ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಿ ಪರವಾನಗಿ ಪಡೆದ ಭೂಮಾಪಕರ ಸಂಘದ ವತಿಯಿಂದ ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದರು. ಬಿ.ಆರ್.ಮಂಜು, ಬಿ.ಕೆ.ಪ್ರಜ್ವಲ್, ಎಚ್.ಎಂ.ಮಂಜುನಾಥ, ಅರುಣ್ ಕುಮಾರ್ ಇತರರು ಇದ್ದರು.
ಪಿರಿಯಾಪಟ್ಟಣ: ಪರವಾನಗಿ ಪಡೆದ ಭೂಮಾಪಕರನ್ನು ಕಾಯಂ ನೌಕರರು ಎಂದು ಪರಿಗಣಿಸುವುದೂ ಸೇರಿದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಿ ಪರವಾನಗಿ ಪಡೆದ ಭೂಮಾಪಕರ ಸಂಘದ ತಾಲೂಕು ಘಟಕ ಆಗ್ರಹಿಸಿದೆ.
ಸೋಮವಾರ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದ ಸಂಘದ ಅಧ್ಯಕ್ಷ ಬಿ.ಆರ್.ಮಂಜು ಮಾತನಾಡಿ, ಕಳೆದ ಸುಮಾರು 25 ವರ್ಷಗಳಿಂದ ಜಿಲ್ಲೆಯ ಎಲ್ಲ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಭೂಮಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದು ಇದುವರೆಗೂ ನಾವು ಇಲಾಖೆಯಲ್ಲಿ ಮಾಡಿರುವ ಕೆಲಸಗಳಿಗೆ ನಿಗದಿತ ಸಂಭಾವನೆ ಸಿಗುತ್ತಿಲ್ಲ, ನಮಗೆ ಯಾವುದೇ ಸೇವಾ ಭದ್ರತೆ ಇಲ್ಲ, ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಸರ್ವೇ ಇಲಾಖೆಯಿಂದ ಸೂಚನೆ ನೀಡುವ ಪೋಡಿ ಮುಕ್ತ ಅಭಿಯಾನ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ದೇವಸ್ಥಾನ, ಕೆರೆ ಆಳತೆ, ದರ್ಖಾಸ್ತು ಪೋಡಿ ಆಫ್‌ಲೈನ್ ಮತ್ತು ಆನ್‌ಲೈನ್, ಪೋಡಿ ಮುಕ್ತ ಅಭಿಯಾನ, ಸ್ವಾ ಮಿತ್ವ ಯೋಜನೆ, ಆಕಾರ್ ಬಂದ್, ಡಿಜಿಟೈಜೇಷನ್ ಮತ್ತು ಇನ್ನೂ ಇತರ ಕೆಲಸಗಳನ್ನು ಮಾಡಲು ಪರವಾನಗಿ ಪಡೆದ ಭೂ ಮಾಪಕರನ್ನು ಬಳಸಿಕೊಂಡು ಈ ಎಲ್ಲ ಕೆಲಸಗಳನ್ನು ಮಾಡಿದ್ದ ನಮಗೆ ಸರಿಯಾಗಿ ಸಂಭಾವನೆ ನೀಡಿರುವುದಿಲ್ಲ. ಹೀಗಾಗಿ ನಮಗೆ ಜೀವನ ನಿರ್ವಹಣೆ ತುಂಬ ಕಷ್ಟಕರವಾಗಿದೆ ಎಂದರು.
ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಿದರು. ರಾಜ್ಯ ಸಂಘ, ಜಿಲ್ಲಾ ಸಂಘದ ಸೂಚನೆಯಂತೆ ತಾಲೂಕು ಸಂಘವು ಮುಷ್ಕರಕ್ಕೆ ಬೆಂಬಲ ನೀಡಲಿದೆ. ರೈತರಿಗೆ ತೊಂದರೆ ಆಗದಂತೆ ನಮ್ಮಲ್ಲಿರುವ ಕಡತಗಳನ್ನು ಕಚೇರಿಗೆ ಹಿಂತಿರುಗಿಸಲಿದ್ದೇವೆ ಎಂದರು.
ಸರ್ಕಾರ ಸ್ಪಂದಿಸದೆ ಇರುವುದರಿಂದ ಪರವಾನಗಿ ಭೂ ಮಾಪಕರಿಗೆ ಜೀವನ ಮಾಡಲು ಹಾಗೂ ಕೆಲಸಗಳ ಒತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗುವ ಪ್ರಸಂಗ ಬಂದಿದೆ. ಹೀಗಾಗಿ ನಮ್ಮ ನಿರ್ದಿಷ್ಟ ಬೇಡಿಕೆಗಳಾದ ಸೇವಾ ಕಾಯಂ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಒಂದು ಬಾರಿ ವಿಶೇಷ ನೇಮಕಾತಿ ಅಡಿಯಲ್ಲಿ ಪರವಾನಗಿ ಭೂಮಾಪಕರನ್ನು, ಸರ್ಕಾರಿ ಸೇವೆಯಲ್ಲಿ ಸಕ್ರಮಗೊಳಿಸುವವರೆಗೂ ಯಾವುದೇ ರೀತಿಯ ಅಳತೆ ಕೆಲಸಗಳನ್ನು ಮಾಡುವುದಿಲ್ಲ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಮ್ಮ ಲಾಗಿನ್‌ನಲ್ಲಿ ಇರುವ ಮೋಜಿನಿ ತಂತ್ರಾಂಶ ಹೊರತುಪಡಿಸಿ, ಇತರ ಕೆಲಸಗಳನ್ನು ಪರವಾನಗಿ ಭೂ ಮಾಪಕರಿಗೆ ನೀಡಿರುವ ಕಡತಗಳನ್ನು ಹಿಂಪಡೆಯಬೇಕು, ಪರವಾನಗಿ ಭೂಮಾಪಕರ ರಾಜ್ಯ ಸಂಘ ಮುಷ್ಕರಕ್ಕೆ ಕರೆ ನೀಡಿದ್ದು, ತಾಲೂಕಿನ ಪರವಾನಗಿ ಭೂಮಾಪಕರು ರಾಜ್ಯ ಸಂಘದಿಂದ ಹಮ್ಮಿಕೊಂಡಿರುವ ಮುಷ್ಕರಕ್ಕೆ ನಮ್ಮ ಸಂಘವೂ ಬೆಂಬಲ ನೀಡಬೇಕಾಗಿರುವುದರಿಂದ ನಾವು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದೇವೆ ಎಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಪ್ರಜ್ವಲ್, ಉಪಾಧ್ಯಕ್ಷ ಎಚ್.ಎಂ.ಮಂಜುನಾಥ, ಖಜಾಂಚಿ ಅರುಣ್ ಕುಮಾರ್, ಸದಸ್ಯರಾದ ಮೋಹನ, ನಂಜುಂಡಾಚಾರಿ, ಸತೀಶ, ರಾಜ್ ಮುಡಿ, ರಮೇಶ, ಅಶೋಕ, ಸಂಜಯ್ ಕುಮಾರ್, ಮಂಜುನಾಥ ನಾಯಕ, ಸುನೀಲ್, ಶಂಕರ್, ವಿನಯ್, ಪ್ರಮೋದ, ಅವಿನಾಶ್, ರವಿ ಹಾಜರಿದ್ದರು.