ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದ ಪಿ.ಆರ್.ತಿಪ್ಪೇಸ್ವಾಮಿ: ಆರ್.ಸುನಂದಮ್ಮ ಬಣ್ಣನೆ

ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಲವರ್ಣ ಚಿತ್ರ ರಚನಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆರ್.ಸುನಂದಮ್ಮ, ಪ್ರೊ.ಎನ್.ಕೆ.ಲೋಲಾಕ್ಷಿ, ಪ್ರೊ.ವಿಜಯಕುಮಾರಿ ಎಸ್.ಕರಿಕಲ್, ಡಾ.ಎಚ್.ಎಲ್.ಶೈಲಜಾ, ಡಾ.ಪುಟ್ಟನಂಜಯ್ಯ, ಶಿವಲಿಂಗಪ್ಪ, ಕೃಷ್ಣಮೂರ್ತಿ ಕಿಕ್ಕೇರಿ ಇತರರಿದ್ದರು.
ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಲವರ್ಣ ಚಿತ್ರ ರಚನಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆರ್.ಸುನಂದಮ್ಮ, ಪ್ರೊ.ಎನ್.ಕೆ.ಲೋಲಾಕ್ಷಿ, ಪ್ರೊ.ವಿಜಯಕುಮಾರಿ ಎಸ್.ಕರಿಕಲ್, ಡಾ.ಎಚ್.ಎಲ್.ಶೈಲಜಾ, ಡಾ.ಪುಟ್ಟನಂಜಯ್ಯ, ಶಿವಲಿಂಗಪ್ಪ, ಕೃಷ್ಣಮೂರ್ತಿ ಕಿಕ್ಕೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬದುಕನ್ನು ಮರು ರೂಪಿಸಿಕೊಳ್ಳುವಂತಹ ಸಾಹಿತ್ಯ ಕಟ್ಟಿಕೊಟ್ಟಿದ್ದಾರೆ
  • ಮನುಷ್ಯನ ಉದ್ಧಾರಕ್ಕಿಂತ ರಸ್ತೆ, ಬಹು ಮಹಡಿ ಕಟ್ಟಡ ಮತ್ತು ವಿಮಾನ ನಿಲ್ದಾಣಗಳನ್ನು ಕಟ್ಟುವುದು ದೇಶದ ಅಭಿವೃದ್ಧಿ ಎನ್ನುವಂತಾಗಿದೆ
ಮೈಸೂರು:ವಿದ್ಯಾರ್ಥಿ ಜೀವನದಲ್ಲಿಯೇ ವಾರ ಪತ್ರಿಕೆ ಆರಂಭಿಸುವ ಮೂಲಕ ಪಿ.ಆರ್.ತಿಪ್ಪೇಸ್ವಾಮಿ ಅವರು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಆರ್.ಸುನಂದಮ್ಮ ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಪಿ.ಆರ್.ತಿಪ್ಪೇಸ್ವಾಮಿ ಪೀಠದ ಸಹಯೋಗದಲ್ಲಿ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಜಲವರ್ಣ ಚಿತ್ರ ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಸ್ವಾರ್ಥ ಬದುಕಿಗೆ ಮಾದರಿಯಾಗಿದ್ದ ಪಿ.ಆರ್.ತಿಪ್ಪೇಸ್ವಾಮಿ ಅವರು, ಸಣ್ಣವರು- ದೊಡ್ಡವರು ಎನ್ನುವ ಅಂತರವನ್ನು ಇಟ್ಟುಕೊಳ್ಳದೆ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಸ್ಥಿತಿವಂತರಾದರೂ ಅಹಂ, ಮೇಲರಿಮೆ ಎಂಬುದು ಅವರಲ್ಲಿರಲಿಲ್ಲ ಎಂದು ಹೇಳಿದರು.
ಪ್ರಕೃತಿಯಂತೆ ಸದಾ ಚಲನಶೀಲತೆ ವ್ಯಕ್ತಿತ್ವವುಳ್ಳ ಅವರು ಒಂದು ವಿಷಯದಲ್ಲಿ ಆಳವಾಗಿ ತೊಡಗಿಸಿಕೊಂಡು ಮತ್ತೆ ಬದುಕನ್ನು ಮರು ರೂಪಿಸಿಕೊಳ್ಳುವಂತಹ ಸಾಹಿತ್ಯ ಕಟ್ಟಿಕೊಟ್ಟಿದ್ದಾರೆ. ಮದುವೆಯಾಗದಿದ್ದರೂ ಹತ್ತಾರು ಮಕ್ಕಳನ್ನು ಸಲಹುತ್ತಿದ್ದರು. ಎಂದಿಗೂ ಶ್ರೀಮಂತರ ಮಗನಾಗಿ ಬದುಕಲಿಲ್ಲ. ಪತ್ರಿಕೆಗಳಿಗೆ ಚಿತ್ರಗಳನ್ನು ಬರೆದು ಬಂದ ಹಣದಿಂದ ಬದುಕು ಕಟ್ಟಿಕೊಂಡರು. ಯುವರಾಜ ಕಾಲೇಜಿನಲ್ಲಿ ಸಂಘ ಕಟ್ಟಿ ಜಾನಪದ ಅಧ್ಯಯನ ಪ್ರಾರಂಭಿಸಿದರು ಎಂದರು.
ಇಂದು ಅಭಿವೃದ್ಧಿ ಅರ್ಥವೇ ಬದಲಾಗುತ್ತಿದೆ. ಮನುಷ್ಯನ ಉದ್ಧಾರಕ್ಕಿಂತ ರಸ್ತೆ, ಬಹು ಮಹಡಿ ಕಟ್ಟಡ ಮತ್ತು ವಿಮಾನ ನಿಲ್ದಾಣಗಳನ್ನು ಕಟ್ಟುವುದು ದೇಶದ ಅಭಿವೃದ್ಧಿ ಎನ್ನುವಂತಾಗಿದೆ. ವಿಶ್ವವಿದ್ಯಾನಿಲಯದ ಹುದ್ದೆಗಳು ಖಾಲಿ ಇದ್ದರೂ ಅದನ್ನು ಭರ್ತಿ ಮಾಡುವ ಕೆಲಸ ಸರ್ಕಾರದಿಂದ ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಭೌತಿಕ ಮಟ್ಟ ಬೆಳವಣಿಗೆಗೆ ಧಕ್ಕೆಯಾಗುತ್ತದೆ ಎಂದು ವಿಷಾದಿಸಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಪಿ.ಆರ್.ತಿಪ್ಪೇಸ್ವಾಮಿ ಪೀಠದ ಸಂದರ್ಶಕ ಪ್ರಾಧ್ಯಾಪಕಕಿ ಪ್ರೊ.ವಿಜಯಕುಮಾರಿ ಎಸ್.ಕರಿಕಲ್, ಪ್ರಾಧ್ಯಾಪಕರಾದ ಡಾ.ಎಚ್.ಎಲ್.ಶೈಲಜಾ, ಡಾ.ಪುಟ್ಟನಂಜಯ್ಯ, ಕಲಾವಿದರಾದ ಶಿವಲಿಂಗಪ್ಪ, ಕೃಷ್ಣಮೂರ್ತಿ ಕಿಕ್ಕೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net