‘ನಿಮ್ಹಾನ್ಸ್ ಘಟಕ’ ಸಿಎಂಗೆ ಅಧಿಕಾರಿಗಳಿಂದ ತಪ್ಪು ಮಾಹಿತಿ: ಬಡಗಲಪುರ ನಾಗೇಂದ್ರ

ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ಕೆಲ ಅಧಿಕಾರಿಗಳು ಹಠಕ್ಕೆ ಬಿದ್ದು, ಅದೇ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಲು ಮುಂದಾಗಿ ರೈತರನ್ನು ಬೀದಿಪಾಲು ಮಾಡಲು ಹೊರಟಿದ್ದಾರೆ
  • ಹಲವಾರು ದಶಕಗಳಿಂದ ರೈತರು ಇಲ್ಲಿ ಉಳುಮೆ ಮಾಡುತ್ತಿದ್ದು, ಇವರನ್ನು ಬೀದಿಪಾಲು ಮಾಡುವ ಕೆಲಸ ಸರಿಯಲ್ಲ
ಮೈಸೂರು: ನಗರದ ಗುಡುಮಾದನಹಳ್ಳಿ ಬಳಿ ನಿಮ್ಹಾನ್ಸ್ ಘಟಕ ನಿರ್ಮಾಣ ಕುರಿತಂತೆ ಮುಖ್ಯಮಂತ್ರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ದೂರಿದರು.
ಈ ಜಾಗ ಘಟಕ ನಿರ್ಮಾಣಕ್ಕೆ ಸೂಕ್ತವಲ್ಲ ಎಂದು ತಿಳಿದಿದ್ದರೂ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಹಾಗೂ ಅವರ ಹಿಂಬಾಲಕರು, ಕೆಲ ಅಧಿಕಾರಿಗಳು ಹಠಕ್ಕೆ ಬಿದ್ದು, ಅದೇ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಲು ಮುಂದಾಗಿ ರೈತರನ್ನು ಬೀದಿಪಾಲು ಮಾಡಲು ಹೊರಟಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಗುಡುಮಾದನಹಳ್ಳಿಯ ಜಾಗ ನೀರಾವರಿಯಿಂದ ಕೂಡಿದ್ದು, ಇಲ್ಲಿ ಕಟ್ಟಡ ನಿರ್ಮಾಣ ಸೂಕ್ತವಲ್ಲ. ಜತೆಗೆ ಹಲವಾರು ದಶಕಗಳಿಂದ ರೈತರು ಇಲ್ಲಿ ಉಳುಮೆ ಮಾಡುತ್ತಿದ್ದು, ಇವರನ್ನು ಬೀದಿಪಾಲು ಮಾಡುವ ಕೆಲಸ ಸರಿಯಲ್ಲ ಎಂದರು.
ಈ ಕುರಿತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡಿಕೊಟ್ಟಿದ್ದು, ಬೇರೆ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಕೋರಲಾಗುವುದು. ಜತೆಗೆ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಮನವಿ ಮಾಡಲಾಗುವುದು ಎಂದರು.
ದಲಿತ ಮುಖಂಡ ಶಂಭುಲಿಂಗಸ್ವಾಮಿ ಮಾತನಾಡಿ, ಗುಡುಮಾದನಹಳ್ಳಿ ನೀರಿನಿಂದ ಕೂಡಿದೆ. ಅದು ಗೋಮಾಳ ಸರ್ಕಾರದ ಸಾಮ್ಯತೆಯಲ್ಲಿದೆ ಎಂದು ವಾದಿಸುವುದು ಸರಿಯಲ್ಲ. ಆಸ್ಪತ್ರೆ ನಿರ್ಮಿಸಿದರೆ ಇಡೀ ಪರಿಸರವನ್ನು ನಾಶ ಮಾಡಬೇಕಾಗುತ್ತದೆ. ಪರಿಸರಕ್ಕೆ ಹಾನಿ ಮಾಡಬಾರದು, ಜಮೀನನ್ನು ರೈತರಿಗೆ ಮಂಜೂರು ಮಾಡಿ ಅಥವಾ ಗೋಮಾಳವಾಗಿ ಬಿಡಿ ಎಂದು ಆಗ್ರಹಿಸಿದರು.
ಪರಿಸರವಾದಿ ಭಾನುಪ್ರಕಾಶ್ ಮಾತನಾಡಿ, ಅಸ್ಪತ್ರೆ ನಿಯಮದ ಪ್ರಕಾರ ಶಬ್ದಮಾಲಿನ್ಯ ರಹಿತವಾಗಿರಬೇಕು. ಬಳಸಿದ ನೀರು ಮರು ಶುದ್ಧೀಕರಣ ಘಟಕವೂ ಬೇಕಾಗುತ್ತದೆ. ಆದರೆ ಇದಕ್ಕೆ ಈ ಜಾಗ ವ್ಯತಿರಕ್ತಿವಾಗಿದೆ ಎಂದರು.
ಮುಖಂಡ ಉಗ್ರ ನರಸಿಂಹೇಗೌಡ ಮಾತನಾಡಿ, ಇಲ್ಲಿ ನಿಮ್ಹಾನ್ಸ್ ಘಟಕ ನಿರ್ಮಾಣಕ್ಕೆ ಪಟ್ಟು ಹಿಡಿಯವುದರ ಹಿಂದೆ ಭೂ ಮಾಫಿಯಾ ಕೈವಾಡವಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ಕೈಬಿಡಬೇಕು. ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆ ಕುರಿತಂತೆ ಕೈಗೊಂಡ ನಿರ್ಧಾರ ಇಲ್ಲಿಯೂ ತಳೆಯಬೇಕು ಎಂದು ಕೋರಿದರು.
ಮುಖಂಡರಾದ ಹೊಸೂರು ಕುಮಾರ್, ಪಿ.ಮರಂಕಯ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net