ಲ್ಯಾನ್ಸ್‌ಡೌನ್, ದೇವರಾಜ ಮಾರುಕಟ್ಟೆ ಸಂರಕ್ಷಿಸಿ: ಸುಪ್ರೀಂಕೋರ್ಟ್

ಲ್ಯಾನ್ಸ್ ಡೌನ್ ಕಟ್ಟಡ
ಲ್ಯಾನ್ಸ್ ಡೌನ್ ಕಟ್ಟಡ
Published on
ಮೈಸೂರು: ನಗರದ ಪಾರಂಪರಿಕ ದೇವರಾಜ ಮಾರುಕಟ್ಟೆ ಮತ್ತು ಲಾನ್ಸ್‌ಡೌನ್ ಕಟ್ಟಡಗಳನ್ನು ಸಂರಕ್ಷಿಸುವ ಅವಶ್ಯಕತೆ ಇದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಐಐಟಿ ರೂರ‌್ಕಿ ಸಮಿತಿಯ ವರದಿ ಪರಿಗಣಿಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪ್ರದಿವಾಲ ಮತ್ತು ವಿಜಯ್ ಬಿಷ್ಣೋಯಿ ಅವರನ್ನೊಳಗೊಂಡ ಪೀಠವು ಮೇ 4 ರಂದು ಈ ಎರಡು ಕಟ್ಟಡಗಳನ್ನು ಅಗತ್ಯ ದುರಸ್ತಿ ಮತ್ತು ಪುನರ್‌ನಿರ್ಮಾಣ ಕಾರ್ಯಗಳೊಂದಿಗೆ ರಕ್ಷಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ಸಮಗ್ರ ಯೋಜನೆಯನ್ನು ಆಡಳಿತ ಮಂಡಳಿ ಸಿದ್ಧಪಡಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ (ಇನ್‌ಟ್ಯಾಕ್)ನ ಶಿಫಾರಸುಗಳನ್ನು ಪರಿಗಣಿಸಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಪಾರಂಪರಿಕ ಕಟ್ಟಡಗಳ ಕುರಿತು ಸುಪ್ರೀಂಕೋರ್ಟ್ ಅಂತಿಮ ಆದೇಶ ಇನ್ನೂ ಹೊರಡಿಸಿಲ್ಲ. ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಮುಂದಿನ ವಿಚಾರಣೆಯನ್ನು ಜು.30ಕ್ಕೆ ಮುಂದೂಡಿದೆ. ನ್ಯಾಯಾಲಯದಲ್ಲಿ ಸರ್ಕಾರದ ಪರವಗಿ ನಮ್ಮ ವಾದ ಮಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಹಿನ್ನೆಲೆ: ಶತಮಾನದ ಇತಿಹಾಸ ಹೊಂದಿರುವ ನಗರದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡಗಳು ಸಂಪೂರ್ಣ ದುಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಕುರಿತು ನಗರದ ಗೌರಿಸತ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಪಾರಂಪರಿಕ ತಜ್ಞರ ಅಭಿಪ್ರಾಯ ಪಡೆಯದೆ ಅಧಿಕಾರಿಗಳು ಹಾಗೂ ಸಿವಿಲ್ ಇಂಜಿನಿಯರ್‌ಗಳ ಅಭಿಪ್ರಾಯವನ್ನು ಮಾತ್ರ ಪಡೆದು ಪಾರಂಪರಿಕ ಕಟ್ಟಡವನ್ನು ನೆಲಸಮ ಮಾಡಲು ಸರ್ಕಾರ ನಿರ್ಧರಿಸಿರುವ ಕ್ರಮ ಸರಿ ಇಲ್ಲ. ಹೀಗಾಗಿ ತಜ್ಞರ ಅಭಿಪ್ರಾಯ ಪಡೆಯಬೇಕು ಎಂದು ಗೌರಿಸತ್ಯ ಅವರು ಸುಪ್ರೀಂಕೋರ್ಟ್‌ನಲ್ಲಿ ಗಮನ ಸೆಳೆದಿದ್ದರು.
ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರಾಗಿರುವ ಪ್ರೊ.ಎನ್.ಎಸ್. ರಂಗರಾಜು ಹಾಗೂ ಇತರರು ಕಟ್ಟಡವನ್ನು ನೆಲಸಮಗೊಳಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈ ಅಂಶವನ್ನು ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿರಲಿಲ್ಲ. ತಜ್ಞರ ಅಭಿಪ್ರಾಯವನ್ನು ಪರಿಗಣಿಸದೆ ಕಟ್ಟಡ ಕೆಡವಲು ಸರ್ಕಾರ ಕೈಗೊಂಡಿರುವ ನಿರ್ಧಾರ ಸರಿ ಇಲ್ಲ. ಹೀಗಾಗಿ ತಜ್ಞರ ಅಭಿಪ್ರಾಯ ಪಡೆಯಬೇಕು ಎಂದು ಗೌರಿಸತ್ಯ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಪೂರಕವಾಗಿ ಪ್ರೊ.ಎನ್.ಎಸ್. ರಂಗರಾಜು ಅವರು ಕಟ್ಟಡದ ಕುರಿತು ನೀಡಿರುವ ಅಭಿಪ್ರಾಯವನ್ನು ಸಹ ನ್ಯಾಯಲಯದ ಗಮನಕ್ಕೆ ತರಲಾಯಿತು. ಈ ಅಂಶವನ್ನು ಗಮನಿಸಿದ ನ್ಯಾಯಾಲಯವು ಆರ್ಕಿಯಾಲಜಿ ಸರ್ವೇ ಆಫ್ ಇಂಡಿಯಾ (ಎಎಸ್‌ಐ) ಮತ್ತು ನ್ಯಾಷನಲ್ ಟ್ರಸ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ (ಇನ್‌ಟ್ಯಾಕ್)ನ ಅಭಿಪ್ರಾಯ ಪಡೆಯಲು ಈ ಸಂಸ್ಥೆಗಳನ್ನು ಪಾರ್ಟಿ ಮಾಡುವಂತೆ 4 ಡಿಸೆಂಬರ್ 2024 ರಂದು ಆದೇಶ ನೀಡಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net