ಪಾಲಕರು ಮಕ್ಕಳಿಗೆ ಪ್ರೋತ್ಸಾಹ ನೀಡಲಿ

ಭೇರ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಗಮನ ಸೆಳೆಯಿತು.
ಭೇರ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಗಮನ ಸೆಳೆಯಿತು.
Published on
ಸಾಲಿಗ್ರಾಮ : ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಪ್ರೀತಿ-ವಿಶ್ವಾಸವನ್ನು ಗಟ್ಟಿಯಾಗಿಸುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಮಾಯಿಗೇಗೌಡ ತಿಳಿಸಿದರು.
ತಾಲೂಕಿನ ಭೇರ್ಯ ಸರ್ಕಾರಿ ಪ್ರೌಢಶಾಲೆಯ 1996 - 97ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಯಾವುದೇ ಒಬ್ಬ ವ್ಯಕ್ತಿ ಸಮಾನತೆಯಿಂದ ಬದುಕಬೇಕೆಂದರೆ ಅದಕ್ಕೆ ಬೇಕಾಗಿರುವುದು ಶಿಕ್ಷಣ. ವಿದ್ಯಾರ್ಥಿ ಜೀವನವನ್ನು ಕಟ್ಟುವವರು ಶಿಕ್ಷಕರು. ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳದೆ ಪಾಲಕರು ಪ್ರೋತ್ಸಾಹ ನೀಡಿದರೆ ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತಾನೆ ಎಂದರು.
ನಿವೃತ್ತ ಡ್ರಾಯಿಂಗ್ ಶಿಕ್ಷಕ ಸಿ.ಆರ್.ಪೂಜಾರ್ ಮಾತನಾಡಿ, ಬದುಕು ಕಟ್ಟಿಕೊಳ್ಳಲು ಶಿಕ್ಷಣ ಬಹು ಮುಖ್ಯ. ಹಾಗಾಗಿ ಅದನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಅದೇ ರೀತಿ ಶಿಕ್ಷಣ ಕೊಟ್ಟಂತಹ ಗುರುಗಳು ಮತ್ತು ಆಶ್ರಯ ನೀಡಿದ ಶಾಲೆ, ಕಷ್ಟಪಟ್ಟು ಬೆಂಬಲಕ್ಕೆ ನಿಂತ ಪಾಲಕರನ್ನು ಮರೆಯಬಾರದು. ಒಂದಷ್ಟು ಋಣ ತೀರಿಸುವ ಕೆಲಸ ಮಾಡಲೇಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಶಿಕ್ಷಕಿ ಮಧುರಾ ಮಾತನಾಡಿ, ಶಿಕ್ಷಕರ ಪಾಠವನ್ನು ಪ್ರೀತಿಯಿಂದ ಸ್ವೀಕರಿಸಿ ಜೀವನದಲ್ಲಿ ದೊಡ್ಡ ಸಾಧನೆ ಮಾಡಿರುವುದು ಸಂತೋಷದ ವಿಚಾರ ಎಂದರು.
ನಿವೃತ್ತ ಶಿಕ್ಷಕ ಶೇಷಾದ್ರಿ ಮಾತನಾಡಿ, ಎಸ್ಸೆಸ್ಸೆಲ್ಸಿಯಲ್ಲಿ ಎ ಮತ್ತು ಬಿ ಸೆಕ್ಷನ್‌ನಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಅದು ಈಗ ಕೇವಲ 60 ವಿದ್ಯಾರ್ಥಿಗಳಿಗೆ ತಲುಪಿದೆ. ಶಾಲೆಯ ದಾಖಲಾತಿ ಸಂಖ್ಯೆ ಹೆಚ್ಚಿಸುವ ಮೂಲಕ ಶಾಲೆಯ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಾವಂತರಿಗೆ ಸನ್ಮಾನ: 2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ಬರೆದ ರಾಧಾ, ಲಾವಣ್ಯಾ, ನಿಖಿತಾ, ಧೃತಿಕಾ, ಅನುಶ್ರೀ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ನಿವೃತ್ತ ಶಿಕ್ಷಕರನ್ನು ಶಾಲೆಯ ಮುಖ್ಯ ದ್ವಾರಕದಿಂದ ವೇದಿಕೆವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ನಂತರ ಸನ್ಮಾನಿಸಲಾಯಿತು.
ಪ್ರೌಢಶಾಲಾ ಮುಖ್ಯಶಿಕ್ಷಕ ಪ್ರಸಾದ್, ನಿವೃತ್ತ ಶಿಕ್ಷಕ ಮಾಯಿಗೆಗೌಡ, ಹುಚ್ಚೇಗೌಡ, ಸುರೇಶ್, ಶೇಷಾದ್ರಿಗೌಡ, ಮಧುರ, ಸುಮಾರಾಣಿ, ಡಿ ದರ್ಜೆ ಸಹಾಯಕ ಪದ್ಮನಾಭನ್, ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಹದೇವ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net