ಗುತ್ತಿಗೆ ಕಾರ್ಮಿಕರಿಗೆ ಕೆಲಸ ನಿರಾಕರಣೆ ವಿರುದ್ಧ ಪ್ರತಿಭಟನೆ

ಕೆಲಸ ನಿರಾಕರಿಸಿರುವುದನ್ನು ಖಂಡಿಸಿ ಮೈಸೂರು ಡಿವಿಜನ್ ಯುನೈಟೆಡ್ ಇಂಡಸ್ಟ್ರಿಯಲ್ ವರ್ಕರ್ಸ್ ಯೂನಿಯನ್‌ನಿಂದ ಮೈಲಾಕ್ ಮುಂದೆ ಪ್ರತಿಭಟನೆ ನಡೆಸಲಾಯಿತು. ಮುದ್ದುಕೃಷ್ಣ, ಪಿ.ಎಸ್.ಸಂಧ್ಯಾ, ಚಂದ್ರಶೇಖರ ಮೇಟಿ, ಉಗ್ರನರಸಿಂಹೇಗೌಡ, ಪುನೀತ್ ಇತರರಿದ್ದರು.
ಕೆಲಸ ನಿರಾಕರಿಸಿರುವುದನ್ನು ಖಂಡಿಸಿ ಮೈಸೂರು ಡಿವಿಜನ್ ಯುನೈಟೆಡ್ ಇಂಡಸ್ಟ್ರಿಯಲ್ ವರ್ಕರ್ಸ್ ಯೂನಿಯನ್‌ನಿಂದ ಮೈಲಾಕ್ ಮುಂದೆ ಪ್ರತಿಭಟನೆ ನಡೆಸಲಾಯಿತು. ಮುದ್ದುಕೃಷ್ಣ, ಪಿ.ಎಸ್.ಸಂಧ್ಯಾ, ಚಂದ್ರಶೇಖರ ಮೇಟಿ, ಉಗ್ರನರಸಿಂಹೇಗೌಡ, ಪುನೀತ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 18 ವರ್ಷಗಳಿಂದ ಕಾನೂನುಬದ್ಧವಾಗಿ ಪಾವತಿಸಬೇಕಾದ ಬೋನಸ್ ನೀಡಿಲ್ಲ
  • ಹಳೆಯ 14 ಕಾರ್ಮಿಕರಿಗೆ ಏಕಾಏಕಿ ಕೆಲಸ ನಿರಾಕರಿಸಲಾಗಿದೆ
ಮೈಸೂರು:ಮೈಸೂರು ಪೇಂಟ್ಸ್ ಆ್ಯಂಡ್ ವಾರ್ನಿಶ್ ಲಿಮಿಟೆಡ್(ಮೈಲ್ಯಾಕ್)ನಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಕೆಲಸ ನಿರಾಕರಿಸಿರುವುದನ್ನು ಖಂಡಿಸಿ ಮೈಸೂರು ಡಿವಿಜನ್ ಯುನೈಟೆಡ್ ಇಂಡಸ್ಟ್ರಿಯಲ್ ವರ್ಕರ್ಸ್ ಯೂನಿಯನ್‌ನಿಂದ ಪ್ರತಿಭಟನೆ ನಡೆಯಿತು.
ಮೈಲ್ಯಾಕ್ ಮುಂಭಾಗ ಪ್ರತಿಭಟನೆ ನಡೆಸಿದ ಗುತ್ತಿಗೆ ಕಾರ್ಮಿಕರು, ಸಂಸ್ಥೆಯಲ್ಲಿ 22 ಕಾರ್ಮಿಕರು, 8ರಿಂದ 25 ವರ್ಷ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಸ್ಥೆಯ ಉತ್ಪಾದನೆ, ದೈನಂದಿನ ಕಾರ್ಯಚಟುವಟಿಕೆಯಲ್ಲಿ ಮಹತ್ವದ ಪಾತ್ರ ವಹಿಸಿಕೊಂಡಿದ್ದು, ವಾಸ್ತವವಾಗಿ ಸಂಸ್ಥೆಯ ಅವಿಭಾಜ್ಯ ಅಂಗಗಳಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.
ಈ ಕಾರ್ಮಿಕರಿಗೆ 18 ವರ್ಷಗಳಿಂದ ಕಾನೂನುಬದ್ಧವಾಗಿ ಪಾವತಿಸಬೇಕಾದ ಬೋನಸ್ ನೀಡಲಾಗಿಲ್ಲ. ಅದಲ್ಲದೆ ವೇತನ ಸಮಾನತೆ, ಸೇವಾ ಭದ್ರತೆ, ಇತರ ಕೈಗಾರಿಕಾ ವಿವಾದಗಳೂ ಕಾರ್ಮಿಕ ಇಲಾಖೆ ಹಾಗೂ ನ್ಯಾಯಾಲಯಗಳ ಮುಂದೆ ವಿಚಾರಣೆಯಲ್ಲಿವೆ ಎಂದು ಹೇಳಿದ್ದಾರೆ. ಆದರೆ ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ಸಂಸ್ಥೆ ಹೊಸ ಗುತ್ತಿಗೆದಾರರನ್ನು ನೇಮಿಸಿದ್ದು, ಆರಂಭದಲ್ಲಿ ಎಲ್ಲ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡ ನಂತರ ಹಳೆಯ 14 ಕಾರ್ಮಿಕರಿಗೆ ಏಕಾಏಕಿ ಕೆಲಸ ನಿರಾಕರಿಸಲಾಗಿದೆ ಎಂದು ದೂರಿದರು.
ಕಾರ್ಮಿಕರಿಗೆ ಪ್ರಕರಣಗಳನ್ನು ಹಿಂಪಡೆಯುವಂತೆ ಪರೋಕ್ಷ ಒತ್ತಡ ಹೇರಲಾಗುತ್ತಿದ್ದು, ಪ್ರಸ್ತುತ ಕೆಲಸ ನಿರಾಕರಣೆ ಕ್ರಮ ಕಾನೂನುಬದ್ಧ ಹಕ್ಕುಗಳನ್ನು ಕೇಳಿದ ಕಾರ್ಮಿಕರ ವಿರುದ್ಧದ ಪ್ರತೀಕಾರಾತ್ಮಕ ಕ್ರಮವಾಗಿದೆ ಎಂದು ಆರೋಪಿಸಿದರು.
ಕೆಲಸ ನಿರಾಕರಿಸಲಾದ ಎಲ್ಲ ಕಾರ್ಮಿಕರನ್ನು ತಕ್ಷಣ ಕೆಲಸಕ್ಕೆ ಮರು ನೇಮಕಗೊಳಿಸಬೇಕು. ಅವರ ಸೇವಾ ನಿರಂತರತೆ ರಕ್ಷಿಸಬೇಕು. ಬೋನಸ್ ಸೇರಿದಂತೆ ಕಾನೂನುಬದ್ಧ ಹಕ್ಕುಗಳನ್ನು ಕೇಳಿದ ಕಾರಣಕ್ಕೆ ಯಾವುದೇ ರೀತಿಯ ಪ್ರತೀಕಾರಾತ್ಮಕ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಬೇಕು. ಕಳೆದ ವರ್ಷಗಳ ಬೋನಸ್ ಪಾವತಿ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಕಾರ್ಮಿಕ ಸಂಘದೊಂದಿಗೆ ತುರ್ತು ಸಭೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಯಶೋದರಾ, ಮುದ್ದುಕೃಷ್ಣ, ಪಿ.ಎಸ್.ಸಂಧ್ಯಾ, ಚಂದ್ರಶೇಖರ ಮೇಟಿ, ಉಗ್ರನರಸಿಂಹೇಗೌಡ, ಪುನೀತ್, ನಿತಿನ್, ಸತೀಶ್, ಹರೀಶ್, ಅರವಿಂದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net