ಸವಾಲು ಮೆಟ್ಟಿ ನಿಲ್ಲಲು ಸಂಘಟನೆ ಅಗತ್ಯ: ಇಮ್ಮಡಿ ಸಿದ್ಧರಾಮೇಶ್ವರಶ್ರೀ

 ಕೆ.ಆರ್.ನಗರದಲ್ಲಿ ಆಯೋಜಿಸಿದ್ದ ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವದ ಜನಜಾಗೃತಿ ಸಭೆಯಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿದರು. ಜಿ.ವಿ.ಸೀತಾರಾಮ, ಎಸ್.ವಿಜಯಕುಮಾರ್, ಎಚ್.ದಾಸ, ಬ್ಯಾಂಕ್ ಶೇಖರ್, ಆರ್ ಮುರುಗನ್, ಬ್ಯಾಂಕ್ ನರಸಿಂಹಯ್ಯ ಇನ್ನಿತರರಿದ್ದರು.
ಕೆ.ಆರ್.ನಗರದಲ್ಲಿ ಆಯೋಜಿಸಿದ್ದ ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವದ ಜನಜಾಗೃತಿ ಸಭೆಯಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿದರು. ಜಿ.ವಿ.ಸೀತಾರಾಮ, ಎಸ್.ವಿಜಯಕುಮಾರ್, ಎಚ್.ದಾಸ, ಬ್ಯಾಂಕ್ ಶೇಖರ್, ಆರ್ ಮುರುಗನ್, ಬ್ಯಾಂಕ್ ನರಸಿಂಹಯ್ಯ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಭಿಮತ
  • ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ
  • ಶ್ರೇಷ್ಠ ಆಲೋಚನೆ ಹೊಂದಿರುವ ಸಮದಾಯದ ಮನಸ್ಸುಗಳು ಒಂದಾಗುವುದು ಮುಖ್ಯ
ಮೈಸೂರು: ಸಮಾಜ ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಬಲಿಷ್ಠ ಸಂಘಟನೆಯ ಅಗತ್ಯವಿದ್ದು, ಇದು ಕೇವಲ ಸಂಖ್ಯೆಗಳಿಂದಲ್ಲ, ಬದಲಾಗಿ ಸಮಾನ ಮನಸ್ಸುಗಳ ಒಕ್ಕೂಟದಿಂದ ಮಾತ್ರ ಸಾಧ್ಯ ಎಂಬ ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಕೆ.ಆರ್.ನಗರದಲ್ಲಿ ಆಯೋಜಿಸಿದ್ದ ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿ, ಮನಸ್ಸುಗಳ ಸಂಗಮವೇ ಸಮಾಜ ಸಂಘಟನೆಗೆ ಶಕ್ತಿ. ಮನಸ್ಸಿದ್ದರೆ ಮಾರ್ಗ ಎಂಬ ನಾಣ್ಣುಡಿಯಂತೆ ಯಾವುದೇ ಒಂದು ಉದಾತ್ತ ಕಾರ್ಯ ಸಫಲವಾಗಬೇಕಾದರೆ ಮೊದಲು ಮನಸ್ಸು ಸಿದ್ಧವಾಗಬೇಕು ಎಂದರು.
ಸಂಕಲ್ಪದಿಂದ ಸಂಘಟನೆಯವರೆಗೆ ಯಾವುದೇ ಸಾಧನೆಗೆ ದೃಢವಾದ ಮನಸ್ಸು ಮೊದಲ ಮೆಟ್ಟಿಲು. ವ್ಯಕ್ತಿಗತ ಸ್ವಾರ್ಥ ಬದಿಗಿಟ್ಟು, ಸಮೂಹದ ಹಿತಕ್ಕಾಗಿ ಕೈಜೋಡಿಸುವ ಮನಸ್ಥಿತಿ ಬೆಳೆಸಿಕೊಂಡಾಗ ಮಾತ್ರ ಸಮಾಜ ಸಂಘಟನೆಗೆ ಗಟ್ಟಿಯಾದ ಅಡಿಪಾಯ ಲಭಿಸುತ್ತದೆ. ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದು ಇತಿಹಾಸದ ಅನೇಕ ಸಮಾಜ ಸುಧಾರಕರ ಜೀವನದಿಂದ ಸಾಬೀತಾಗಿದೆ ಎಂದರು.
ಸಮಾಜ ಸಂಘಟನೆಯಲ್ಲಿ ಕೇವಲ ಜನರು ಸೇರುವುದು ಮುಖ್ಯವಲ್ಲ. ಬದಲಾಗಿ ಶ್ರೇಷ್ಠ ಆಲೋಚನೆ ಹೊಂದಿರುವ ಸಮದಾಯದ ಮನಸ್ಸುಗಳು ಒಂದಾಗುವುದು ಮುಖ್ಯವಾಗಿದೆ. ಸಂಘಟನೆಯಲ್ಲಿ ಪ್ರತಿಯೊಬ್ಬರ ಮನಸ್ಸು ಸ್ವಚ್ಛವಾಗಿದ್ದಾಗ ಭಿನ್ನಾಭಿಪ್ರಾಯಗಳು ಕಡಿಮೆಯಾಗುತ್ತವೆ. 
ಇತರರ ಏಳಿಗೆಯಲ್ಲಿ ತನ್ನ ಏಳಿಗೆಯನ್ನು ಕಾಣುವ ವಿಶಾಲ ಮನೋಭಾವವೇ ಸಂಘಟನೆಯ ಜೀವಾಳ. ಎಲ್ಲರನ್ನೂ ಸಮಾನವಾಗಿ ಕಾಣುವ ಮತ್ತು ಗೌರವಿಸುವ ಮನಸ್ಥಿತಿ ಸಮಾಜವನ್ನು ಒಗ್ಗೂಡಿಸುತ್ತದೆ ಎಂದು ಹೇಳಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಮತ್ತು ಗೌರವ ದೊರೆತಾಗ ಮಾತ್ರ ಆ ಸಂಘಟನೆಗೆ ಅರ್ಥ ಬರುತ್ತದೆ. ಮನಸ್ಸುಗಳು ಒಂದಾದಾಗ ಬೆಟ್ಟವನ್ನೂ ಅಲುಗಾಡಿಸಬಹುದು. ಸಮಾಜದ ಹಿತಕ್ಕಾಗಿ ಒಂದಾಗಿ ಕೆಲಸ ಮಾಡುವ ಸಂಕಲ್ಪ ಮಾಡಬೇಕು. ಸಮುದಾಯದ ಸಂಘಟನೆ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಹಾಗೂ ಸಮೃದ್ಧ ಸಮಾಜ ನಿರ್ಮಾಣಕ್ಕೆ ದಾರಿಯಾಗಲಿ ಎಂದು ಕರೆ ನೀಡಿದರು.
ಕರ್ನಾಟಕ ಭೋವಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಎಸ್.ವಿಜಯಕುಮಾರ್, ಎಚ್.ದಾಸ, ಬ್ಯಾಂಕ್ ಶೇಖರ್, ಆರ್ ಮುರುಗನ್, ಬ್ಯಾಂಕ್ ನರಸಿಂಹಯ್ಯ, ಮಲ್ಲಣ್ಣ, ಕೆ.ಆರ್.ನಗರ ತಾಲೂಕು ಅಧ್ಯಕ್ಷ ನಿವೃತ್ತ ಸೈನಿಕ ಶಿವು, ಉಪಾಧ್ಯಕ್ಷ ನಾಗೇಶ, ಸತ್ಯನಾರಾಯಣ, ವೀರಭದ್ರ ಶೆಟ್ಟಿ, ಸುಬ್ರಮಣ್ಯ, ಲಕ್ಷ್ಮೀನಾರಾಯಣ, ಕುಮಾರ್, ರಾಜಶೇಖರ್ ಇನ್ನಿತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net