ಸರ್ಕಾರಿ ಶಾಲೆ ಮುಚ್ಚಲು ಹುನ್ನಾರ : ಎಐಡಿಎಸ್‌ಒ ಪ್ರತಿಭಟನಾ ಸಮಾವೇಶ

 ಸರ್ಕಾರಿ ಶಾಲೆ ಮುಚ್ಚುವ ಕ್ರಮ ಖಂಡಿಸಿ ಎಐಡಿಎಸ್‌ಒ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸಹಯೋಗದಲ್ಲಿ ನಗರದಲ್ಲಿ ಪ್ರತಿಭಟನಾ ಸಮಾವೇಶ ನಡೆಯಿತು. ಚಂದ್ರಕಲಾ, ಪ್ರೊ.ಕಾಳಚೆನ್ನೆಗೌಡ, ಪಿ.ಮರಂಕಯ್ಯ, ಚಂದ್ರಶೇಖರ್ ಮೇಟಿ, ಜಿ.ಎಸ್.ಸೀಮಾ ಇತರರಿದ್ದರು.
ಸರ್ಕಾರಿ ಶಾಲೆ ಮುಚ್ಚುವ ಕ್ರಮ ಖಂಡಿಸಿ ಎಐಡಿಎಸ್‌ಒ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸಹಯೋಗದಲ್ಲಿ ನಗರದಲ್ಲಿ ಪ್ರತಿಭಟನಾ ಸಮಾವೇಶ ನಡೆಯಿತು. ಚಂದ್ರಕಲಾ, ಪ್ರೊ.ಕಾಳಚೆನ್ನೆಗೌಡ, ಪಿ.ಮರಂಕಯ್ಯ, ಚಂದ್ರಶೇಖರ್ ಮೇಟಿ, ಜಿ.ಎಸ್.ಸೀಮಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ ಆರೋಪ
  • ರಾಜ್ಯ ಸರ್ಕಾರದ ಪ್ರತಿಭಟನಾ ಸಮಾವೇಶ
ಮೈಸೂರು: ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಮೈಸೂರು ಜಿಲ್ಲಾದ್ಯಂತ 1,666 ಸರ್ಕಾರಿ ಶಾಲೆ ಮುಚ್ಚುತ್ತಿರುವುದನ್ನು ವಿರೋಧಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ನಗರದ ಪುರಭವನದ ಆವರಣದಲ್ಲಿ ಪ್ರತಿಭಟನಾ ಸಮಾವೇಶ ಭಾನುವಾರ ನಡೆಯಿತು.
ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ ತಮ್ಮ ಜೀವನವನ್ನೇ ಶಾಲೆಗಳಿಗಾಗಿ ಅರ್ಪಿಸಿದರು. ಕಳೆದ ಬಿಜೆಪಿ ಸರ್ಕಾರ ಸಂಯೋಜನೆ ಹೆಸರಿನಲ್ಲಿ 13,800 ಸರ್ಕಾರಿ ಶಾಲೆ ಮುಚ್ಚಲು ಹೊರಟಿತ್ತು. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ 40,000 ಶಾಲೆ ಮುಚ್ಚಲು ಹೊರಟಿದೆ. ಒಟ್ಟಾರೆ ಎಲ್ಲ ಸರ್ಕಾರಗಳ ಅಂತಿಮ ಗುರಿ ಸರ್ಕಾರಿ ಶಾಲೆ ಮುಚ್ಚಿ ಬಡ ವಿದ್ಯಾರ್ಥಿಗಳಿಂದ ಶಿಕ್ಷಣ ಕಸಿದುಕೊಳ್ಳುವುದೇ ಆಗಿದೆ ಎಂದು ಕಿಡಿಕಾರಿದರು.
ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸರ್ಕಾರವು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ 2,500 ಕೋಟಿ ರೂ. ಸಾಲ ಮಾಡಿ ತೆರೆಯುತ್ತಿದೆ. ಖಾಸಗಿ ಬ್ಯಾಂಕ್‌ನಿಂದ ಸಾಲ ಪಡೆದು ಸರ್ಕಾರಿ ಶಾಲೆ ನಡೆಸುವಂತಹ ಕೆಟ್ಟ ಪರಿಸ್ಥಿತಿಗೆ ಸರ್ಕಾರ ಬಂದಿದೆಯೇ? ನಾವು ಕಟ್ಟುತ್ತಿರುವ ತೆರಿಗೆಯು ಸಾಲದೇ? ಎಂದು ಪ್ರಶ್ನಿಸಿದರು.
ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಹೊರಗುತ್ತಿಗೆ ನೀಡಿ ಸರ್ಕಾರಿ ಶಾಲೆ ಖಾಸಗಿ ಶಾಲೆಗಳನ್ನಾಗಿ ಪರಿವರ್ತಿಸುವ ಹುನ್ನಾರ ಮಾಡಲಾಗುತ್ತಿದೆ. ಪ್ರತಿ ಕಿ.ಮೀ. ವ್ಯಾಪ್ತಿಯ ಒಳಗೆ ಪ್ರಾಥಮಿಕ ಶಾಲೆ ಇರಬೇಕೆನ್ನುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಉಲ್ಲಂಘಿಸುತ್ತದೆ ಎಂದು ಹರಿಹಾಯ್ದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳಚೆನ್ನೆಗೌಡ ಮಾತನಾಡಿ,  ಕನ್ನಡ ಶಾಲೆಗಳು ಪ್ರತಿ ಗ್ರಾಮದಲ್ಲಿ ಇರಬೇಕು. ಈಗಾಗಲೇ ರಾಜ್ಯದಲ್ಲಿ 62 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ.  7,000ಕ್ಕೂ ಹೆಚ್ಚು ಏಕೋಪಧ್ಯಾಯ ಶಾಲೆಗಳಿವೆ. 23 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆ ಕಟ್ಟಡಗಳು ದುರಸ್ತಿಯಾಗಬೇಕಾಗಿದೆ. ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸದೆ ಸರ್ಕಾರಿ ಶಾಲೆಗಳು ಸೊರಗುವಂತೆ ಮಾಡಿದ್ದು, ಹಿಂಭಾಗಲಿನಿಂದ ಸರ್ಕಾರಿ ಶಾಲೆ ಮುಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘಟನೆಯ ನಂಜನಗೂಡು ತಾಲೂಕು ಪ್ರಧಾನ ಕಾರ್ಯದರ್ಶಿ ಹೆಜ್ಜೆಗೆ ಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗದ ಶಾಲೆಗಳನ್ನು ಮುಚ್ಚುವ ಕ್ರಮ ಖಂಡನೀಯ. ಎಲ್ಲೆಲ್ಲಿ ಶಾಲೆಗಳನ್ನು ಮುಚ್ಚುತ್ತಾರೆಯೋ ಅಲ್ಲಲ್ಲಿ ಜನ ಹೋರಾಟ ಮಾಡಬೇಕು ಎಂದು ಹೇಳಿದರು. 
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಪಿ.ಮರಂಕಯ್ಯ ಮಾತನಾಡಿ, ನಮ್ಮ ಊರಿನಲ್ಲಿ ನಾವು ಓದಬೇಕಾದರೆ ಶಾಲೆ ಇರಲಿಲ್ಲ. ಹೋರಾಟ ಮಾಡಿದ್ದರಿಂದ ಶಾಲೆ ಪ್ರಾರಂಭವಾಯಿತು. ಆದರೆ ಈ ಶಾಲೆಯನ್ನೇ ಮುಚ್ಚುತ್ತಿರುವುದು ಖಂಡನೀಯ. ಶಾಲೆಗಳನ್ನು ಮುಚ್ಚಿ ಕೆಪಿಎಸ್  ಮ್ಯಾಗ್ನೆಟ್ ಶಾಲೆ ಶುರುಮಾಡುತ್ತೇವೆ ಎಂಬುದು ಬೂಟಾಟಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಎಐಕೆಕೆಎಂಎಂಎಸ್ ರೈತ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಚ್.ಪಿ.ಶಿವಪ್ರಕಾಶ್, ಮಹಿಳಾ ಹೋರಾಟಗಾರ್ತಿ ಜಿ.ಎಸ್.ಸೀಮಾ, ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಮುಖಂಡರಾದ ಚಂದ್ರಶೇಖರ್ ಮೇಟಿ,  ಎಐಡಿವೈಒ ಯುವ ಮುಖಂಡ ಟಿ.ಯು. ಸುನೀಲ್ , ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ಬೆಳವಾಡಿ ನಂಜುಂಡಸ್ವಾಮಿ, ದಿವಾಕರ್, ಕೆಲ್ಲಹಳ್ಳಿ ಲಲಿತಮ್ಮ, ಹುಸ್ಕೂರು ಪ್ರದೀಪ್, ರಾಂಪುರ ವಿನೋದ್ ಕುಮಾರ್  ಮಾತನಾಡಿದರು.
 ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಿತಿನ್, ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಚಂದನಾ, ಚಂದ್ರಿಕಾ, ಹೇಮಾ, ದಿಶಾ, ಅಂಜಲಿ, ಅಭಿಷೇಕ್, ನಂದೀಶ್ ಹಾಗೂ ವಿವಿಧ ಗ್ರಾಮಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಹೋರಾಟಕ್ಕಾಗಿ ಸಮಿತಿ ರಚನೆ

ಸಾರ್ವಜನಿಕ ಶಿಕ್ಷಣ ಉಳಿಸಲು ಮುಂದಿನ ದಿನಗಳಲ್ಲಿ ಬಲಿಷ್ಠ  ಹೋರಾಟವನ್ನು ಕಟ್ಟಲು ಜಿಲ್ಲಾ ಮಟ್ಟದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು. 
ಸಮಿತಿಯ ಸಲಹೆಗಾರರಾಗಿ ಕರ್ನಾಟಕ ರಾಜ್ಯ ರೈತ ಸಂಘಟನೆಯ ಹೊಸಕೋಟೆ ಬಸವರಾಜ್, ಸಾಮಾಜಿಕ ಹೋರಾಟಗಾರ ಉಗ್ರ ನರಸಿಂಹೇಗೌಡ, ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಕಾಳಚನ್ನೆಗೌಡ, ಲತಾ ಮೈಸೂರು, ಕರ್ನಾಟಕ ರಾಜ್ಯ ರೈತ ಸಂಘಟನೆ ಜಿಲ್ಲಾಧ್ಯಕ್ಷ ಪಿ.ಮರಂಕಯ್ಯ, ವಿದ್ಯಾ ಶಂಕರ್ ಹಾಗೂ ಪ್ರೇಮ್ ರಾಜ್ ಆಯ್ಕೆಯಾಗಿದ್ದಾರೆ. 
ಅಧ್ಯಕ್ಷರಾಗಿ ಇಮ್ಮಾವು ಹುಂಡಿಯ ರಾಜಣ್ಣ, ಕಾರ್ಯದರ್ಶಿಯಾಗಿ ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಆಗಿ ಚಂದ್ರಕಲಾ ಹಾಗೂ ಉಪಾಧ್ಯಕ್ಷರಾಗಿ ಚೋರನಹಳ್ಳಿ ಶಿವಣ್ಣ, ಹೆಜ್ಜಿಗೆ ಪ್ರಕಾಶ್ ಸೇರಿದಂತೆ 16 ಜನ ಹಾಗೂ ವಿವಿಧ ಹಳ್ಳಿಗಳಿಂದ 60ಕ್ಕೂ ಹೆಚ್ಚು ಸದಸ್ಯರಾಗಿ ಆಯ್ಕೆ ಮಾಡಲಾಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net