ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು: ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಸಲಹೆ

ನಗರದಲ್ಲಿ ನರೆಡ್ಕೋದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಹರೀಶ್‌ಗೌಡ ಅವರನ್ನು ಗೌರವಿಸಲಾಯಿತು. ರಮೇಶ್ ಬಂಡಿಸಿದ್ದೇಗೌಡ, ಡಾ.ಎಂ.ಡಿ.ರಾಘವೇಂದ್ರ ಪ್ರಸಾದ್, ಎ.ಪಿ.ನಾಗೇಶ್, ವಿ.ಸಿ.ರವಿಕುಮಾರ್, ಪಿ.ಎಸ್.ಗಗನ್‌ದೀಪ್, ಪಿ.ನಂಜುಂಡಸ್ವಾಮಿ, ದಿವ್ಯೇಶ್ ಇತರರು ಇದ್ದರು.
ನಗರದಲ್ಲಿ ನರೆಡ್ಕೋದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಹರೀಶ್‌ಗೌಡ ಅವರನ್ನು ಗೌರವಿಸಲಾಯಿತು. ರಮೇಶ್ ಬಂಡಿಸಿದ್ದೇಗೌಡ, ಡಾ.ಎಂ.ಡಿ.ರಾಘವೇಂದ್ರ ಪ್ರಸಾದ್, ಎ.ಪಿ.ನಾಗೇಶ್, ವಿ.ಸಿ.ರವಿಕುಮಾರ್, ಪಿ.ಎಸ್.ಗಗನ್‌ದೀಪ್, ಪಿ.ನಂಜುಂಡಸ್ವಾಮಿ, ದಿವ್ಯೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸ ಆಗಬೇಕು
  • ಯೋಜನೆಗಳ ಕುರಿತು ಸರಿಯಾದ ಮಾಹಿತಿ ನೀಡುವ ಮೂಲಕ ಕಾರ್ಮಿಕರು ಅವುಗಳ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಬೇಕು

ಮೈಸೂರು:

ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಜನರಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಅಧ್ಯಕ್ಷರೂ ಆದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.

ನ್ಯಾಷನಲ್ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್ ಕೌನ್ಸಿಲ್ (ನರೆಡ್ಕೋ), ವಿವಿಧ ರೋಟರಿ ಸಂಸ್ಥೆ ಸಹಯೋಗದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ನಿರ್ಮಾಣ ಕಾರ್ಮಿಕರ ಬೃಹತ್ ಕಲ್ಯಾಣ ಕಾರ್ಯಕ್ರಮ ಅಭಿಯಾನದಲ್ಲಿ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸ ಆಗಬೇಕು. ಅಧಿಕಾರಿಗಳು, ಯೋಜನೆಗಳ ಕುರಿತು ಸರಿಯಾದ ಮಾಹಿತಿ ನೀಡುವ ಮೂಲಕ ಕಾರ್ಮಿಕರು ಅವುಗಳ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಸ್ಥಳೀಯ ಸಂಸ್ಥೆಗಳು, ಪಂಚಾಯಿತಿಗಳು ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ನಿಧಿ (ಲೇಬರ್ ಸೆಸ್ಕ್) ಸಂಗ್ರಹ ಮಾಡುತ್ತಿದ್ದರೂ ಅದನ್ನು ಕಾರ್ಮಿಕರ ಏಳಿಗೆ ಕಾರ್ಯಕ್ರಮಗಳಿಗೆ ಬಳಸುತ್ತಿರಲಿಲ್ಲ. ಇದರಿಂದ ಕಲ್ಯಾಣ ನಿಧಿಯಲ್ಲಿ ಸಾಕಷ್ಟು ದುರುಪಯೋಗವಾಗಿರುವ ಪ್ರಕರಣಗಳು ಕಂಡು ಬಂದಿದ್ದವು. ಕೋವಿಡ್ ಸಮಯದಲ್ಲಿ ದುರುಪಯೋಗ ಹೆಚ್ಚಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೆಲ್ಲ ಗಮನಿಸಿದ ಸಚಿವರಾಗಿದ್ದ ಸಂತೋಷ್‌ಲಾಡ್, ಕಾರ್ಮಿಕರಿಗಾಗಿ ಸಂಗ್ರಹವಾಗಿವ ನಿಧಿಯನ್ನು ಸದುಪಯೋಗ ಪಡಿಸಿಕೊಳ್ಳುವ ಯೋಜನೆಗಳನ್ನು ರೂಪಿಸಿದರು. ಆ ಮೂಲಕ ಕಾರ್ಮಿಕರಿಗೆ ಅನುಕೂಲವಾಗುವಂತೆ ಹಲವು ಕಾರ್ಯಕ್ರಮ ಹಮ್ಮಿಕೊಂಡರು ಎಂದು ಪ್ರಶಂಸಿಸಿದರು.
ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಕಾರ್ಮಿಕರ ಕಲ್ಯಾಣಕ್ಕಾಗಿ ನರೆಡ್ಕೋ ಉತ್ತಮ ಕೆಲಸ ಕಾರ್ಯವನ್ನು ಮಾಡುತ್ತಿದೆ. ಆರೋಗ್ಯ ತಪಾಸಣೆ, ವಿಮೆ, ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಜನಪ್ರತಿನಿಧಿಗಳು ಮಾಡಬೇಕಾದ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಮಿಕ ಸೇವಾ ಕಾರ್ಯ ಮುಂದುವರಿಯಲಿ. ಮೈಸೂರು ಜಿಲ್ಲೆಯಲ್ಲಿಯೇ ಚಾಮರಾಜ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕ್ಷೇತ್ರವಾಗಿದ್ದು, ಇಲ್ಲಿಯೂ ಕಾರ್ಯಕ್ರಮ ಹಮ್ಮಿಕೊಂಡರೆ ಅದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್‌ಕುಮಾರ್ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ವಿವಿಧ ಕಂಪನಿಗಳಲ್ಲಿ ದುಡಿಯುವ ಕಾರ್ಮಿಕರಿಗಾಗಿ ಯೋಜನೆಗಳು ಇರುವಂತೆ ಕಟ್ಟಡ ಸೇರಿದಂತೆ ಇನ್ನಿತರ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೂ ಯೋಜನೆಗಳು, ಕಾನೂನುಗಳು ಇವೆ ಎಂದು ತಿಳಿಸಿದರು.
ಕಾರ್ಮಿಕರು ಹಾಗೂ ಮಾಲೀಕರು ಸೌಹಾರ್ದದಿಂದ ನಡೆದಾಗ ಆ ಕಾರ್ಖಾನೆ, ಸಂಸ್ಥೆಗಳು ಯಶಸ್ಸುಗಳಿಸಲು ಸಾಧ್ಯ. ಅಂತೆಯೇ ಮಾಲೀಕರು ಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಂಡು ಅಗತ್ಯ ಸವಲತ್ತು, ಕನಿಷ್ಠ ವೇತನವನ್ನು ನೀಡಬೇಕು. ಇಲ್ಲವಾದರೆ ಕಾರ್ಮಿಕರ ಇಲಾಖೆ ಮಧ್ಯಪ್ರವೇಶಿಸಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತದೆ ಎಂದರು.
ಕಾರ್ಮಿಕ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಾಲ ಕಾರ್ಮಿಕರನ್ನು ದುಡಿಸಿಕೊಂಡರೆ ದಂಡ, ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಸಾಮಾನ್ಯ ವಲಯದಲ್ಲಿ 14 ವರ್ಷ ಮೇಲ್ಪಟ್ಟು, ಅಪಾಯಕಾರಿ ವಲಯದಲ್ಲಿ 18 ವರ್ಷ ಮೇಲ್ಪಟ್ಟವರು ಮಾತ್ರ ಕೆಲಸ ನಿರ್ವಹಿಸಬೇಕು. ನಿಗದಿತ ವಯಸ್ಸಿಗಿಂತ ಒಂದು ದಿನ ಕಡಿಮೆಯಾದರೂ ಶಿಕ್ಷೆ ವಿಧಿಸಲು ಅವಕಾಶವಿದೆ. ಆದ್ದರಿಂದ ಮಾಲೀಕರು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು.
ಇಲಾಖೆಯಿಂದ ಸಾಕಷ್ಟು ಸೌಲಭ್ಯಗಳು ಕಾರ್ಮಿಕರಿಗಾಗಿ ಇದ್ದು, ಅವುಗಳನ್ನು ಪಡೆದುಕೊಳ್ಳಬೇಕು. ಇತ್ತೀಚೆಗೆ ಮಧ್ಯವರ್ತಿಗಳ ಹಾವಳಿಗೆ ಕಾರ್ಮಿಕರು ಬಲಿಯಾಗುತ್ತಿರುವುದರಿಂದ ಕಾರ್ಮಿಕರು ಮೋಸಹೋಗದೆ ನೇರವಾಗಿ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.
ರೋಟರಿ ಸಂಸ್ಥೆಯ ಜಿ.ಕೆ.ಬಾಲಕೃಷ್ಣ ಅವರು, ನರೆಡ್ಕೋ, ರೋಟರಿ ಸಂಸ್ಥೆಯ ಸೇವಾ ಕಾರ್ಯಗಳನ್ನು ವಿವರಿಸಿದರು.
ನರೆಡ್ಕೋ ಮೈಸೂರು ಶಾಖೆ ಅಧ್ಯಕ್ಷ ಡಾ.ಎಂ.ಡಿ.ರಾಘವೇಂದ್ರ ಪ್ರಸಾದ್, ಉಪಾಧ್ಯಕ್ಷ ಎ.ಪಿ.ನಾಗೇಶ್, ಚೇರ್ಮನ್
ವಿ.ಸಿ.ರವಿಕುಮಾರ್, ಕಾರ್ಯದರ್ಶಿ ಪಿ.ಎಸ್.ಗಗನ್‌ದೀಪ್, ಖಜಾಂಚಿ ಡಾ.ಎಸ್.ಎಚ್.ಜಗದೀಶ್, ಜಂಟಿ ಕಾರ್ಯದರ್ಶಿ ಪಿ.ನಂಜುಂಡಸ್ವಾಮಿ, ನರೆಡ್ಕೋ ಸಂಸ್ಥಾಪಕ ಅಧ್ಯಕ್ಷ ದಿವ್ಯೇಶ್, ರೋಟರಿ ಪದಾಧಿಕಾರಿಗಳಾದ ಶಿವರುದ್ರಪ್ಪ, ಯಶವಂತ್, ಗಣೇಶ್‌ರಾವ್, ಶ್ರೀಕಾಂತ್, ನೇತ್ರಾವತಿ ಇತರರು ಇದ್ದರು.
ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ವಿಮೆ ಮಾಡಿಸಲಾಯಿತು. ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‌ಗೌಡ ಅವರಿಗೆ ನರೆಡ್ಕೋ ಸದಸ್ಯತ್ವ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net