ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗೀಕರಣ ವಿರೋಧಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಹಾಗೂ ಕರ್ನಾಟಕ ವಿದ್ಯುತ್ ಗ್ರಾಹಕರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಎಚ್.ಎಂ.ಬಸವರಾಜು,  ಪುನೀತ್, ಯಶೋಧರ್,  ಶಿವಾನಂದ್, ಎಂ.ಶಶಿಧರ್ ಇನ್ನಿತರರಿದ್ದರು.
ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗೀಕರಣ ವಿರೋಧಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಹಾಗೂ ಕರ್ನಾಟಕ ವಿದ್ಯುತ್ ಗ್ರಾಹಕರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಎಚ್.ಎಂ.ಬಸವರಾಜು, ಪುನೀತ್, ಯಶೋಧರ್, ಶಿವಾನಂದ್, ಎಂ.ಶಶಿಧರ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಹಾಗೂ ಕರ್ನಾಟಕ ವಿದ್ಯುತ್ ಗ್ರಾಹಕರ ಸಂಘದ ವತಿಯಿಂದ ಪ್ರತಿಭಟನೆ
ಮೈಸೂರು: ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗೀಕರಣ ವಿರೋಧಿಸಿ, ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣೆ ನೀಡಬಾರದು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಹಾಗೂ ಕರ್ನಾಟಕ ವಿದ್ಯುತ್ ಗ್ರಾಹಕರ ಸಂಘದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ  ಎದುರು ಪ್ರತಿಭಟನೆ ನಡೆಯಿತು.
ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ವಿದ್ಯುತ್ ವಿತರಣಾ ಕಂಪನಿಗಳು ಅನೇಕ ವರ್ಷಗಳಿಂದ ರೈತರು, ಗೃಹ ಬಳಕೆದಾರರು, ಕೈಗಾರಿಕೆಗಳು ಹಾಗೂ ವಿವಿಧ ವರ್ಗದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿವೆ. ಟಾಟಾ ಪವರ್ ಕಂಪನಿ ರಾಜ್ಯದಲ್ಲಿ ವಿದ್ಯುತ್ ವಿತರಣೆ ಪಡೆದುಕೊಳ್ಳಲು ಮುಂದಾಗಿದ್ದು, ಪರವಾನಗಿ ಪಡೆಯಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಅರ್ಜಿ ಸಲ್ಲಿಸಿದೆ. ಇದು ಆಘಾತಕಾರಿ ಬೆಳವಣಿಗೆ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.
ವಿದ್ಯುತ್ ವಿತರಣಾ ಕ್ಷೇತ್ರ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಅತ್ಯಗತ್ಯ ಸೇವೆಯಾಗಿದ್ದು, ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವುದರಿಂದ ಭವಿಷ್ಯದಲ್ಲಿ ಗ್ರಾಹಕರ, ರೈತರ ಹಿತಾಸಕ್ತಿ ಬಲಿಯಾಗಲಿದೆ. ಸಬ್ಸಿಡಿ ಸೌಲಭ್ಯಗಳು, ಸರ್ಕಾರದ ಜನಪರ ಯೋಜನೆಗಳು ಹಾಗೂ ನೌಕರರ ಉದ್ಯೋಗ ಭದ್ರತೆಗೂ ಮಾರಕವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ವಿತರಣಾ ವ್ಯವಸ್ಥೆಯ ಮೇಲೆ ಸರ್ಕಾರದ ಹಿಡಿತ ಕೈ ತಪ್ಪಲಿದೆ. ನೇರ ನಿಯಂತ್ರಣ ಮತ್ತು ಮೇಲ್ವಿಚಾರಣೆ ಕಡಿಮೆಯೂ ಇರಲ್ಲ. ರಾಜ್ಯದ ಜನತೆಗೆ ಸಮಾನ ಹಾಗೂ ಕೈಗೆಟುಕುವ ದರದಲ್ಲಿ ವಿದ್ಯುತ್ ಸೇವೆ ನೀಡುವುದು ಸರ್ಕಾರದ ಪ್ರಮುಖ ಹೊಣೆಗಾರಿಕೆಗೂ ಕುಂದುಂಟಾಗಲಿದೆ. ಆದ್ದರಿಂದ ಸಾರ್ವಜನಿಕ ವಲಯದಲ್ಲೇ ವಿದ್ಯುತ್ ವಿತರಣಾ ವ್ಯವಸ್ಥೆ ಮುಂದುವರಿಯಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಕಾಯ್ದೆ-2003ರ ಸೆಕ್ಷನ್ 108ರ ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ಉಪಯೋಗಿಸಿಕೊಂಡು, ಟಾಟಾ ಪವರ್ ಕಂಪನಿ ಸಲ್ಲಿಸಿರುವ ವಿದ್ಯುತ್ ವಿತರಣಾ ಪರವಾನಗಿ ಅರ್ಜಿ ತಿರಸ್ಕರಿಸಬೇಕು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಖಾಸಗಿ ವಿದ್ಯುತ್ ವಿತರಣಾ ವ್ಯವಸ್ಥೆಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು
ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಎಂ.ಬಸವರಾಜು, ಕಾರ್ಯದರ್ಶಿ ಪುನೀತ್, ಸಂಚಾಲಕ ಯಶೋಧರ್, ಸದಸ್ಯರಾದ ಶಿವಾನಂದ್, ಎಂ.ಶಶಿಧರ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net