ಮೈಸೂರು: ನಗರದ ನಜರ್‌ಬಾದ್‌ನಲ್ಲಿರುವ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‌್ಯಾಲಿ ಭಾನುವಾರ ಆರಂಭವಾಗಿದ್ದು, ಮೊದಲ ದಿನ 800 ಅಭ್ಯರ್ಥಿಗಳ 2ನೇ ಹಂತದ ಸಂದರ್ಶನದಲ್ಲಿ ದೈಹಿಕ ಪರೀಕ್ಷೆ ನಡೆಯಿತು.
ಭಾರತೀಯ ಸೇನೆಯಿಂದ ನಡೆಯುತ್ತಿರುವ ಅಗ್ನಿವೀರ್ ನೇಮಕಾತಿ ಏ.27ರವರೆಗೂ ನಡೆಯಲಿದ್ದು, ನಿತ್ಯ 600 ರಿಂದ 800 ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗಲಿದ್ದಾರೆ.
ಕಳೆದ ಜೂನ್‌ನಲ್ಲಿ ನಡೆಸಿದ ಮೊದಲ ಹಂತದ ಲಿಖಿತ ಪರೀಕ್ಷೆಯಲ್ಲಿ ಪಾಸಾಗಿರುವ 6,235 ಅಭ್ಯರ್ಥಿಗಳು 2ನೇ ಹಂತದ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 8 ದಿನ ನಡೆಯುವ ನೇಮಕಾತಿ ರ‌್ಯಾಲಿಯಲ್ಲಿ 6043 ಪುರುಷ ಹಾಗೂ 192 ಮಹಿಳಾ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.
ಮೈಸೂರಿನ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿದ್ದ ಅಭ್ಯರ್ಥಿಗಳು ಭಾನುವಾರ ಚಾಮುಂಡಿವಿಹಾರ ಕ್ರೀಡಾಂಗಣದ ಬಳಿ ಆಗಮಿಸಿದರು. ಅಭ್ಯರ್ಥಿಗಳ ದಾಖಲೆ ಪರಿಶೀಲಿಸಿದ ಭಾರತೀಯ ಸೇನೆ ನೇಮಕಾತಿ ವಿಭಾಗದ ಅಧಿಕಾರಿಗಳು ಮೊದಲ ಸುತ್ತಿನ ಲಿಖಿತ ಪರೀಕ್ಷೆಯಲ್ಲಿ ಪಾಸಾಗಿರುವುದನ್ನು ಖಚಿತಪಡಿಸಿಕೊಂಡರು.
ನಂತರ ಕ್ರೀಡಾಂಗಣದ ಒಳಗೆ ಪ್ರವೇಶಿಸಲು ಅನುಮತಿ ನೀಡಿದರು. ಬಿಸಿಲಿಗೂ ಮುನ್ನವೇ ಓಟದ ಪರೀಕ್ಷೆ ನಡೆಸಲಾಯಿತು. ನಂತರ ಕ್ರಮ ಸಂಖ್ಯೆ ನೀಡಿ, ಎದೆ ಸುತ್ತಳತೆ, ಎತ್ತರ, ಸೇರಿದಂತೆ ಇನ್ನಿತರ ದೈಹಿಕ ಪರೀಕ್ಷೆ ನಡೆಸಲಾಯಿತು.
ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ನಡೆಸಲಾಯಿತು. ಸೇನೆಯ ಹಿರಿಯ ಅಧಿಕಾರಿಗಳು ಪರೀಕ್ಷಾ ಪ್ರಕ್ರಿಯೆ ವೀಕ್ಷಿಸಿದರು. ಪರೀಕ್ಷಾ ಪ್ರಕ್ರಿಯೆಯ ವಿಡಿಯೋ ಚಿತ್ರೀರಣ ಮಾಡಿಕೊಳ್ಳಲಾಯಿತು.