ಶಿಕ್ಷಣ ರಂಗಕ್ಕೆ ಜ್ಯೋತಿಬಾಪುಲೆ ಕೊಡುಗೆ ದೊಡ್ಡದು

  ತಿ.ನರಸೀಪುರದ ಪ್ರಗತಿಪರ ಚಿಂತಕರ ವೇದಿಕೆ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ  ಮಹಾತ್ಮ ಜ್ಯೋತಿಬಾಪುಲೆ ಜಯಂತಿಯಲ್ಲಿ  ಕೆ.ಎನ್.ಪ್ರಭುಸ್ವಾಮಿ, ಎನ್.ಲಿಂಗಪ್ಪಾಜಿ, ಶಿವಕುಮಾರ್, ಕುಕ್ಕೂರು ರಾಜು, ಎಸ್.ಸಿ.ಗಣೇಶಸ್ವಾಮಿ ಇತರರು ಇದ್ದರು.
ತಿ.ನರಸೀಪುರದ ಪ್ರಗತಿಪರ ಚಿಂತಕರ ವೇದಿಕೆ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾತ್ಮ ಜ್ಯೋತಿಬಾಪುಲೆ ಜಯಂತಿಯಲ್ಲಿ ಕೆ.ಎನ್.ಪ್ರಭುಸ್ವಾಮಿ, ಎನ್.ಲಿಂಗಪ್ಪಾಜಿ, ಶಿವಕುಮಾರ್, ಕುಕ್ಕೂರು ರಾಜು, ಎಸ್.ಸಿ.ಗಣೇಶಸ್ವಾಮಿ ಇತರರು ಇದ್ದರು.
Published on
ತಿ.ನರಸೀಪುರ: ಶಿಕ್ಷಣ ರಂಗಕ್ಕೆ ಜ್ಯೋತಿಬಾಪುಲೆ ಕೊಡುಗೆ ದೊಡ್ಡದು ಎಂದು ಚಿಂತಕರ ವೇದಿಕೆ ಸಂಚಾಲಕ ಕೆ.ಎನ್.ಪ್ರಭುಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ರಸ್ತೆಯಲ್ಲಿರುವ ಪ್ರಗತಿಪರ ಚಿಂತಕರ ವೇದಿಕೆಯ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಮಹಾತ್ಮ ಜ್ಯೋತಿಬಾಪುಲೆ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಹಿಂದುಳಿದ ವರ್ಗದ ಜನರಿಗೆ, ಮಹಿಳೆಯರಿಗೆ ಶಿಕ್ಷಣವೇ ಬೇಡ ಎಂಬ ಪರಿಸ್ಥಿತಿ ಇದ್ದ ಕಾಲದಲ್ಲಿ ಪತ್ನಿ ಸಾವಿತ್ರಿಬಾಯಿ ಪುಲೆ ಅವರ ಸಹಕಾರ ಪಡೆದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮೊದಲು ಶಾಲೆಯನ್ನು
ತೆರೆದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಂದಿನಿಂದಲೇ ದೇಶದಲ್ಲಿ ಮಹಿಳಾ ಶಿಕ್ಷಣದ ಕ್ರಾಂತಿ ಆರಂಭವಾಯಿತು ಎಂದರು.
ಆದ್ದರಿಂದಲೇ ಜ್ಯೋತಿ ಬಾಪುಲೆ ಅವರನ್ನು ಆಧುನಿಕ ಭಾರತದ ಸುಧಾರಕ, ಶಿಕ್ಷಣ ಪ್ರೇಮಿ, ಮಹಿಳಾ ಶಿಕ್ಷಣದ ಹರಿಕಾರ, ಸಾಮಾಜಿಕ ಹೋರಾಟಗಾರ ಎನ್ನುತ್ತಾರೆ. ಈ ಎಲ್ಲ ಕೀರ್ತಿಗಳ ಹಿನ್ನೆಲೆಯಲ್ಲಿ ದಂಪತಿಯ ಕೊಡುಗೆ ಅನನ್ಯವಾಗಿದೆ ಎಂದರು. ಜಾತಿ ವ್ಯವಸ್ಥೆ, ತಾರತಮ್ಯ ಮತ್ತು ಅಸಮಾನತೆ ವಿರುದ್ಧ ಹೋರಾಡಲು ಸತ್ಯಶೋಧಕ ಸಮಾಜವನ್ನು ಜ್ಯೋತಿ ಬಾಪುಲೆ
ಸ್ಥಾಪಿಸಿದರು. ಅವರ ಜಯಂತಿ ಆಚರಿಸುವುದೇ ಒಂದು ಧನ್ಯತೆ ಎಂದರು. ದೇಶಕ್ಕೆ ಸಮಾನತೆ ಮತ್ತು ಶಿಕ್ಷಣದ ಮಹತ್ವವನ್ನು ತಿಳಿಸುವ ಕೆಲಸವನ್ನು ಅಂದೇ ಮಾಡಿದ ಮಹಾತ್ಮರ ಬಗ್ಗೆ ಹೊಸ ಪೀಳಿಗೆಗೆ ತಿಳಿಸುವ ಕಾರ್ಯ ಹೆಚ್ಚಾಗಿ ನಡೆಯಬೇಕು ಎಂದರು.
ಕೆಲವೇ ಜನರಿಗೆ ಮೀಸಲಾಗಿದ್ದ ಶಿಕ್ಷಣವನ್ನು ಸಾರ್ವತ್ರೀಕರಣ ಗೊಳಿಸಬೇಕು ಎಂದು ಜ್ಯೋತಿಬಾಪುಲೆ ಮತ್ತು ಸಾವಿತ್ರಿಬಾಯಿ ಫುಲೆ ಅಂದು ಮಾಡಿದ್ದ ಸಂಕಲ್ಪ ಇಂದು ಫಲ ನೀಡಿದೆ. ಸಮಾಜದ ಸುಧಾರಣೆ ಅವರ ಹೆಜ್ಜೆಗಳು ದೃಢವಾಗಿದ್ದವು. ಸಮಾನತೆ ಮತ್ತು ಮಾನವ ಹಕ್ಕುಗಳ ಮಹತ್ವವನ್ನು ಅರ್ಥ ಮಾಡಿಕೊಂಡು ಜೀವನ ಉದ್ದಕ್ಕೂ ದಂಪತಿ ದಾರಿ ಕಂಡುಕೊಂಡರು ಎಂದರು. ಸಾವಿತ್ರಿ ಮತ್ತು ಜ್ಯೋತಿ ಬಾಪುಲೆ ರವರ ನಿಸ್ವಾರ್ಥ ಬದುಕು, ಹೋರಾಟಗಳು ನಮಗೆ ಪ್ರೇರಣೆಯಾಗಬೇಕು ಎಂದು ಕೆ.ಎನ್.ಪ್ರಭುಸ್ವಾಮಿ ಆಶಿಸಿದರು.
ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಎನ್.ಲಿಂಗಪ್ಪಾಜಿ, ತಾಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಬಸವರಾಜು, ದಸಂಸ ಸಂಚಾಲಕ ಕುಕ್ಕುರು ರಾಜು, ಮುಖಂಡರಾದ ಎಸ್.ಸಿ.ಗಣೇಶಸ್ವಾಮಿ, ಸೋಸಲೆ ಶಿವಕುಮಾರ್, ಮೂಗೂರು ಎಂ.ಆರ್. ಸುಂದರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net