ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ

 ವೈದ್ಯಕೀಯ ವೃತ್ತಿಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ
ವೈದ್ಯಕೀಯ ವೃತ್ತಿಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ
Published on

ಪ್ರಮುಖ ಮುಖ್ಯಾಂಶಗಳು

  • ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಕಠಿಣ ಶಿಕ್ಷೆಗೆ ಒಳಪಡಿಸಲು ಆಗ್ರಹ
  • ಹಲವಾರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು
  • ಎನ್‌ಟಿಎ ಸಂಸ್ಥೆಯನ್ನು ಸ್ಥಗಿತಗೊಳಿಸಬೇಕು.
ಮೈಸೂರು: ವೈದ್ಯಕೀಯ ವೃತ್ತಿಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು. 
ಪ್ರಶ್ನೆ ಪತ್ರಿಕೆಯ ಸೋರಿಕೆಯು ಕೇವಲ ಕೇಂದ್ರ ಸರ್ಕಾರದ ವಿಫಲತೆಯಷ್ಟೇ ಅಲ್ಲ, ಇದು ದೊಡ್ಡ ಮಟ್ಟದ ಹಗರಣವಾಗಿದೆ. ಈ ಪರೀಕ್ಷಾ ಅಕ್ರಮಗಳಿಂದ ಭಾರತದ ಮಾನ ಜಾಗತಿಕ ಮಟ್ಟದಲ್ಲಿ ಹರಾಜಾಗಿದೆ. ಮತ್ತೊಂದೆಡೆ ಈ ದೇಶದ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಎಸಗಿದ ವ್ಯವಸ್ಥಿತ ದೌರ್ಜನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
2022ರ ನೀಟ್ ಪರೀಕ್ಷೆಯಲ್ಲಿ ಸಂಪೂರ್ಣ ಅಂಕ ಪಡೆದವರಾರೂ ಇಲ್ಲ. 2023ರಲ್ಲಿ ಇಬ್ಬರು ವಿದ್ಯಾರ್ಥಿಗಳು (ಟಾಪರ್) ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. 2024ರಲ್ಲಿ 67 ಜನ ಪೂರ್ಣ ಅಂಕ ಪಡೆದು ಎಲ್ಲರೂ ಪ್ರಥಮ ರ‌್ಯಾಂಕ್ ಪಡೆದಿದ್ದರು. ಈ 67 ವಿದ್ಯಾರ್ಥಿಗಳ ಪೈಕಿ 6 ಜನ ಒಂದೇ ಅನುಕ್ರಮದ ಸೀಟ್ ಸಂಖ್ಯೆಗಳನ್ನು ಹೊಂದಿದ್ದರು ಎಂದು ಅನುಮಾನ ವ್ಯಕ್ತ ಪಡಿಸಿದರು.
ಇದು ಹರಿಯಾಣದ ಪರೀಕ್ಷಾ ಕೇಂದ್ರವೊಂದರ ಹಗರಣವೆಂದೇ ಹೇಳಬಹುದು. ಈ ರೀತಿಯಾಗಿ ಕಳೆದ 9 ವರ್ಷಗಳಲ್ಲಿ ನಾಲ್ಕು ಭಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಇದುವರೆಗೂ ಯಾವೊಬ್ಬ ತಪ್ಪಿತಸ್ಥನಿಗೂ ಶಿಕ್ಷೆಯಾಗಿಲ್ಲ. ಬದಲಿಗೆ 3 ಬಾರಿ ನೀಟ್ ಪರೀಕ್ಷೆ ಬರೆದಿದ್ದ ಲಖೀಂಪುರ ಖೇರಿಯ ರಿತಿಕ್ ಮಿಶ್ರ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದರು.
ಜರ್ಮನಿ, ಫಿನ್ಲೆಂಡ್‌ನಲ್ಲಿ  ಶಿಕ್ಷಣವೂ ಮಾರುಕಟ್ಟೆಯ ಸರಕಾಗದೆ ನಾಗರಿಕರ ಹಕ್ಕಾಗಿದೆ. ಅಲ್ಲಿ ಪಠ್ಯಕ್ರಮ ಮೀರಿದ ಪರೀಕ್ಷೆಗಳಿಲ್ಲ. ಕೋಚಿಂಗ್ ದಂಧೆಗಳಿಲ್ಲ. ಆದರೆ ಭಾರತದಲ್ಲಿ ರಾಜಕಾರಣಿಗಳ, ಬಂಡವಾಳಶಾಹಿಗಳ ಲಾಭದ ಉದ್ದೇಶದ ಉದ್ಯಮವಾಗಿ ಮಾರ್ಪಟ್ಟಿರುವ ನೀಟ್‌ಗೆ ಮೇರಿಟ್ ಅಥವಾ ಪ್ರತಿಭೆಗಿಂತ ಹಣವೇ ಮಾನದಂಡವಾಗಿದೆ ಎಂದು ಕಿಡಿಕಾರಿದರು.
ಹಲವಾರು ಒತ್ತಡಗಳ ನಡುವೆಯೂ ಶ್ರಮಪಟ್ಟು ಓದಿದ ಬಡವರ ಮಕ್ಕಳು ಅಂಕಗಳ ಓಟದಲ್ಲಿ ಹಿಂದೆ ಬೀಳುವಂತೆ ಮಾಡಿದ್ದು, ಪ್ರಶ್ನೆ ಪತ್ರಿಕೆ ಖರೀದಿ ಮಾಡುವ ಅಥವಾ ದುಬಾರಿ ಕೋಚಿಂಗ್ ಪಡೆಯುವ ಶ್ರೀಮಂತರ ಪಾಲಿಗೆ ವೈದ್ಯಕೀಯ ಶಿಕ್ಷಣವನ್ನು ಸೀಮಿತಗೊಳಿಸಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
ಈ ಪರೀಕ್ಷೆ ನಡೆಸಲು ವಿಫಲವಾಗುತ್ತಿರುವ ಎನ್‌ಟಿಎ ಸಂಸ್ಥೆಯನ್ನು ಸ್ಥಗಿತಗೊಳಿಸಬೇಕು. ಭಾರತದ ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಪ್ರಾದೇಶಿಕ ಪರೀಕ್ಷಾ ಪದ್ಧತಿ ಜಾರಿಗೊಳಿಸಬೇಕು,  
 ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಎಲ್ಲ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಎಲ್ಲರನ್ನೂ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಆಯಾ ರಾಜ್ಯಗಳ ಜನಸಂಖ್ಯೆಗೆ ಅನುಗುಣವಾಗಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ತೆರೆಯಬೇಕು. ರಾಜ್ಯ ಸರ್ಕಾರಗಳು ನಡೆಸುವ ಶಿಕ್ಷಣ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವು ಹಸ್ತಕ್ಷೇಪ ನಡೆಸಬಾರದು ಎಂದು ಆಗ್ರಹಿಸಿದರು. 
ದಸಂಸ ಮುಖಂಡರಾದ ಚೋರನಹಳ್ಳಿ ಶಿವಣ್ಣ, ಯಡತೊರೆ ಮಹದೇವಯ್ಯ, ರವಿಕುಮಾರ್, ಪ್ರಸನ್ನ, ನವೀನ್, ಸಣ್ಣಸ್ವಾಮಿ ಇತರರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net