ದಸರಾದಲ್ಲಿ ಕಂಬಳ ಆಯೋಜನೆ ನಿರ್ಧಾರಕ್ಕೆ ಆಕ್ಷೇಪ, ಪ್ರತಿಭಟನೆ

ದಸರಾ ಸಂದರ್ಭದಲ್ಲಿ ಕಂಬಳ ಮಾಡುವುದು ಬೇಡ ಎಂದು ಒತ್ತಾಯಿಸಿ ನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಎ.ಟಿ.ರಾಮಸ್ವಾಮಿ, ಬಡಗಲಪುರ ನಾಗೇಂದ್ರ, ಪ್ರೊ.ಎನ್.ಎಸ್.ರಂಗರಾಜು, ಬೆಟ್ಟಯ್ಯ ಕೋಟೆ, ಯು.ಎನ್. ರವಿಕುಮಾರ್, ಒಂಬತ್ಕೆರೆ, ಪ್ರೊ.ಕಾಳಚನ್ನೇಗೌಡ, ಮ.ಗು.ಸದಾನಂದಯ್ಯ, ಪರಶುರಾಮೇಗೌಡ ಇತರರಿದ್ದರು.
ದಸರಾ ಸಂದರ್ಭದಲ್ಲಿ ಕಂಬಳ ಮಾಡುವುದು ಬೇಡ ಎಂದು ಒತ್ತಾಯಿಸಿ ನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಎ.ಟಿ.ರಾಮಸ್ವಾಮಿ, ಬಡಗಲಪುರ ನಾಗೇಂದ್ರ, ಪ್ರೊ.ಎನ್.ಎಸ್.ರಂಗರಾಜು, ಬೆಟ್ಟಯ್ಯ ಕೋಟೆ, ಯು.ಎನ್. ರವಿಕುಮಾರ್, ಒಂಬತ್ಕೆರೆ, ಪ್ರೊ.ಕಾಳಚನ್ನೇಗೌಡ, ಮ.ಗು.ಸದಾನಂದಯ್ಯ, ಪರಶುರಾಮೇಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಂಬಳ ಆಯೋಜನೆಯಿಂದ ಪರಿಸರಕ್ಕೆ ಮಾರಕವಾಗುವ ಆತಂಕ
  • ಮಹೋತ್ಸವದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು
ಮೈಸೂರು:ಪರಿಸರಕ್ಕೆ ಮಾರಕವಾಗುವಂತೆ ದಸರಾದಲ್ಲಿ ಕಂಬಳ ಆಯೋಜನೆ ಮಾಡುವುದು ಬೇಡ ಎಂದು ಒತ್ತಾಯಿಸಿ ಪರಿಸರವಾದಿಗಳು, ರೈತ ಸಂಘಟನೆಗಳು, ಕನ್ನಡಪರ ಹಾಗೂ ಪ್ರಗತಿಪರರಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಸಾತಗಳ್ಳಿ ವಿಟಿಯು ಕಾಲೇಜು ಬಳಿ ಇರುವ ಮುಡಾ ಖಾಲಿ ಜಾಗದಲ್ಲಿ ಜಮಾವಣೆಗೊಂಡ ಸಂಘಟನೆಗಳ ಕಾರ್ಯಕರ್ತರು, ಗಿಂಬಳಕ್ಕೆ ಕಂಬಳ ಬೇಡ, ದಸರೆ ಹೊಸ ಸೇರ್ಪಡೆ ಬೇಡ ಎಂಬಿತ್ಯಾದಿ ಘೋಷಣ ಫಲಕಗಳನ್ನು ಹಿಡಿದು ಆಕ್ರೋಶ ಹೊರಹಾಕಿದರು.
ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ದಸರಾ ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಧಾರ್ಮಿಕ ನಂಬಿಕೆಗಳ ಪ್ರತೀಕ. ಚಾಮುಂಡಿ ತಾಯಿ ಆಶೀರ್ವಾದದೊಂದಿಗೆ ನಡೆಯುವ ಈ ಮಹೋತ್ಸವದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಆದರೆ ಸಾಂಸ್ಕೃತಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಪರಿಸರಕ್ಕೆ ಹಾನಿಯಾಗುವ ಕಾರ್ಯಕ್ರಮಗಳನ್ನಲ್ಲ ಎಂದು ಟೀಕಿಸಿದರು.
ದುರ್ಯೋಧನ ತನ್ನ ಹಠದಿಂದ ಹೇಗೆ ಸರ್ವನಾಶವಾದ ಅದೇ ರೀತಿಯಲ್ಲಿ ಜನರ ಅಭಿಮತವನ್ನು ಕಡೆಗಣಿಸಿ ಸರ್ಕಾರ ನಿರ್ಧಾರ ಕೈಗೊಂಡರೆ ಪರಿಣಾಮ ಕೆಟ್ಟದಲಾಗಲಿದೆ. ಪ್ರಜಾಪ್ರಭುತ್ವದಲ್ಲಿ ಜನರ ಅಭಿಪ್ರಾಯವೇ ಅಂತಿಮ. ಅಧಿಕಾರದ ಅಹಂಕಾರದಿಂದ ನಿರ್ಧಾರ ತೆಗೆದುಕೊಳ್ಳುವ ಬದಲು ನೆಲದ ಮೇಲೆ ನಿಂತು ಜನರ ಧ್ವನಿ ಆಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಾದ್ಯಂತ ಮಳೆ ಕೊರತೆ ಮತ್ತು ಬರಗಾಲದ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಮರಗಳನ್ನು ಕಡಿದು, ಲಕ್ಷಾಂತರ ಲೀಟರ್ ನೀರು ಪೋಲು ಮಾಡುವ ಕಂಬಳ ಆಯೋಜನೆಗೆ ಮುಂದಾಗಿರುವುದು ಖಂಡನೀಯ. ರೈತರು ಬೆಳೆ ಬೆಳೆಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಒಂದು ಹನಿ ನೀರನ್ನು ಕೂಡ ವ್ಯರ್ಥ ಮಾಡಬೇಡಿ ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯದಲ್ಲಿ ಬರಗಾಲ ಸಂಭವಿಸಿದ್ದು, ಜನರಿಗೆ ಸಂಕಷ್ಟ ಎದುರಾಗಲಿದೆ. ನೀರಿನ ಕೊರತೆಯಿಂದ ರೈತರು ಬೆಳೆಗಳ ನಾಶವಾಗಲಿವೆ. ಕುಡಿಯುವ ನೀರಿಗೆ ಹಾಹಾಕಾರವಾಗಲಿದೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು-ಕರ್ನಾಟಕದ ನಡುವೆ ಸಂಘರ್ಷ ನಡೆಯುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಹಣ ದುಂದುವೆಚ್ಚ ಮಾಡುವ ಬದಲು ಸರಳ ದಸರಾ ಆಚರಿಸಿ ರಾಜ್ಯದ ಜನತೆಗೆ ನೆರವಾಗುವ ಕೆಲಸ ಮಾಡಲಿ ಎಂದರು.
ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ಮಾತನಾಡಿ, ವಿಜಯನಗರ ಕಾಲದಿಂದಲೂ ನಡೆದು ಬಂದಿರುವ ದಸರಾ ಮಹೋತ್ಸವದಲ್ಲಿ ಯಾವ ಸಂದರ್ಭದಲ್ಲಿಯೂ ಕಂಬಳ ಕ್ರೀಡೆ ನಡೆಸಿಲ್ಲ. ಹೀಗಾಗಿ ಹೊಸ ಸಂಪ್ರದಾಯವನ್ನು ದಸರಾ ಸಂಸ್ಕೃತಿ ಎಂದು ತುರುಕಬೇಡಿ ಎಂದು ಕೋರಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ಬೆಟ್ಟಯ್ಯ ಕೋಟೆ, ನೀರಾವರಿ ತಜ್ಞ ಯು.ಎನ್. ರವಿಕುಮಾರ್ ಮಾತನಾಡಿದರು. ನಿವೃತ್ತ ಮೇಜರ್ ಜನರಲ್ ಒಂಬತ್ಕೆರೆ, ಪ್ರೊ.ಕಾಳಚನ್ನೇಗೌಡ, ಸಂಸ್ಕೃತಿ ಚಿಂತಕ ಮ.ಗು.ಸದಾನಂದಯ್ಯ, ರೈತ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ವಿವಿಧ ಸಂಘಟನೆಯ ಪ್ರಮುಖರಾದ ರವಿ ಬಳೆ, ಬಾನು ಪ್ರಶಾಂತ್, ಪ್ರೊ.ಮೈಸೂರ್ ಜನಾರ್ದನ, ಪ್ರಭಾ ನಂದೀಶ, ಲೀಲಾ ಶಿವಕುಮಾರ್, ಕೆ.ಜಿ.ಗುರುಸ್ವಾಮಿ, ಅಂಜನಾ, ಓಂ ಶಿವ ಚರಣ್, ಗಣೇಶ, ಸಿ.ರವಿ ಪ್ರಸಾದ್, ಐಶ್ವರ್ಯಾ ವಿ.ಶ್ರೀಧರ್, ತೇಜಸ್, ಹೊರೆಯಾಲ ದೊರೆಸ್ವಾಮಿ, ಸಾರ್ಥಕ್, ಮಹಾಂತೇಶ, ಪ್ರೊ.ನಭಿಜಾನ್, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಹೊಸೂರು ಕುಮಾರ್, ಶಂಭುಲಿಂಗಸ್ವಾಮಿ, ಕೆ.ಎಸ್.ಸೋಮ ಸುಂದರ್, ಎಸ್.ನಾಗೇಂದ್ರ, ನಾಗರಾಜ್, ಹರೀಶ್, ಹರೀಶ್, ರವಿಗೌಡ, ಆನಂದ್, ನಗರ ನಾಗಲಕ್ಷ್ಮಿಇತರರು ಇದ್ದರು.
ಪರಿಸರಕ್ಕಾಗಿ ನಾವು ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ, ಕೆಆರ್‌ಎಸ್ ಪಕ್ಷ, ಟೀಮ್ ಮೈಸೂರು, ಭೂಮಿತಾಯಿ ಹೋರಾಟ ಸಮಿತಿ, ದಲಿತ ಸಂಘರ್ಷ ಸಮಿತಿ, ಕನ್ನಡಪರ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿದವು.
ಹಕ್ಕೊತ್ತಾಯಗಳು
ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ ಆಯೋಜಿಸಬಾರದು. ದಸರಾ ಮಹೋತ್ಸವದ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸಬೇಕು. ಪಾಸ್ ವಿತರಣೆ ಸೇರಿ ಎಲ್ಲ ಆಡಳಿತಾತ್ಮಕ ಚಟುವಟಿಕೆ ಪಾರದರ್ಶಕವಾಗಿ ನಡೆಯಬೇಕು. ಸ್ಥಳೀಯ ಕಲೆಗಳು ಮತ್ತು ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ಥಳೀಯ ಕಲಾವಿದರಿಗೆ ಗೌರವಯುತ ಸಂಭಾವನೆ ನೀಡುವುದರ ಜತೆಗೆ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು.
ಬರಗಾಲದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಅಗತ್ಯ ಪರಿಹಾರ ಮತ್ತು ನೆರವು ನೀಡಬೇಕು. ಲಡಾಖ್‌ನ ಪರಿಸರ ಹೋರಾಟಗಾರ ಸೋನಮ್ ವಾಂಗ್ ಚುಕ್ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಅವರೊಂದಿಗೆ ಮಾತುಕತೆ ನಡೆಸಿ, ಪ್ರಜಾಪ್ರಭುತ್ವದ ಸಂವಾದದ ಮೂಲಕ ಸಮಸ್ಯೆ ಬಗೆಹರಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net