ವಿದ್ಯುತ್ ಕ್ಷೇತ್ರ ಖಾಸಗೀಕರಣದಿಂದ ಜನರಿಗೆ ಸಂಕಷ್ಟ

ತಿ.ನರಸೀಪುರ ಪಟ್ಟಣದ ಸೆಸ್ಕ್  ಉಪವಿಭಾಗದ ಕಚೇರಿಯಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗಿತ್ತು. ಜಿ.ಎಂ.ಮಹೇಶ್ ಕುಮಾರ್, ಕೆ.ವಿ.ವೀರೇಶ್, ಚಂದ್ರಕಲಾ, ಮಂಜು, ಗೀತಾ, ರಂಗಸ್ವಾಮಿ ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ಸೆಸ್ಕ್ ಉಪವಿಭಾಗದ ಕಚೇರಿಯಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗಿತ್ತು. ಜಿ.ಎಂ.ಮಹೇಶ್ ಕುಮಾರ್, ಕೆ.ವಿ.ವೀರೇಶ್, ಚಂದ್ರಕಲಾ, ಮಂಜು, ಗೀತಾ, ರಂಗಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ಜಿಲ್ಲಾ ಮುಖಂಡ ಈ.ರಾಜು ಆತಂಕ
  • ತಿ.ನರಸೀಪುರದಲ್ಲಿ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ
ತಿ.ನರಸೀಪುರ: ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡಿದರೆ ರೈತರು ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ರೈತ ಮುಖಂಡರು ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಉಪ ವಿಭಾಗ ಕಚೇರಿಯಲ್ಲಿ ನಂಜನಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಎಂ.ಮಹೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯಲ್ಲಿ ಹಲವು ರೈತ ಮುಖಂಡರು ವಿದ್ಯುತ್ ಕ್ಷೇತ್ರದ ಖಾಸಗೀಕರಣದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಮುಖಂಡ ಈ.ರಾಜು ಮಾತನಾಡಿ, ಖಾಸಗೀಕರಣದಿಂದ ಬಡವರು ಮತ್ತು ಮಧ್ಯಮ ವರ್ಗದ ಜನರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಆದ್ದರಿಂದ ವಿದ್ಯುತ್ ಕ್ಷೇತ್ರ ನಿರ್ವಹಣೆಗೆ ಸರ್ಕಾರಕ್ಕೆ ಖಾಸಗಿ ಸಂಸ್ಥೆ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಬೇಕು. ಖಾಸಗಿ ಸಂಸ್ಥೆಗಳು ಸೇವೆಗಿಂತ ಲಾಭದ ಉದ್ದೇಶವನ್ನೇ ಹೊಂದಿದ್ದು, ವಿದ್ಯುತ್ ವ್ಯವಸ್ಥೆಯನ್ನು ಅವರ ವಶಕ್ಕೆ ನೀಡಿದರೆ ರೈತರ ಹಿತಾಸಕ್ತಿ ಸಂಪೂರ್ಣ ಹಾಳಾಗಲಿದೆ. ಈ ಕುರಿತು ರೈತರ ಆಕ್ಷೇಪಣೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ಅಧಿಕಾರಿಗಳು ಕಡ್ಡಾಯವಾಗಿ ತಲುಪಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಸುಜ್ಜಲೂರು ಚಂದ್ರು ಮಾತನಾಡಿ, ಮಹಾರಾಜರ ಕಾಲದಿಂದಲೂ ಸರ್ಕಾರ ಅಪಾರ ಹಣ ವೆಚ್ಚ ಮಾಡಿ ನಿರ್ಮಿಸಿರುವ ವಿದ್ಯುತ್ ವ್ಯವಸ್ಥೆಯನ್ನು ಖಾಸಗಿ ಬಂಡವಾಳಶಾಹಿಗಳಿಗೆ ಒಪ್ಪಿಸುವುದು ಜನವಿರೋಧಿ ಕ್ರಮವಾಗಿದೆ. ರೈತರ ಹೋರಾಟ ಮತ್ತು ಮನವಿಯನ್ನು ಸರ್ಕಾರದ ಗಮನಕ್ಕೆ ತಂದು ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್ ಮಾತನಾಡಿ, ರೈತರು ಕೃಷಿ ಪಂಪ್ ಸೆಟ್‌ಗಳಿಗೆ ಅಳವಡಿಸಿರುವ ಸೋಲಾರ್ ವ್ಯವಸ್ಥೆಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಹಲವೆಡೆ ಸೋಲಾರ್ ಘಟಕಗಳು ಕಾರ್ಯನಿರ್ವಹಿಸದ ಕಾರಣ ಬಾಳೆ ಸೇರಿದಂತೆ ವಿವಿಧ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಎನ್. ಲೋಕೇಶ್ ಮಾತನಾಡಿ, ಶಂಭುದೇವನಪುರ ಗ್ರಾಮದ ಬಿ.ಗುರುಮಲ್ಲಪ್ಪ 2005ರಲ್ಲಿಯೇ ನೀರಾವರಿ ಪಂಪ್ ಸೆಟ್ ಸಂಪರ್ಕಕ್ಕಾಗಿ ಹಣ ಪಾವತಿಸಿದ್ದರೂ ಇಂದಿಗೂ ಆರ್.ಆರ್. ಸಂಖ್ಯೆ ನೀಡದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಕೂಡಲೇ ಸಂಪರ್ಕ ನೀಡಬೇಕು ಅಥವಾ ಬಡ್ಡಿ ಸಮೇತ ಹಣವನ್ನು ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು.
ಸೆಸ್ಕ್ ಇಇ ಜಿ.ಎಂ.ಮಹೇಶ್ ಕುಮಾರ್ ಮಾತನಾಡಿ, ವಿದ್ಯುತ್ ಕ್ಷೇತ್ರ ಖಾಸಗೀಕರಣ ಆದಲ್ಲಿ ಸರಬರಾಜು ಸೇರಿದಂತೆ ಆಡಳಿತವೂ ಖಾಸಗಿಯ ನಿಯಂತ್ರಣಕ್ಕೆ ಒಳಪಡಲಿದೆ. ರೈತರು ಹಾಗೂ ಸಾರ್ವಜನಿಕರ ಆಕ್ಷೇಪಣೆ ಮತ್ತು ವಿರೋಧವನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಂಗಲ್ ಕಟಿಂಗ್ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವುದು. ಸೀಹಳ್ಳಿ ಗ್ರಾಮದಲ್ಲಿನ ವಿದ್ಯುತ್ ಕಂಬಗಳ ಸಮಸ್ಯೆ ಬಗೆಹರಿಸುವುದು ಸೇರಿದಂತೆ ವಿವಿಧ ಗ್ರಾಮಗಳ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಬಗ್ಗೆ ರೈತರು ಮನವಿ ಸಲ್ಲಿಸಿದರು.
ಸಾರ್ವಜನಿಕರು ಹಾಗೂ ರೈತರು ನೀಡಿದ ಸಲಹೆ-ಸೂಚನೆಗಳನ್ನು ಪರಿಗಣಿಸಿದ ಎಇಇ ಕೆ.ವಿ. ವೀರೇಶ್ ಪ್ರತಿಕ್ರಿಯಿಸಿ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಹಾಯಕ ಇಂಜಿನಿಯರ್ ಚಂದ್ರಕಲಾ, ಕಿರಿಯ ಇಂಜಿನಿಯರ್‌ಗಳಾದ ಮಂಜು, ಗೀತಾ, ರಂಗಸ್ವಾಮಿ, ಫಿಯಾಜ್ ಪಾಷ, ನಾಗರಾಜು, ರೈತ ಸಂಘದ ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ, ರೈತ ಮುಖಂಡರಾದ ಶಾಂತಮೂರ್ತಿ, ಮಹದೇವಸ್ವಾಮಿ, ಕಿರಗಸೂರು ಪ್ರಸಾದ್ ನಾಯಕ್, ಬನ್ನಹಳ್ಳಿಹುಂಡಿ ಶಿವಕುಮಾರ್ ಇತರರು ಇದ್ದರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net