ್ಪಾ, ರಣಜಿತ್, ಪೂರ್ಣಿಮಾ, ನಿತಿನ್ ಇತರರಿದ್ದರು.
ತೈಲ ದರ ಏರಿಕೆ ಖಂಡಿಸಿ ಎಸ್‌ಯುಸಿಐ(ಸಿ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಬಿ.ರವಿ, ಎಂ. ಉಮಾದೇವಿ, ಚಂದ್ರಶೇಖರ ಮೇಟಿ, ಪಿ.ಎಸ್.ಸಂಧ್ಯಾ, ಜಿ.ಎಸ್.ಸೀಮಾ ಇತರರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net