ಮೈಸೂರು: ಮೈಸೂರು ನಗರದ ಅಭಿವೃದ್ಧಿಗೆ ಮಾರಕವಾಗಿರುವ ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ನಿರ್ಧಾರ ಕೈಬಿಡಬೇಕು ಎಂದು ಜನಾಂದೋಲನ ಮಹಾ ಮೈತ್ರಿ ಸಂಚಾಲಕ ಉಗ್ರ ನರಸಿಂಹೇಗೌಡ ಆಗ್ರಹಿಸಿದರು.
ಈಗಲೇ ನಗರದ ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ಒಂದು ವೇಳೆ ಬೃಹತ್ ಮೈಸೂರು ಪಾಲಿಕೆ ರಚನೆಯಾದರೆ ಅದು ನಗರಕ್ಕೆ ಮಾರಕವಾಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.
ಬೃಹತ್ ಮೈಸೂರು ರಚನೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಆಹ್ವಾನಿಸಲಾಗಿದೆ. ಆದರೆ ಈ ವಿಷಯದಲ್ಲಿ ಭೂ ಮಾಫಿಯಾ ಲಾಬಿ ನಡೆದಿದೆ ಎಂಬ ಶಂಕೆ ಇದೆ. ರಾಜಕಾರಣಿಗಳು ಸುಮ್ಮನಿರಲು ಕಾರಣ ಅವರೂ ಸಹ ಇದರಲ್ಲಿ ಶಾಮೀಲಾಗಿರಬಹುದಾಗಿದೆ. ಆದ್ದರಿಂದ ಎಲ್ಲರೂ ಸುಮ್ಮನಿದ್ದಾರೆ ಎಂದು ಆರೋಪಿಸಿದರು.
ಈಗಲೇ ಮೈಸೂರು 87 ಚ.ಕಿ.ಮೀ. ಇದೆ. ಇದನ್ನು 341 ಚ.ಕಿ.ಮೀ.ಗೆ ವಿಸ್ತರಿಸಿ ಬೃಹತ್ ಪಾಲಿಕೆ ರಚಿಸಲು ಯೋಜಿಸಲಾಗಿದೆ. ಈ ಹಿಂದೆಯೇ 2030ರ ವೇಳೆಗೆ ಮೈಸೂರು ಹೇಗಿರಬೇಕೆಂಬ ಯೋಜನೆ ಇತ್ತು. ಅದನ್ನು ಬದಿಗಿರಿಸಿ ಈಗ ಬೃಹತ್ ಮೈಸೂರು ಪಾಲಿಕೆ ರಚನೆಗೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚಿ ಮ್ಯಾಗ್ನೆಟ್ ಹೆಸರಿನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆರೆಯುತ್ತಿದೆ. ಇದರ ಹೆಸರಿನಲ್ಲಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ಗೆ ಸುಮಾರು 2,500 ಕೋಟಿ ರೂ. ಸಾಲಕ್ಕೆ ಕೈಚಾಚಿದೆ. ಮೈಸೂರು ಮಹಾನಗರ ಪಾಲಿಕೆಯಲ್ಲೂ ಹಣವಿಲ್ಲ. ಹೀಗಾಗಿ ಸುಮಾರು 5 ಸಾವಿರ ಕೋಟಿ ರೂ. ಬೇಡುವ ಬೃಹತ್ ಮಹಾನಗರ ಪಾಲಿಕೆ ರಚನೆ ಮಾಡಿದಲ್ಲಿ ನಿರ್ವಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮೈಸೂರಿನ ಶಾಸಕರೊಬ್ಬರು ತಮ್ಮ ವ್ಯಾಪ್ತಿಯಲ್ಲಿ ಕೃಷಿ ಭೂಮಿಯ ಅಚ್ಚುಕಟ್ಟು ಇಲ್ಲದ ಕಟ್ಟೆಯೊಂದಕ್ಕೆ ಕಾವೇರಿ ನದಿಯಿಂದ ನೀರು ತುಂಬಿಸಲು 50 ಕೋಟಿ ರೂ. ಮಂಜೂರು ಮಾಡಿಸಿಕೊಂಡಿದ್ದಾರೆ. ಇವರು ತಮಗೆ ಮತ ನೀಡಿದ ರೈತರಿಂದ ಅತಿ ಕಡಿಮೆ ಬೆಲೆಗೆ ಭೂಮಿ ಖರೀದಿಸಿ ಅಧಿಕ ಬೆಲೆಗೆ ಮಾರಿಕೊಂಡ ವಂಚಕರಾಗಿದ್ದಾರೆ. ಇಂತಹವರೆಲ್ಲ ಬೃಹತ್ ಮೈಸೂರು ಪಾಲಿಕೆ ರಚನೆ ಹಿಂದಿದ್ದಾರೆ ಎಂದು ಆರೋಪಿಸಿದರು.
ಈಗಿನ ಪಾಲಿಕೆ ವ್ಯಾಪ್ತಿಯ ಕೆರೆ-ಕಟ್ಟೆ ಸಂರಕ್ಷಣೆಯೇ ಆಗಿಲ್ಲ ಹೀಗಿರುವಾಗ ಬೃಹತ್ ಮೈಸೂರು ಮಹಾ ನಗರ ಪಾಲಿಕೆ ರಚನೆ ಮೂಲಕ ಮೈಸೂರನ್ನು ರೋಗಗ್ರಸ್ತ ನಗರವನ್ನಾಗಿ ಮಾಡಲು ಹೊರಟಿದ್ದಾರೆ. ನಮಗೆ ಸುಂದರವಾದ, ಜೀವಿಸಲು ಯೋಗ್ಯವಾದ ರೀತಿ ಮೈಸೂರು ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿ ಬೃಹತ್ ಮೈಸೂರು ಮಹಾ ನಗರ ಪಾಲಿಕೆ ರಚನೆ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬಹಳಷ್ಟು ಅಧಿಕಾರಿಗಳು ಹಲವಾರು ವರ್ಷಗಳಿಂದ ಅಲ್ಲಿಯೇ ತಳವೂರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಸಂಘಟನೆಯ ಪದಾಧಿಕಾರಿಗಳಾದ ಚಂದ್ರಶೇಖರ ಮೇಟಿ, ಅಭಿರುಚಿ ಗಣೇಶ್ ಇದ್ದರು.