ಸಮರ್ಥ ಶಿಕ್ಷಕ ಮಾತ್ರ ರಾಷ್ಟ್ರ ರಕ್ಷಕನಾಗಲು ಸಾಧ್ಯ

ಹುಣಸೂರು ನಗರದ ಗುರುಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು. ಜಾನಪದ ವಿದ್ವಾಂಶ ಪ್ರೊ.ಪಿ.ಕೆ.ರಾಜಶೇಖರ್, ಬಿಇಒ ಕಾಳನಾಯಕ, ಬಿಆರ್‌ಸಿ ಹೇಮಲತಾ, ಕೆ.ಬಿ.ಶಶಿಕುಮಾರ್, ಚನ್ನವೀರಪ್ಪ, ಎಚ್.ಪಿ.ಗಿರೀಶ್ ಇತರರಿದ್ದರು.
ಹುಣಸೂರು ನಗರದ ಗುರುಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು. ಜಾನಪದ ವಿದ್ವಾಂಶ ಪ್ರೊ.ಪಿ.ಕೆ.ರಾಜಶೇಖರ್, ಬಿಇಒ ಕಾಳನಾಯಕ, ಬಿಆರ್‌ಸಿ ಹೇಮಲತಾ, ಕೆ.ಬಿ.ಶಶಿಕುಮಾರ್, ಚನ್ನವೀರಪ್ಪ, ಎಚ್.ಪಿ.ಗಿರೀಶ್ ಇತರರಿದ್ದರು.
Published on
ಹುಣಸೂರು: ಸಮರ್ಥ ಶಿಕ್ಷಕ ಮಾತ್ರ ರಾಷ್ಟ್ರ ರಕ್ಷಕನಾಗಲು ಸಾಧ್ಯವೆಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ರಕ್ಷಣೆಯನ್ನು ಗಡಿಯಲ್ಲಿ ಕಾಯುವ ಸೈನಿಕ ಮಾತ್ರ ಮಾಡುವುದಿಲ್ಲ. ಸಮಾಜದಲ್ಲಿ ಸದೃಢ ಪ್ರಜೆಗಳನ್ನು ಸೃಷ್ಟಿಸುವ ಕಾರ್ಯದೊಂದಿಗೆ ಶಿಕ್ಷಕನೂ ದೇಶ ಕಾಯುತ್ತಾನೆ. ಈ ನೆಲದ ಸಂಸ್ಕೃತಿ, ಪರಂಪರೆ, ಜಾನಪದ ಸಾಹಿತ್ಯ ಎಲ್ಲವನ್ನೂ ಉಳಿಸಿ ಬೆಳೆಸುವ ಮಹತ್ಕಾರ್ಯ ಶಿಕ್ಷಕರಿಂದಾಗುತ್ತಿದೆ. ಕಲಿಕೆ ವೇಳೆ ವಿದ್ಯಾರ್ಥಿಗಳನ್ನು ದಂಡಿಸುವ ಕಾರ್ಯ ಈಗಿಲ್ಲದಿದ್ದರೂ ವಿದ್ಯಾರ್ಥಿ ಕಲಿಕೆಗೆ ಬೇಕಾದ ಅಂಕುಶವನ್ನು ಹೇರಲು ಶಿಕ್ಷಕರಿಗೆ ಅವಕಾಶವಿರಬೇಕು ಎಂದರು.
ಶಿಕ್ಷಣಕ್ಕೆ ಗ್ಯಾರಂಟಿ: ಶಿಕ್ಷಕರು ತಮ್ಮ ವೃತ್ತಿಯನ್ನು ಹೊರತುಪಡಿಸಿ ಮಿಕ್ಕೆಲ್ಲ ಕೆಲಸಗಳನ್ನೇ ಮಾಡುವಂತಾಗಿದೆ ಎಂದ ಅಳಲು ತೋಡಿಕೊಳ್ಳುತ್ತಿರುತ್ತಾರೆ. ದಾಸೋಹ, ಸಮೀಕ್ಷಾ ಕಾರ್ಯ ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡಬೇಕಿದೆ ನಿಜ. ಆದರೆ ಜೀವನದಲ್ಲಿ ಕಷ್ಟಪಟ್ಟು ದುಡಿದವನೇ ಸಾಧಕನಾಗಲು ಸಾಧ್ಯ. ಈ ನಿಟ್ಟಿನಲ್ಲಿ ನೀವು ಕೂಡ ಸಾಧನೆಯ ಶಿಖರವೇರಲು ಶ್ರಮಿಸಿ. ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಇದರೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ 6ನೇ ಗ್ಯಾರಂಟಿಯನ್ನೂ ಸರ್ಕಾರ ನೀಡಲಿ ಎಂದು ಒತ್ತಾಯಿಸಿದರು.
ಪ್ರಸಿದ್ಧ ಜಾನಪದ ತಜ್ಞ, ಲೇಖಕ ಮತ್ತು ನಿವೃತ್ತ ಪ್ರಾಧ್ಯಾಪಕ ಡಾ.ಪಿ.ಕೆ.ರಾಜಶೇಖರ್ ಪ್ರಧಾನ ಭಾಷಣ ಮಾಡಿ, ವಿಶ್ವವನ್ನೇ ಆಳುವ ಶಕ್ತಿ ಗುರುಶಕ್ತಿಗಿದೆ. ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನವೆಂಬ ಬೆಳಕಿನತ್ತ ಕರೆದೊಯ್ಯುವವನೇ ಗುರು. ಗುರುವಿಗೆ ಇರುವ ಸ್ಥಾನ ಮಾನ ಇನ್ಯಾರಿಗೂ ಇರುವುದಿಲ್ಲ. ರಾಕ್ಷಸಿ ಪ್ರವೃತ್ತಿಯ ವ್ಯಕ್ತಿಯನ್ನೂ ಸಾತ್ವಿಕ ಶಕ್ತಿಯನ್ನಾಗಿಸುವ ಶಕ್ತಿ ಗುರುವಿನಲ್ಲಿದೆ. ಇಡೀ ಸಮುದಾಯ ಶಿಕ್ಷಕರನ್ನು ಗಮನಿಸುತ್ತದೆ. ನಿಮ್ಮ ನಡೆ, ನುಡಿಯಲ್ಲಿ ಸಭ್ಯತೆ, ನೈತಿಕ ಮೌಲ್ಯ ತುಂಬಿರಲಿ ಎಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಮಾತನಾಡಿ, ನಾನು ಜಿಪಂ ಅಧ್ಯಕ್ಷತೆಯಾಗಿದ್ದ ವೇಳೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹುಣಸೂರು 2-3ನೇ ಸ್ಥಾನದಲ್ಲಿತ್ತು. ಆದರೆ ಇದೀಗ ಕೊನೆಯ ಸ್ಥಾನ ತಲುಪಿರುವುದು ಬೇಸರದ ಸಂಗತಿಯಾಗಿದೆ. ನಾವೆಲ್ಲರೂ ಈ ಕುರಿತು ಗಂಭೀರ ಚಿಂತನೆ ಮಾಡಬೇಕಿದೆ ಎಂದರು.
ತಹಸೀಲ್ದಾರ್ ಜೆ.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾಳನಾಯಕ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ಮೂವರು ಶಿಕ್ಷಕರು, ನಿವೃತ್ತಿ ಹೊಂದಿದ 54 ಶಿಕ್ಷಕರಿಗೆ ಮತ್ತು ಸೇವಾ ಅವಧಿಯಲ್ಲಿ ಮೃತ ಹೊಂದಿದ ನಾಲ್ವರು ಶಿಕ್ಷಕರ ಕುಟುಂಬದವರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಪಿ.ಹೇಮಲತಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಸಿ.ಬಿ.ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಮಾಲೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಚ್.ಸಿ.ಗಿರೀಶ್, ಗೌರವಾಧ್ಯಕ್ಷ ಎಚ್.ಬಿ.ಚನ್ನವೀರಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಿ.ಎಂ.ರವಿ, ರತ್ನಪುರಿ ಪ್ರಭಾಕರ್ ಸೇರಿದಂತೆ ಶಿಕ್ಷಕರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net