ಹುಣಸೂರು ನಗರದ ತಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಉದ್ಘಾಟಿಸಿದರು. ಬಸವರಾಜು ಕಲ್ಕುಣಿಕೆ, ಅತ್ತಿಕುಪ್ಪೆ ರಾಮಕೃಷ್ಣ, ಅಗ್ರಹಾರ ರಾಮೇಗೌಡ, ರಾಜು ಹುಣಸೂರು ಇದ್ದರು.
ಹುಣಸೂರು : ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಮತ್ತು ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳು ಸಮ್ಮಿಳಿತಗೊಂಡು ಈ ನಾಡಿನ ನೆಲದಲ್ಲಿ ರಚಿತವಾದ ಪಂಚಾಯತ್‌ರಾಜ್ ವ್ಯವಸ್ಥೆ ಇಡೀ ದೇಶಕ್ಕೆ ಮಾದರಿ ಎಂದು ಅಬ್ದುಲ್ ನಜೀರ್ ಸಾಬ್ ಫೌಂಡೇಶನ್‌ನ ಸಂಪನ್ಮೂಲ ವ್ಯಕ್ತಿ ರಾಜು ಹುಣಸೂರು ಅಭಿಪ್ರಾಯಪಟ್ಟರು.
ಪ್ರಗತಿಪರ ಸಂಘಟನೆಗಳ ಒಕ್ಕೂಟ, ರೈತಸಂಘ, ದಲಿತ ಸಂಘರ್ಷ ಸಮಿತಿಗಳ ತಾಲೂಕು ಘಟಕಗಳ ಸಹಯೋಗದಲ್ಲಿ ಸೋಮವಾರ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪಂಚಾಯತ್ ರಾಜ್ ವ್ಯವಸ್ಥೆ ಕುರಿತಾದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಕೇವಲ 2ರಿಂದ 3 ಸಾವಿರ ಜನರ ಕೈಯಲ್ಲಿದ್ದ ಅಧಿಕಾರವನ್ನು 33 ಲಕ್ಷ ಜನರ ಕೈಗಳಿಗೆ ಪಂಚಾಯಿತ್‌ರಾಜ್ ವ್ಯವಸ್ಥೆ ಹಸ್ತಾಂತರಿಸಿದೆ. 4 ದಶಕಗಳ ಹಿಂದೆ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಪಂಚಾಯಿತ್ ರಾಜ್ ಸಚಿವ ಅಬ್ದುಲ್ ನಜೀರ್ ಸಾಬ್ ಪಂಚಾಯತ್ ರಾಜ್ ವ್ಯವಸ್ಥೆಗೆ ಕಾಯಕಲ್ಪ ನೀಡಿದರು. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಮತ್ತು ಗಾಂಧೀಜಿ ಅವರ ಗ್ರಾಮಸ್ವರಾಜ್ಯದ ಪರಿಕಲ್ಪನೆಯಡಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೊಳಿಸಿದರು. ಗ್ರಾ.ಪಂಗಳಿಗೆ ಅಧಿಕಾರ ವಿಕೇಂದ್ರೀಕರಣದ ದ್ಯೋತಕಗಳಾದರೆ, ಗ್ರಾಮಸಭೆಗಳು ಸ್ಥಳೀಯ ಜನರಿಗೆ ರಾಜಕೀಯ ಪರಮಾಧಿಕಾರ ನೀಡುತ್ತದೆ. ಪ್ರಜೆಗಳೇ ಪ್ರಭುಗಳು ಎನ್ನುವ ಮಾತಿಗೆ ಗ್ರಾಮಸಭೆಯೇ ವೇದಿಕೆಯಾಗಿದೆ. ರೈತ, ದಲಿತ ಮತ್ತು ಪ್ರಗತಿಪರ ಒಕ್ಕೂಟಗಳು ಚಳವಳಿ ಮಾಡುವುದರೊಂದಿಗೆ ವ್ಯವಸ್ಥೆಯೊಳಗೂ ಸ್ವಯಂ ಹಾಜರಾಗಿ ಅಭಿವೃದ್ಧಿಯನ್ನು ನಡೆಸುವ ನಾಯಕರಾಗಬೇಕು. ಆಗ ಪಂಚಾಯತ್‌ರಾಜ್ ವ್ಯವಸ್ಥೆಗೆ ಅರ್ಥ ಸಿಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಸಂಘಟನೆಗಳು ಅನ್ಯಾಯದ ವಿರುದ್ಧ ಹೋರಾಟ, ಚಳವಳಿ ಮಾಡುವಲ್ಲಿ ಯಶಸ್ವಿಯಾಗುತ್ತಿವೆ. ಆದರೆ ರಾಜಕೀಯ ಅಧಿಕಾರ ಗಳಿಸುವ, ಆಡಳಿತ ನಡೆಸುವ, ಆ ಕುರಿತು ಜ್ಞಾನ ವೃದ್ಧಿಸಿಕೊಳ್ಳುವಲ್ಲಿ ವಿಫಲವಾಗಿವೆ. ನಾವುಗಳು ಚಳವಳಿಗೆ ಮಾತ್ರ ಸೀಮಿತವಾಗಬಾರದು. ಆಡಳಿತದಲ್ಲೂ ಅನುಭವ ಹೊಂದುವ ಮೂಲಕ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸಬೇಕು ಎಂದರು.
ಸಿಪಿಐ(ಎಂ) ಮುಖಂಡ ವಿ.ಬಸವರಾಜು ಕಲ್ಕುಣಿಕೆ, ದಲಿತ ಮುಖಂಡ ಅತ್ತಿಕುಪ್ಪೆ ರಾಮಕೃಷ್ಣ ಮಾತನಾಡಿದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಮುಖಂಡರಾದ ಕಲ್ಲಹಳ್ಳಿ ಜಯಣ್ಣ, ಉಂಡುವಾಡಿ ಸಿ.ಚಂದ್ರೇಗೌಡ, ಚಿಕ್ಕಹುಣಸೂರು ರಾಜು, ಸತೀಶ್, ಮಹದೇವ್, ಅಣ್ಣಯ್ಯ, ಈಶ್ವರೇಗೌಡ ಇತರರು ಇದ್ದರು.