ದಸರಾ ಕಂಬಳ ಆಯೋಜನೆಗೆ ಸಿದ್ಧತೆ ಜೋರು

ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸುವ ಸಂಬಂಧ ಶಾಸಕ ಅಶೋಕ್ ರೈ ಶುಕ್ರವಾರ ವಿಜಯನಗರ 1ನೇ ಹಂತ ಬಳಿ ಸ್ಥಳ ಪರಿಶೀಲನೆ ನಡೆಸಿದರು. ವಿಜಯ್ ಕುಮಾರ್, ಹರ್ಷಾ ಪ್ರಿಯಂವದಾ, ಸುಂದರರಾಜ್, ಸುದರ್ಶನ್ ಇತರರಿದ್ದರು.
ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸುವ ಸಂಬಂಧ ಶಾಸಕ ಅಶೋಕ್ ರೈ ಶುಕ್ರವಾರ ವಿಜಯನಗರ 1ನೇ ಹಂತ ಬಳಿ ಸ್ಥಳ ಪರಿಶೀಲನೆ ನಡೆಸಿದರು. ವಿಜಯ್ ಕುಮಾರ್, ಹರ್ಷಾ ಪ್ರಿಯಂವದಾ, ಸುಂದರರಾಜ್, ಸುದರ್ಶನ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ಥಳ ಪರಿಶೀಲಿಸಿದ ಪುತ್ತೂರು ಶಾಸಕ ಅಶೋಕ್ ರೈ
  • 200 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಕಂಬಳ ಆಯೋಜನೆಗೆ ಸಿದ್ಧತೆಗಳು ಆರಂಭಗೊಂಡಿದ್ದು, ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ರೈ ಶುಕ್ರವಾರ ವಿಜಯನಗರ 1ನೇ ಹಂತ ಹಾಗೂ ಸಾತಗಳ್ಳಿ ಸಮೀಪದ ಮೈದಾನಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.
ಶಾಸಕ ಅಶೋಕ್ ರೈ ಮಾತನಾಡಿ, ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಕಳೆದ ವರ್ಷವೇ ಕಂಬಳ ನಡೆಸುವ ಉದ್ದೇಶವಿದ್ದರೂ ಅಂತಿಮ ಕ್ಷಣದಲ್ಲಿ ಸಾಧ್ಯವಾಗಿರಲಿಲ್ಲ. ಈ ಬಾರಿ ಅದ್ಧೂರಿಯಾಗಿ ಆಯೋಜಿಸಲು ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದರು.
ಸಾತಗಳ್ಳಿ ಸಮೀಪದ ಸ್ಥಳವು ವಿಶಾಲವಾಗಿದ್ದು, ವಾಹನ ನಿಲುಗಡೆಗೂ ಅನುಕೂಲಕರವಾಗಿದೆ. ಆದರೆ ಇನ್ನೂ ಯಾವುದೇ ಸ್ಥಳವನ್ನು ಅಂತಿಮಗೊಳಿಸಿಲ್ಲ. ಪರಿಶೀಲನೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಎರಡು ದಿನಗಳ ಕಾಲ ಹಗಲು ಮತ್ತು ರಾತ್ರಿ ಕಂಬಳ ಸ್ಪರ್ಧೆ ನಡೆಯಲಿದ್ದು, ಸುಮಾರು 150 ರಿಂದ 200 ಜೋಡಿ ಕಂಬಳ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 8 ಸಾವಿರ ಜನರು ಕುಳಿತು ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರಿಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ವಿಐಪಿ ಹಾಗೂ ವಿವಿಐಪಿ ಪಾಸ್ ವ್ಯವಸ್ಥೆಯೂ ಇರಲಿದೆ ಎಂದು ಹೇಳಿದರು.
ಕಂಬಳದ ಜತೆಗೆ ದಕ್ಷಿಣ ಕನ್ನಡದ ಸಾಂಪ್ರದಾಯಿಕ ಆಹಾರ ಮೇಳವೂ ಆಯೋಜಿಸಲಾಗುವುದು. ವಿಜೇತ ಕೋಣಗಳಿಗೆ ಚಿನ್ನದ ಬಹುಮಾನ ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ 5 ರಿಂದ 8 ಕೋಟಿ ರೂ. ವೆಚ್ಚವಾಗುವ ಸಾಧ್ಯತೆಯಿದ್ದು, ಪ್ರಾಯೋಜಕರ ಸಹಕಾರವೂ ಪಡೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ವೇಳೆ ಯಾವುದೇ ಅವಘಡ ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಂಬಳ ಕೋಣಗಳು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಸ್ಥಳ ವೀಕ್ಷಣೆಯಲ್ಲಿ ರಾಜ್ಯ ಕಂಬಳ ಸಮಿತಿಯ ಕಾರ್ಯದರ್ಶಿ ವಿಜಯ್ ಕುಮಾರ್, ಡಿಸಿಪಿಗಳಾದ ಹರ್ಷಾ ಪ್ರಿಯಂವದಾ, ಸುಂದರರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುದರ್ಶನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net