ವಿದ್ಯುತ್, ಆಸ್ತಿ ತೆರಿಗೆ, ನೀರಿನ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ
ವಿದ್ಯುತ್, ಆಸ್ತಿತೆರಿಗೆ, ನೀರಿನ ದರ ಹೆಚ್ಚಳ ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. ತೇಜೇಶ್ ಲೋಕೇಶ್‌ಗೌಡ, ಕೃಷ್ಣಪ್ಪ, ಪ್ರಭುಶಂಕರ್, ಸಿಂಧುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ ಇನ್ನಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಆತಂಕ
ಮೈಸೂರು: ವಿದ್ಯುತ್, ಆಸ್ತಿ ತೆರಿಗೆ, ನೀರಿನ ದರ ಹೆಚ್ಚಳ ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ನಗರದ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಅಡುಗೆ ಅನಿಲ ಸಂಕಷ್ಟವನ್ನು ಎದುರಿಸುತ್ತಿರುವ ಜನತೆಗೆ ರಾಜ್ಯ ಸರ್ಕಾರ ಹೊಸ ಆರ್ಥಿಕ ವರ್ಷದಿಂದ ರಾಜ್ಯದಲ್ಲಿ ವಿದ್ಯುತ್‌ಗೆ 40 ರಿಂದ 50 ಪೈಸೆ ಹೆಚ್ಚಳ ಮಾಡಿದೆ. ಜತೆಗೆ ನೀರಿನ ದರ ಏರಿಕೆಯನ್ನು ಅಧಿಕೃತವಾಗಿ ಪ್ರಕಟಿಸಿ, ಆಸ್ತಿ ತೆರಿಗೆಯನ್ನು ಹೆಚ್ಚಿಸಲು ನಿರ್ಧರಿಸುವುದು ಖಂಡನೀಯ ಎಂದು ಕಿಡಿಕಾರಿದರು
.
ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ, ಗ್ಯಾರಂಟಿ ಯೋಜನೆಯಿಂದ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ, ಅಗತ್ಯ ವಸ್ತುಗಳ ಬೆಲೆ ಸೇರಿದಂತೆ ಎಲ್ಲದರ ಬೆಲೆ ಏರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಇವರ ಅಧಿಕಾರ ದಾಹಕ್ಕಾಗಿ ಜನರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ರಾಜ್ಯದ ಜನತೆ ಮಧ್ಯಪ್ರಾಚ್ಯದ ಯುದ್ಧದಿಂದಾಗಿ, ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ಕೊರತೆಯಿಂದಾಗಿ ಪರಿತಪಿಸುತ್ತಿದ್ದಾರೆ. ಮುಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಆತಂಕವೂ ಎದುರಾಗಿದೆ. ಈ ಸಂಕಷ್ಟ ಸಮಯದಲ್ಲಿ ರಾಜ್ಯ ಸರ್ಕಾರ ಬೆಲೆಗಳನ್ನು ಏಕಾಏಕಿ ಹೆಚ್ಚಳ ಮಾಡಿ ಜನತೆಗೆ ಶಾಕ್ ನೀಡಿದ್ದಾರೆ. ಜತೆಗೆ ಹಾಲಿನ ಬೆಲೆ ಏರಿಕೆಯ ಸುಳಿವನ್ನು ನೀಡಿರುವುದು ನುಂಗಲಾರದ ತುತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆಯ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಮನೆಗಳಿಗೆ (ಪಿಐಡಿ) ಆಸ್ತಿ ಗುರುತಿನ ಸಂಖ್ಯೆ ಆಧಾರದ ಮೇಲೆ ದ್ವಿಚಕ್ರ ವಾಹನಕ್ಕೆ 100 ರೂ., ತ್ರಿಚಕ್ರ ವಾಹನಕ್ಕೆ 200 ರೂ., ನಾಲ್ಕು ಚಕ್ರದ ವಾಹನಕ್ಕೆ 500 ರೂ. ಮೋಟಾರ್ ವಾಹನ ಉಪಕರ ವಿಧಿಸಲು ಹೊರಟಿರುವುದು ಅವೈಜ್ಞಾನಿಕ ಮತ್ತು ಖಂಡನೀಯ ಎಂದು ಪಾಲಿಕೆ ವಿರುದ್ಧ ಹರಿಹಾಯ್ದರು.
ಈ ಬೆಲೆ ಹೆಚ್ಚಿಸುವ ಮೊದಲು ಜನತೆಗೆ ಉತ್ತಮ ರಸ್ತೆ ಕೊಡಿ. ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಮೊದಲು ಅವುಗಳನ್ನು ಮುಚ್ಚಬೇಕು. ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು ಸೌಕರ್ಯ ಕಲ್ಪಿಸಬೇಕು. ಅದನ್ನು ಬಿಟ್ಟು ಜನರಿಂದ ತೆರಿಗೆ ಹೆಸರಿನಲ್ಲಿ ಲೂಟಿ ಮಾಡುವುದನ್ನು ಬಿಡಬೇಕು. ಈ ಕೂಡಲೇ ಏರಿಸಿರುವ ದರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.