ಪ್ರೊ.ಎಂ. ಮಹದೇವಪ್ಪ ‘ಕೃಷಿ ಋಷಿ’ : ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಬಣ್ಣನೆ

ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ‘ಕೃಷಿ ಋಷಿ’ ಕೃತಿಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ರಾಮಸುಬ್ರಮಣಿಯನ್ ಹಾಗೂ ಹಿರಿಯ ವಿದ್ವಾಂಸ ಡಾ.ಗೊ.ರು.ಚನ್ನಬಸಪ್ಪ ಬಿಡುಗಡೆ ಮಾಡಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪ್ರೊ.ಎಲ್.ಎಸ್. ಶಶಿಧರ, ಡಾ.ಎಂ.ಎನ್. ಶೀಲವಂತರ್, ಕೆ.ಸಿ. ಶಿವಪ್ಪ ಇದ್ದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ‘ಕೃಷಿ ಋಷಿ’ ಕೃತಿಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ರಾಮಸುಬ್ರಮಣಿಯನ್ ಹಾಗೂ ಹಿರಿಯ ವಿದ್ವಾಂಸ ಡಾ.ಗೊ.ರು.ಚನ್ನಬಸಪ್ಪ ಬಿಡುಗಡೆ ಮಾಡಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪ್ರೊ.ಎಲ್.ಎಸ್. ಶಶಿಧರ, ಡಾ.ಎಂ.ಎನ್. ಶೀಲವಂತರ್, ಕೆ.ಸಿ. ಶಿವಪ್ಪ ಇದ್ದರು.
Published on
ಮೈಸೂರು: ಕೃಷಿ ವಿದ್ಯಾರ್ಥಿಯಾಗಿ ತಮ್ಮ ಕೃಷಿ ಪಯಣ ಪ್ರಾರಂಭಿಸಿದ ಪದ್ಮಭೂಷಣ ಪ್ರೊ.ಎಂ. ಮಹದೇವಪ್ಪ ನಂತರ ಕೃಷಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ಅಂತಿಮವಾಗಿ ‘ಕೃಷಿ ಋಷಿ’ಯಾಗಿ ಖ್ಯಾತಿಗಳಿಸಿದರು ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಹೇಳಿದರು.
ಕೆಂದಾವರೆ ಮಹದೇವಪ್ಪ ಸೇವಾ ಟ್ರಸ್ಟ್ ವತಿಯಿಂದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರೊ.ಎಂ. ಮಹದೇವಪ್ಪ ರಚನೆಯ ‘ಕೃಷಿ ಋಷಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಕೃಷಿ ಕ್ಷೇತ್ರಕ್ಕೆ ಮಹದೇವಪ್ಪ ಅವರು ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ಮಾತ್ರವಲ್ಲ ವಿಶ್ವದ ಎಲ್ಲ ರಾಷ್ಟ್ರಗಳು ಕೃಷಿಯ ಮೇಲೆ ಅವಲಂಬಿತವಾಗಿದೆ. ಆಹಾರವಿಲ್ಲದೆ ಯಾರಿಗೂ ಉಳಿಯಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಅನ್ನವನ್ನು ಬ್ರಹ್ಮಕ್ಕೆ ಹೋಲಿಕೆ ಮಾಡಲಾಗಿದೆ. ಇಂತಹ ಮಹತ್ವದ ಕೃಷಿ ಕ್ಷೇತ್ರದಲ್ಲಿ ಮಹದೇವಪ್ಪ ಅವರು ಸಲ್ಲಿಸಿದ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಸ್ಮರಿಸಿದರು.
ಹಿರಿಯ ವಿದ್ವಾಂಸ ಡಾ.ಗೊ.ರು.ಚನ್ನಬಸಪ್ಪ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ಋಷಿ ಕವಿಯಾದರೆ ಮಹದೇವಪ್ಪ ಕೃಷಿ ಕವಿ. ಮಹದೇವಪ್ಪ ಕೃತಿಗೆ ‘ಕೃಷಿ ಋಷಿ’ ಶೀರ್ಷಿಕೆ ನೀಡಿರುವುದು ಅರ್ಥಪೂರ್ಣವಾಗಿದೆ. ಅವರ ಕೃಷಿ ಕ್ಷೇತ್ರದ ಪಯಣ ಸಾಮಾನ್ಯವಾದ ಪಯಣವಲ್ಲ, ಸಾಹಸ, ಸುದೀರ್ಘ, ಸಂಶೋಧನಾ ಪಯಣ ಎಂದು ಬಣ್ಣಿಸಿದರು.
‘ಕೃಷಿ ಋಷಿ’ ಕೃತಿಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ರಾಮಸುಬ್ರಮಣಿಯನ್ ಹಾಗೂ ಹಿರಿಯ ವಿದ್ವಾಂಸ ಡಾ.ಗೊ.ರು.ಚನ್ನಬಸಪ್ಪ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಎಲ್.ಎಸ್. ಶಶಿಧರ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಎನ್. ಶೀಲವಂತರ್, ಹಿರಿಯ ಸಾಹಿತಿ ಕೆ.ಸಿ. ಶಿವಪ್ಪ ಇದ್ದರು.
ಇದಕ್ಕೂ ಮುನ್ನ ಟ್ರಸ್ಟ್ ವತಿಯಿಂದ ‘ಪ್ರಕೃತಿ ನಿಯಮಗಳು ಮತ್ತು ಸುಸ್ಥಿರ ಕೃಷಿ’ ವಿಷಯದ ಕುರಿತು ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಎಲ್.ಎಸ್. ಶಶಿಧರ ಮಾತಾಡಿ, ಪ್ರಪಂಚದ ಬದಲಾವಣೆ ಅತಿ ವೇಗದಲ್ಲಿ ಆಗುತ್ತಿದೆ. ಮುಂದೆ ನಮ್ಮ ಜೀವನ ಹೇಗಿರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲದಂತಾಗಿದೆ. ವಾತಾವರಣದ ಬದಲಾವಣೆ ಜಗತ್ತನ್ನೇ ಆತಂಕಗೊಳಿಸಿದೆ. ಅದು ಸುಸ್ಥಿರ ಮತ್ತು ಸಮನ್ವಯ ಬದುಕಿಗೆ ಸವಾಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಮಗೆ ಬೇಕಾಗಿರುವ ಪೌಷ್ಟಿಕ ಆಹಾರ ದೊರೆಯಲು, ನಮ್ಮ ದೈಹಿಕ ಮತ್ತು ಮಾನಸಿಕ ಸ್ವಾಸ್ಥೃ ಕಾಪಾಡಿಕೊಳ್ಳಲು ಹಾಗೂ ಎಲ್ಲ ನೈಸರ್ಗಿಕ ಕಾರ್ಯಗಳು ಸುಗವಾಗಿ ಸಾಗಲು ಜೀವವೈವಿಧ್ಯತೆಯನ್ನು ಕಾಪಾಡಿಕೊಂಡು ಹೋಗುವುದು ಅತ್ಯಂತ ಮುಖ್ಯ. ಜೀವವೈವಿಧ್ಯತೆ ಇದ್ದರೆ ಮಾತ್ರ ಜೀವಸಂಕುಲ ಬದುಕುಳಿಯಲು ಸಾಧ್ಯ. ಕಳೆದ 3.7 ಶತಕೋಟಿ ವರ್ಷಗಳಿಂದ ಈ ಜೀವವೈವಿಧ್ಯತೆ ಮುಂದುವರೆ ದುಕೊಂಡು ಬಂದಿದೆ. ಒಂದು ನಿರ್ದಿಷ್ಟವಾದ ಪರಿಸರದಲ್ಲಿ ಜೀವವೈವಿಧ್ಯತೆ ಇದ್ದರೆ ಇದ್ದರೆ ಮಾತ್ರ ಪ್ರತೀ ಜೀವಿಗಳು, ತಳಿಗಳು ಬದುಕುಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಿಜ್ಞಾನ ಮತ್ತು ತಂತ್ರಜ್ಞಾನ ಎರಡೂ ಭಿನ್ನ. ತಂತ್ರಜ್ಞಾನವಿಲ್ಲದೆಯೇ ವೈಜ್ಞಾನಿಕ ಅನ್ವೇಷಣೆ ಮಾಡಬಹುದು. ಹಾಗೆಯೇ ವಿಜ್ಞಾನದ ತಿಳಿವಳಿಕೆ ಇಲ್ಲದೆಯೇ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಬಹುದು. ತಂತ್ರಜ್ಞಾನವು ವೈಜ್ಞಾನಿಕ ಅನ್ವೇಷಣೆಗೆ ಸಹಾಯ ಮಾಡುತ್ತದೆ. ತಂತ್ರಜ್ಞಾನವು ವೈಜ್ಞಾನಿಕ ಊಹೆಗಳನ್ನು, ಮಾನವನಿಂದಾಗುವ ದೋಷಗಳು ಮತ್ತು ಪಕ್ಷಪಾತಗಳನ್ನು ಕನಿಷ್ಠಗೊಳಿಸಿ ಮೌಲೀಕರಿಸುತ್ತದೆ. ವಿಜ್ಞಾನವು ತಂತ್ರಜ್ಞಾನವನ್ನು ಉತ್ತಮಗೊಳಿಸುವುದಲ್ಲದೆ ಅದನ್ನು ಕೈಗೆಟುಕುವಂತೆ ಮಾಡುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net