ಎಚ್.ಡಿ.ಕೋಟೆ : ತಂಬಾಕು ದರ ಇಳಿಕೆ ಖಂಡಿಸಿ ರೈತರು ಬುಧವಾರ ತಂಬಾಕು ಬೇಲ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಶಾಂತಿಪುರ(ಹೆಬ್ಬಳ್ಳ) ತಂಬಾಕು ಮಾರುಕಟ್ಟೆ ಮುಂಭಾಗ ಹುಣಸೂರು- ಬೇಗೂರು ಮುಖ್ಯ ರಸ್ತೆಯಲ್ಲಿ ಸಂಚಾರ ತಡೆದು ಆಕ್ರೋಶವ್ಯಕ್ತಪಡಿಸಿದ ರೈತರು ತಂಬಾಕು ಬೇಲ್ ಒಂದನ್ನು ರಸ್ತೆಗೆ ತಂದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ಕೆ.ಜಿ. ತಂಬಾಕಿಗೆ 320 ರೂ. ದರ ನೀಡುತ್ತಿದ್ದ ಖರೀದಿದಾರರು ನಂತರ 290 ರೂ. ನೀಡಲು ಮುಂದಾದರು. ಈ ವೇಳೆ ವಿರೋಧ ವ್ಯಕ್ತವಾದಾಗ ಉತ್ತಮ ದರ ನೀಡುವುದಾಗಿ ಭರವಸೆ ನೀಡಿ ಇದೀಗ ಮತ್ತೆ ಕಡಿಮೆ ದರ ನೀಡುತ್ತಿದ್ದಾರೆ. ಇದರಿಂದ ಬೆಳೆಗಾರರಿಗೆ ಅನ್ಯಾಯವಾಗಿದ್ದು, ತಂಬಾಕು ಮಂಡಳಿ ಸಹ ನಿರ್ಲಕ್ಷೃ ವಹಿಸಿದೆ ಎಂದು ಕಿಡಿಕಾರಿದರು.
ರೈತ ಮೊತ್ತ ಪೃಥ್ವಿರಾಜ್ ಮಾತನಾಡಿ, ನಾವು ಈಗಾಗಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ವಾಣಿಜ್ಯ ಮಂತ್ರಿ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ತಂಬಾಕು ರೈತರಿಗೆ ತಂಬಾಕು ಖರೀದಿದಾರರಿಂದ ಆಗುತ್ತಿರುವ ಬೆಲೆ ತಾರತಮ್ಯ ಸಮಸ್ಯೆ ಬಗ್ಗೆ ಅವರ ಗಮನಕ್ಕೆ ತರಲಾಯಿತು. ಕೇಂದ್ರ ಸಚಿವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ನೋಡಿದರೆ ದಿನನಿತ್ಯ ಬೆಲೆ ಕಡಿಮೆ ಮಾಡುವ ಮೂಲಕ ಖರೀದಿದಾರರು ಶೋಷಣೆ ಮಾಡುತ್ತಿದ್ದಾರೆ ಎಂದು ದೂರಿದರು.
ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಆಗುತ್ತಿರುವ ನೆಪವೊಡ್ಡಿ ತಂಬಾಕು ಖರೀದಿದಾರರು ಕಡಿಮೆ ಬೆಲೆಗೆ ತಂಬಾಕು ಖರೀದಿಸಲು ಮುಂದಾಗಿದ್ದಾರೆ. ಜತೆಗೆ ಕೇಂದ್ರ ಬಜೆಟ್ ಮಂಡನೆ ನಂತರ ಸಿಗರೇಟ್ ಮತ್ತು ತಂಬಾಕು ಸೇವನೆ ಪದಾರ್ಥಗಳ ಮೇಲೆ ಅಧಿಕ ಸುಂಕ ವಿಧಿಸಿದ ನಂತರ ರೈತರ ಮೇಲೆ ಖರೀದಿದಾರರು ಬರೆ ಎಳೆಯಲು ಮುಂದಾಗಿದ್ದಾರೆ. ಇದರಿಂದ ತಂಬಾಕು ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ರಾಜ್ಯದ ತಂಬಾಕು ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ರೈತರಾದ ಎ.ಟಿ. ನಾಗರಾಜು, ಎಲೆಹುಂಡಿ ವೆಂಕಟೇಗೌಡ, ಹೊಸಹಳ್ಳಿ ಕುಮಾರ, ಎಡತೊರೆ ಹರೀಶ್, ರಮೇಶ್ ಸೇರಿದಂತೆ ನೂರಾರು ರೈತರು ಇದ್ದರು.