ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಗಜಪಡೆಗೆ ಶನಿವಾರದಿಂದ ವಿಶೇಷ ಆಹಾರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ಆನೆಗಳಿಗೆ ಜಂಬೂಸವಾರಿ ಮುಗಿಯುವವರೆಗೂ ನಿತ್ಯ ಬೆಳಗ್ಗೆ ಮತ್ತು ಸಂಜೆ ಪೌಷ್ಟಿಕಾಂಶಯುಕ್ತ ವಿಶೇಷ ಆಹಾರ ನೀಡಲಾಗುತ್ತದೆ.
ಆನೆಗಳ ದೇಹದಾರ್ಢ್ಯ, ಆರೋಗ್ಯ ಹಾಗೂ ಪಚನಕ್ರಿಯೆ ಉತ್ತಮವಾಗಿರಲು ಫೈಬರ್ ಸಮೃದ್ಧ ಆಹಾರಕ್ಕೆ ಆದ್ಯತೆ ನೀಡಲಾಗಿದೆ. ಬೇಯಿಸಿದ ಹೆಸರುಕಾಳು, ಉದ್ದಿನಕಾಳು, ಗೋಧಿ, ಕುಸುಬಲ ಅಕ್ಕಿ ಜತೆಗೆ ಈರುಳ್ಳಿ, ಮೂಲಂಗಿ, ಕ್ಯಾರೆಟ್, ಬೀಟ್‌ರೂಟ್, ಸೌತೆಕಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ಸೇರಿಸಿ ಉಪ್ಪಿನೊಂದಿಗೆ ವಿಶೇಷ ಆಹಾರ ತಯಾರಿಸಲಾಗುತ್ತದೆ. ಬೆಳಗ್ಗೆ ತಯಾರಿಸಿದ ಆಹಾರವನ್ನು ಸಂಜೆ ಹಾಗೂ ಸಂಜೆ ತಯಾರಿಸಿದ ಆಹಾರವನ್ನು ಮರುದಿನ ಬೆಳಗ್ಗೆ ಆನೆಗಳಿಗೆ ನೀಡಲಾಗುತ್ತದೆ.
ಅವಲಕ್ಕಿ, ಮೊಸರು ಹೆಚ್ಚುವರಿ: ಈ ಬಾರಿ ಮೊದಲ ಬಾರಿಗೆ ಎಲ್ಲ ಆನೆಗಳಿಗೂ ಅವಲಕ್ಕಿ ಮತ್ತು ಮೊಸರನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಆನೆಗಳ ದೇಹವನ್ನು ತಂಪಾಗಿಡುವ ಜತೆಗೆ ದಸರಾ ಅವಧಿಯಲ್ಲಿ ಮದದ ಸಾಧ್ಯತೆಯನ್ನು ನಿಯಂತ್ರಿಸಲು ಇದು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಮಾತನಾಡಿ, ಆನೆಗಳ ತೂಕ ಹೆಚ್ಚಿಸುವುದಕ್ಕಿಂತ ಅವುಗಳ ದೇಹದಾರ್ಢ್ಯ, ಆರೋಗ್ಯ ಮತ್ತು ಪಚನಕ್ರಿಯೆ ಉತ್ತಮವಾಗಿರುವುದು ಮುಖ್ಯ. ಹೀಗಾಗಿ ಫೈಬರ್ ಹೆಚ್ಚಿರುವ ಎಲೆ, ಕಡ್ಡಿ ಹಾಗೂ ತರಕಾರಿಗಳ ಜತೆಗೆ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಅಂಶವಿರುವ ಆಹಾರವನ್ನು ಬೇಯಿಸಿ ಪ್ರಮಾಣಬದ್ಧವಾಗಿ ನೀಡಲಾಗುತ್ತಿದೆ. ಪಶುವೈದ್ಯಾಧಿಕಾರಿಗಳ ಸಲಹೆ ಮತ್ತು ಮೇಲ್ವಿಚಾರಣೆಯಲ್ಲಿ ಆಹಾರದ ಪ್ರಮಾಣ ನಿಗದಿಪಡಿಸಲಾಗಿದೆ ಎಂದರು.
ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ ಸೇರಿದಂತೆ ಅಧಿಕಾರಿಗಳು ಇದ್ದರು.
ಶೀಘ್ರದಲ್ಲೇ 2ನೇ ತಂಡ ಆಗಮನ
ದಸರಾ ಗಜಪಡೆಯ ಎರಡನೇ ತಂಡದ ಆನೆಗಳು ಶೀಘ್ರದಲ್ಲೇ ಮೈಸೂರಿಗೆ ಆಗಮಿಸಲಿವೆ ಎಂದು ರವಿಶಂಕರ್ ತಿಳಿಸಿದರು. ಮಾಜಿ ಕ್ಯಾಪ್ಟನ್ ಅಭಿಮನ್ಯುವನ್ನು ದಸರಾ ಸಿದ್ಧತೆಗಾಗಿ ನಿಗದಿತ ಅವಧಿಗೂ ಮೊದಲೇ ಮೈಸೂರಿಗೆ ಕರೆತರಲು ಆದೇಶಿಸಲಾಗಿದ್ದು, ಅದರಂತೆ 15 ದಿನ ಮುಂಚಿತವಾಗಿ ಕರೆತರಲಾಗುವುದು ಎಂದರು.
ಇಂದಿನಿಂದ ಭಾರ ಹೊರುವ ತಾಲೀಮು
ದಸರಾ ಗಜಪಡೆಗೆ ಭಾರ ಹೊರುವ ತಾಲೀಮು ಸೆ.6ರಿಂದ ಆರಂಭವಾಗಲಿದೆ. ಮಹೇಂದ್ರ, ಧನಂಜಯ, ಪ್ರಶಾಂತ ಹಾಗೂ ಏಕಲವ್ಯ ಆನೆಗಳಿಗೆ ಭಾರ ಹೊರುವ ತಾಲೀಮು ನೀಡಲಾಗುತ್ತದೆ. ಒಂದೊಂದು ಆನೆ ಒಂದೊಂದು ದಿನ ಭಾರ ಹೊತ್ತು ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಿದೆ.
ಮೊದಲ ಹಂತದಲ್ಲಿ ಮರಳಿನ ಮೂಟೆ ಸೇರಿದಂತೆ ಒಟ್ಟು 500 ಕೆ.ಜಿ.ತೂಕ ಹೊತ್ತು ಆನೆಗಳು ತಾಲೀಮು ನಡೆಸಲಿವೆ. ಬಳಿಕ ಹಂತ ಹಂತವಾಗಿ ತೂಕ ಹೆಚ್ಚಿಸಿ ತಾಲೀಮು ನೀಡಲಾಗುತ್ತದೆ. ನಂತರ ಮರದ ಅಂಬಾರಿ ಹೊರುವ ಅಭ್ಯಾಸ ಮಾಡಿಸಲಾಗುತ್ತದೆ.
"
ಗಜಪಡೆಯ ತಾಲೀಮು ವೀಕ್ಷಿಸಲು ಪ್ರತಿದಿನವೂ ಸಾರ್ವಜನಿಕರ ಸಂಖ್ಯೆ ಹೆಚ್ಚುತ್ತಿದೆ. ಆನೆಗಳೊಂದಿಗೆ ಸಾರ್ವಜನಿಕರು ಪ್ರೀತಿ ಮತ್ತು ವಿಶ್ವಾಸದಿಂದ ವರ್ತಿಸಬೇಕು. ಆದರೆ ಶಾಂತವಾಗಿ, ಸುರಕ್ಷಿತ ಅಂತರ ಕಾಯ್ದುಕೊಂಡು ಆನೆಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಸಹಕರಿಸಬೇಕು.