ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ
ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ವೇದಿಕೆ ಶುದ್ಧೀಕರಿಸಿ, ಅಸ್ಪಶ್ಯತೆ ಆಚರಿಸಲಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಆದರೆ ಸಭೆ ನಡೆದ ಎರಡು ದಿನಗಳ ನಂತರ ಅಲ್ಲಿನ ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರದ ಮುಖಂಡರು ಖರ್ಗೆ ಅವರ ಜಾತಿಯನ್ನು ಉಲ್ಲೇಖಿಸಿ, ಅವರು ಮಾತನಾಡಿದ ವೇದಿಕೆ ಅಪವಿತ್ರವಾಗಿದೆ ಎಂಬ ನೆಪದಲ್ಲಿ ಹೋಮ-ಹವನ ನಡೆಸಿ ಗಂಗಾಜಲ, ಗೋಮೂತ್ರದಿಂದ ಶುದ್ಧೀಕರಣ ಮಾಡಿದ್ದಾರೆ ಎಂದು ಕಿಡಿಕಾರಿದರು.
ಈ ಕೃತ್ಯ ಕೇವಲ ಮೂಢನಂಬಿಕೆಯ ಭಾಗವಲ್ಲದೆ, ಜಾತಿ ಆಧಾರಿತವಾಗಿ ನಡೆಸಿದ ಅಸ್ಪೃಶ್ಯತೆಯ ಆಚರಣೆಯಾಗಿದೆ. ಇದು ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ, ಬದಲಾಗಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಇಡೀ ದಲಿತ ಸಮುದಾಯಕ್ಕೆ ಎಸಗಿದ ಘೋರ ಅಪಚಾರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆ ತಗ್ಗಿಸುವಂತೆ ಮಾಡಿರುವ ಈ ಘಟನೆ ಖಂಡನಾರ್ಹ ಎಂದರು.
ಘಟನೆಯ ಕುರಿತು ಕೇಂದ್ರ ಸರ್ಕಾರ ತಕ್ಷಣವೇ ಸೂಕ್ತ ತನಿಖೆ ಕೈಗೊಳ್ಳಬೇಕು. ಅಸ್ಪಶ್ಯತೆ ಆಚರಣೆ ಕಾಯ್ದೆ ಹಾಗೂ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತಪ್ಪಿತಸ್ಥರನ್ನು ಬಂಧಿಸಬೇಕು. ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ, ಗೋವಿಂದ ಕೆ.ಹುನಗಳ್ಳಿ, ಖಜಾಂಚಿ ಮೇಗಲಾಪುರ ದೇವರಾಜ್, ರಾಜ್ಯ ಸಮಿತಿ ಸದಸ್ಯ ಶಿವಣ್ಣ ಕಂದೇಗಾಲ, ಮುಖಂಡರಾದ ಅಣ್ಣಯ್ಯಸ್ವಾಮಿ, ಕುಮಾರ್ ಕಳಲೆ, ಕಂದೇಗಾಲ ಕೃಷ್ಣಮೂರ್ತಿ, ಚೆಲುವರಾಜು, ಜಯಕುಮಾರ್, ಮಂಜು, ಮಂಜುನಾಥ, ಪುಟ್ಟಸ್ವಾಮಿ ಚಿಕ್ಕಕಾನ್ಯ, ಮಹದೇವು ಇತರರಿದ್ದರು.