ಕನ್ನಡ ಪರ ಸಂಘಟನೆಗಳಿಂದ ಭಾಷೆ ಉಳಿವು ಸಾಧ್ಯ: ಸಾಹಿತಿ ಜಯಪ್ಪ ಹೊನ್ನಾಳಿ
ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಜಯಪ್ಪ ಹೊನ್ನಾಳಿ, ಮೂಗೂರು ನಂಜುಂಡಸ್ವಾಮಿ, ಎಂ.ಚಂದ್ರಶೇಖರ್, ಬಿ.ಬಿ.ರಾಜಶೇಖರ್ ಇತರರು ಇದ್ದರು.
ಕನ್ನಡದ ಪರ ಹೋರಾಟಗಾರರ ನೋವು ನಲಿವುಗಳನ್ನು ಯಾರೂ ಕೇಳುತ್ತಿಲ್ಲ
ಮೈಸೂರು: ಕನ್ನಡ ನೆಲ, ಜಲ, ಭಾಷೆಯ ಉಳಿವಿಗಾಗಿ ಕನ್ನಡ ಪರ ಸಂಘಟನೆಗಳ ಪಾತ್ರ ದೊಡ್ಡದಾಗಿದ್ದು, ಅವರು ಕನ್ನಡದ ಸೈನಿಕರಾಗಿ ಕೆಲಸ ಮಾಡುತ್ತಿರುವುದರಿಂದಲೇ ಇಂದು ನಮ್ಮ ಕನ್ನಡ ಭಾಷೆ ಉಳಿಯಲು ಸಾಧ್ಯವಾಗಿದೆ ಎಂದು ಸಾಹಿತಿ ಜಯಪ್ಪ ಹೊನ್ನಾಳಿ ಹೇಳಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾ ಮಂಟಪದಲ್ಲಿ ಮಂಗಳವಾರ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನ್ನಡಪರ ಸಂಘಟನೆಗಳ ತ್ಯಾಗ ದೊಡ್ಡದು, ಅವರ ಕನ್ನಡಪರ ನಿರಂತರ ಹೋರಾಟದಿಂದಲೇ ಇಂದು ಕನ್ನಡ ಉಳಿಯಲು ಸಾಧ್ಯವಾಗಿದೆ. ಕನ್ನಡಪರ ಸಂಘಟನೆಗಳ ಎಲ್ಲ ಹೋರಾಟಗಳಿಗೂ ಕನ್ನಡಾಭಿಮಾನಿಗಳು ಬೆಂಬಲ ನೀಡುವ ಮೂಲಕ ಅವರನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಕನ್ನಡ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಮಾತನಾಡಿ, ಕಳೆದ 40 ವರ್ಷಗಳಿಂದ ಕನ್ನಡ ನೆಲ, ಜಲ, ಭಾಷೆಯ ಉಳಿವಿಗಾಗಿ ನಾವು ಹೋರಾಟ ಮಾಡುತ್ತಿದ್ದು, ನನ್ನ ಮೇಲೆ ನೂರಾರು ಕೇಸುಗಳನ್ನು ಹಾಕಲಾಗಿದೆ. ಪ್ರತಿನಿತ್ಯ ನ್ಯಾಯಾಲಯಕ್ಕೆ ಅಲೆಯುವಂತಾಗಿದೆ. ಇಂದು ಕನ್ನಡದ ಪರ ಹೋರಾಟಗಾರರ ನೋವು ನಲಿವುಗಳನ್ನು ಯಾರೂ ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಕನ್ನಡಪರ ಹೋರಾಟ ಪ್ರಾರಂಭವಾಗಿದ್ದೇ ಮೈಸೂರಿನಲ್ಲಿ, ಇಂತಹ ಸಾಂಸ್ಕೃತಿಕ ನೆಲದಲ್ಲಿ ಹಲವಾರು ಮಹನೀಯರು ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ ಎಂದರು.
ಮೈಸೂರು ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪುರಸ್ಕೃತರಾದ ಕರವೇ ರಾಜ್ಯ ಖಜಾಂಚಿ ನಂಜುಂಡ, ಕರವೇ ಜಿಲ್ಲಾ ಗೌರವ ಕಾರ್ಯದರ್ಶಿ ಸಿಂಧುವಳ್ಳಿ ಶಿವಕುಮಾರ್ ಅವರನ್ನು ಗೌರವಿಸಲಾಯಿತು.
ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಮಾತನಾಡಿ, ಇಂದಿನ ದಿನಗಳಲ್ಲಿ ಹೋರಾಟಗಾರರ ಸಂಖ್ಯೆ ಕಡಿಮೆಯಾಗಿದೆ. ಸಂಘಟನೆಗೆ ಬರುವವರು ಏನಾದ್ರೂ ಸಿಗುತ್ತಾ ಎಂಬ ನಿರೀಕ್ಷೆಯಲ್ಲಿ ಬರುತ್ತಾರೆ. ಆದರೆ, ಇಲ್ಲಿ ಕನ್ನಡದ ಸೇವೆಗೆ ಮಾತ್ರ ಅವಕಾಶ ಎಂಬುದನ್ನು ನೋಡಿ ಹೋರಾಟದಿಂದ ದೂರ ಸರಿಯುತ್ತಾರೆ. ಇಂತಹವರ ನಡುವೆಯೂ ರಾಜ್ಯಾದ್ಯಂತ ಸಾವಿರಾರು ಯುವಕರು ಕನ್ನಡಾಂಬೆ ರಕ್ಷಣಾ ವೇದಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕನ್ನಡಿಗರಿಗೆ ಉತ್ತಮ ಸೇವೆ ಸಿಗಬೇಕು, ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಬೇಕು, ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದರ ಬಗ್ಗೆ ನಾವು ಹೋರಾಟ ಮಾಡಲಿದ್ದೇವೆ ಎಂದರು.
ಮುಖಂಡರಾದ ಹೊನ್ನೇಗೌಡ, ಶಿವಣ್ಣ, ಶಿವಕುಮಾರ್, ಕಿರಣ, ಹರೀಶ್, ವತ್ಸಲಾ, ಸೌಭಾಗ್ಯಾ, ಲಕ್ಷ್ಮೀ, ಭಾಗ್ಯಮ್ಮ, ಲೋಕೇಶ್, ವಿಷ್ಣು ಇನ್ನಿತರರು ಇದ್ದರು.