ದಸರಾ ಚಲನಚಿತ್ರೋತ್ಸವ ಕೈ ಬಿಡುವ ನಿರ್ಧಾರಕ್ಕೆ ಆಕ್ರೋಶ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮೈಸೂರು: ನಾಡಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ದಸರಾ ಮಹೋತ್ಸವದ ಅವಿಭಾಜ್ಯ ಅಂಗವಾಗಿರುವ ಚಲನಚಿತ್ರೋತ್ಸ ವವನ್ನು ಕೈಬಿಡುವ ಸರ್ಕಾರದ ನಿರ್ಧಾರಕ್ಕೆ ಚಿತ್ರರಂಗದ ಪ್ರಮುಖರು, ಕನ್ನಡ ಪರ ಹೋರಾಟಗಾರರು, ಕಲಾವಿದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿರಿಯ ಚಿತ್ರನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಗುರುವಾರ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ, ದಸರಾ ಚಲನಚಿತ್ರೋತ್ಸವವನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು ಎಂದು ಒಕ್ಕೊರಲಿನಿಂದ ಆಗ್ರಹಿಸಲಾಯಿತು. ಸರ್ಕಾರ ನಿರ್ಧಾರ ಮರುಪರಿಶೀಲಿಸದಿದ್ದರೆ ಮುಂದಿನ ಹಂತದಲ್ಲಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಲಾಯಿತು.
ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಚಲನಚಿತ್ರೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೆಚ್ಚದ ಲೆಕ್ಕಾಚಾರದಲ್ಲಿ ನೋಡುವುದು ದಸರಾ ಮಹೋತ್ಸವದ ಆಶಯವನ್ನೇ ಅವಮಾನಿಸಿದಂತೆ. ದಸರಾ ಹೆಸರಿನಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಲ್ಲೂ ಲಾಭ-ನಷ್ಟದ ಲೆಕ್ಕ ಹಾಕದ ಸರ್ಕಾರ, ಚಲನಚಿತ್ರೋತ್ಸವದ ವಿಚಾರದಲ್ಲಿ ಮಾತ್ರ ಏಕೆ ಈ ಲೆಕ್ಕಾಚಾರ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಎರಡು ಚಿತ್ರಮಂದಿರಗಳಲ್ಲಾದರೂ ಚಿತ್ರೋತ್ಸವ ನಡೆಸಬೇಕು. ಸದಭಿರುಚಿಯ ಉತ್ತಮ ಸಿನಿಮಾಗಳನ್ನು ಆಯ್ಕೆ ಮಾಡಿ ಪ್ರದರ್ಶಿಸಿದರೆ ಪ್ರೇಕ್ಷಕರು ಖಂಡಿತವಾಗಿಯೂ ಬರುತ್ತಾರೆ ಎಂದರು. ಕಾನ್ಸ್, ಟೊರೊಂಟೊ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಮಾದರಿಯಲ್ಲಿ ಮೈಸೂರಿನ ಚಲನಚಿತ್ರೋತ್ಸವವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಹೇಳಿದರು.
ಚಿತ್ರೋತ್ಸವದ ಕುರಿತು ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಪ್ಪು ಮಾಹಿತಿ ನೀಡಿರುವ ಹಿನ್ನೆಲೆಯಿಂದ ಈ ನಿರ್ಧಾರ ಕೈಗೊಂಡಿರಬಹುದು ಎಂದರು.
ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ.ಪ್ರೇಮ್ ಕುಮಾರ್ ಮಾತನಾಡಿ, ಚಲನಚಿತ್ರೋತ್ಸವ ದಸರಾ ಮಹೋತ್ಸವದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ರದ್ದುಪಡಿಸುವುದು ಮೂರ್ಖತನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರುನಾಡ ರಕ್ಷಣಾ ವೇದಿಕೆ ಕಾರ್ಯದರ್ಶಿ ಸತೀಶ್ ಹೆಗ್ಗೂರು ಮಾತನಾಡಿ, ಕನ್ನಡದ ಕಲಾತ್ಮಕ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಅಪರೂಪದ ವೇದಿಕೆ ದಸರಾ ಚಿತ್ರೋತ್ಸವವಾಗಿದ್ದು, ಅದನ್ನು ಉಳಿಸಬೇಕು ಎಂದರು.
ಕನ್ನಡ ಪರ ಹೋರಾಟಗಾರ ಮೋಹನ್ ಕುಮಾರ್ ಗೌಡ ಮಾತನಾಡಿ, ಚಿತ್ರೋದ್ಯಮ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರದ ನಿರ್ಧಾರ ಸರಿಯಲ್ಲ. ಜಂಬೂಸವಾರಿ ಮೆರವಣಿಗೆಯಲ್ಲಿ ಚಿತ್ರ ನಟರು ಪಾಲ್ಗೊಳ್ಳುವಂತೆ ಸರ್ಕಾರ ಮನವಿ ಮಾಡಿದೆ. ಆದರೆ, ಮತ್ತೊಂದೆಡೆ ದಸರಾ ಚಲನಚಿತ್ರೋತ್ಸವ ಕೈಬಿಟ್ಟಿರುವುದು ಸರಿಯಲ್ಲ ಎಂದರು.
ನಗರ ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಮಾತನಾಡಿ, ದಸರಾ ಉತ್ಸವದಲ್ಲಿ ನಿರಂತರವಾಗಿ ಚಲನಚಿತ್ರೋತ್ಸವವನ್ನು ಆಯೋಜಿಸಿಕೊಂಡು ಬರಲಾಗಿದೆ. ಆದರೆ, ಲಾಭ- ನಷ್ಟದ ಲೆಕ್ಕಾಚಾರದಲ್ಲಿ ಈ ಬಾರಿ ಚಲನಚಿತ್ರೋತ್ಸವವನ್ನು ಕೈ ಬಿಡುವುದು ಸರಿಯಲ್ಲ. ಈ ವಿಚಾರದ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನ ಸೆಳೆಯಬೇಕು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ,ವಿವಿಧ ಸಂಘಟನೆಗಳ ಪ್ರಮುಖರಾದ ಪ್ರಕಾಶ್ ಬಾಬು, ಮೂಗೂರು ನಂಜುಂಡಸ್ವಾಮಿ, ಸಸ್ಯಶಾಸ್ತ್ರಜ್ಞ ಡಾ.ವಸಂತ ಕುಮಾರ್ ತಿಮಾಕಪುರ ಹಾಗೂ ಇತರರು ಇದ್ದರು.

ಖಾಸಗಿಯವರಿಗೆ ಚಿತ್ರನಗರಿ ಜವಾಬ್ದಾರಿ ನೀಡಬಾರದು

ಮೈಸೂರು: ಖಾಸಗಿ ವ್ಯಕ್ತಿಗಳಿಗೆ ಚಿತ್ರನಗರಿ ನಿರ್ಮಾಣದ ಜವಾಬ್ದಾರಿ ನೀಡಬಾರದು ಎಂದು ಹಿರಿಯ ಚಿತ್ರನಿರ್ದೇಶಕ ಡಾ.ರಾಜೇಂದ್ರ ಸಿಂಗ್ ಬಾಬು ಆಗ್ರಹಿಸಿದರು.
ಚಿತ್ರನಗರಿ ನಿರ್ಮಾಣದ ವಿಚಾರದಲ್ಲಿ ಚಿತ್ರರಂಗದ ಹಿರಿಯರ ಸಲಹೆಗಳನ್ನು ಪರಿಗಣಿಸಬೇಕು. ಖಾಸಗಿಯವರಿಗೆ ನೀಡಿದರೆ ಚಿತ್ರನಗರಿ ಉತ್ತಮವಾಗಿ ನಿರ್ಮಾಣವಾಗುವುದಿಲ್ಲ. ಮುಂಬೈನಲ್ಲಿ ಸರ್ಕಾರವೇ ಚಿತ್ರನಗರಿ ನಡೆಸುತ್ತಿದ್ದು, ಉತ್ತಮ ಆದಾಯ ಬರುತ್ತಿದೆ. ರಾಜ್ಯದಲ್ಲಿ ಪರಭಾಷೆಯ ಸಿನಿಮಾಗಳಿಗೆ ತೆರಿಗೆ ಹೆಚ್ಚಿಸಿ, ಅದರಿಂದ ಬರುವ ಹಣವನ್ನು ಚಿತ್ರನಗರಿ ನಿರ್ಮಾಣಕ್ಕೆ ಬಳಸಬಹುದು ಎಂದು ಸಲಹೆ ನೀಡಿದರು.
ಮಕ್ಕಳಿಗೆ ಉತ್ತಮ ಸಿನಿಮಾಗಳನ್ನು ಪರಿಚಯಿಸುವ ಅಗತ್ಯವಿದ್ದು, ನ.14ರಂದು ಮಾಜಿ ಪ್ರಧಾನಿ ನೆಹರು ಅವರ ಹೆಸರಿನಲ್ಲಿ ಮಕ್ಕಳ ಚಲನಚಿತ್ರೋತ್ಸವ ನಡೆಸಬೇಕು ಎಂದು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net