ಅಂಚೆ ಇಲಾಖೆಯ ಸಾಂಸ್ಕೃತಿಕ ಸಮ್ಮೇಳನ : ಕೇರಳ ಚಾಂಪಿಯನ್, ಕರ್ನಾಟಕ ರನ್ನರ್‌ಅಪ್
ಅಂಚೆ ಇಲಾಖೆ ಆಯೋಜಿಸಿದ್ದ 38ನೇ ಅಖಿಲ ಭಾರತ ಸಾಂಸ್ಕೃತಿಕ ಸಮ್ಮೇಳನದಲ್ಲಿ ರನ್ನರ್‌ಅಪ್ ಪ್ರಶಸ್ತಿ ಪಡೆದುಕೊಂಡ ಕರ್ನಾಟಕ ತಂಡಕ್ಕೆ ಗಣ್ಯರು ಟ್ರೋಫಿ ವಿತರಿಸಿದರು. ಪಂಡಿತ್ ವೆಂಕಟೇಶ್ ಕುಮಾರ್, ಕೆ. ಪ್ರಕಾಶ್, ಸಂದೇಶ್ ಮಹದೇವಪ್ಪ, ವಿ. ತಾರ ಹಾಗೂ ಇತರರು ಇದ್ದರು.
Published on:
Copied
Follow Us
ಮೈಸೂರು: ಅಂಚೆ ಇಲಾಖೆ ವತಿಯಿಂದ ನಗರದಲ್ಲಿ ಆಯೋಜಿಸಿದ್ದ 38ನೇ ಅಖಿಲ ಭಾರತ ಸಾಂಸ್ಕೃತಿಕ ಸಮ್ಮೇಳನದಲ್ಲಿ ಕೇರಳ ಚಾಂಪಿಯನ್, ಕರ್ನಾಟಕ ರನ್ನರ್‌ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ನಗರದ ಅಂಚೆ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 38ನೇ ಅಖಿಲ ಭಾರತ ಸಾಂಸ್ಕೃತಿಕ ಸಮ್ಮೇಳನದ ಸಮಾ ರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಒಟ್ಟಾರೆ ಪ್ರದರ್ಶನದ ಆಧಾರದ ಮೇಲೆ ಕೇರಳ ಅಂಚೆ ವಲಯವು 108 ಅಂಕಗಳೊಂದಿಗೆ ಒಟ್ಟು 22 ಬಹುಮಾನಗಳನ್ನು ಗಳಿಸಿ (17 ಪ್ರಥಮ, 4 ದ್ವಿತೀಯ ಹಾಗೂ 1 ತೃತೀಯ ಬಹುಮಾಗಳು) ಚಾಂಪಿಯನ್‌ಶಿಪ್ ಪಡೆಯಿತು.
ಕರ್ನಾಟಕ ಅಂಚೆ ವಲಯವು 105 ಅಂಕಗಳೊಂದಿಗೆ ಒಟ್ಟು 34 ಬಹುಮಾನಗಳನ್ನು (16 ಪ್ರಥಮ, 14 ದ್ವಿತೀಯ ಹಾಗೂ 4 ತೃತೀಯ) ಪಡೆದು ರನ್ನರ್‌ಅಪ್ ಸ್ಥಾನವನ್ನು ಪಡೆಯಿತು. ಒಡಿಶಾ ಅಂಚೆ ವಲಯವು 38 ಅಂಕಗಳೊಂದಿಗೆ ಒಟ್ಟು 11 ಬಹುಮಾನಗಳನ್ನು ಗೆದ್ದು ತೃತೀಯ ಸ್ಥಾನವನ್ನು ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಹಿಂದುಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್, ಪ್ರತಿಯೊಬ್ಬರ ಜೀವನದಲ್ಲೂ ವೃತ್ತಿ ಮತ್ತು ಪ್ರವೃತ್ತಿ ಕೂಡ ಬಹಳ ಮುಖ್ಯ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ತುಂಬಾ ಅರ್ಥಗರ್ಭಿತ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಅಂಚೆ ವೃತ್ತದ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್, ಡಿಜಿಟಲೀಕರಣದ ಇಂದಿನ ಯುಗದಲ್ಲಿ ಒತ್ತಡಕೊಳ್ಳಗಾದಾಗ ಸಂಗೀತ ನೆಮ್ಮದಿಯನ್ನು ತರುತ್ತದೆ ಎಂದರು.
ಫೆ.16 ರಿಂದ 20ರವರೆಗೆ ನಗರದ ಅಂಚೆ ತರಬೇತಿ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸಮಾವೇಶದಲ್ಲಿ ದೇಶದಾದ್ಯಂತದ 21 ಅಂಚೆ ವಲಯಗಳ ಪ್ರತಿನಿಧಿಗಳಾಗಿ 293 ಸ್ಪರ್ಧಿಗಳು (ಅಂಚೆ ಇಲಾಖೆ ಉದ್ಯೋಗಿಗಳು ಹಾಗೂ ಅವರ ಮಕ್ಕಳು) ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಅಂಚೆ ವೃತ್ತದ ಸ್ಥಾನಿಕ ನಿರ್ದೇಶಕರಾದ ಸಂದೇಶ್ ಮಹದೇವಪ್ಪ. ಬೆಂಗಳೂರು ಕೇಂದ್ರ ಅಂಚೆ ವಲಯದ ನಿರ್ದೇಶಕ ವಿ. ತಾರ, ಉತ್ತರ ಕರ್ನಾಟಕ ಅಂಚೆ ವಲಯದ ನಿರ್ದೇಶಕ ಹರ್ಷ, ಮೈಸೂರು ಅಂಚೆ ತರಬೇತಿ ಕೇಂದ್ರದ ನಿರ್ದೇಶಕ ಡಾ ಆಶಿಶ್ ಸಿಂಗ್ ಠಾಕೂರ್ ಇದ್ದರು.