ಮೈಸೂರಿನಲ್ಲಿ ಶೀಘ್ರದಲ್ಲೇ ನಿಮ್ಹಾನ್ಸ್ ನಿರ್ಮಾಣ

ನಿಮ್ಹಾನ್ಸ್'ಗೆ ಗುರುಸಿರುವ ಜಾಗ
ನಿಮ್ಹಾನ್ಸ್'ಗೆ ಗುರುಸಿರುವ ಜಾಗ
Published on
ಸದೇಶ್ ಕಾರ್ಮಾಡ್ ಮೈಸೂರು
ನರರೋಗ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುವ ರೋಗಿಗಳು ಚಿಕಿತ್ಸೆಗಾಗಿ ಬೆಂಗಳೂರಿನತ್ತ ತೆರಳಬೇಕಾದ ಅನಿವಾ ರ್ಯತೆಗೆ ಶೀಘ್ರದಲ್ಲೇ ತೆರೆ ಬೀಳುವ ಸಾಧ್ಯತೆ ಇದೆ. ನಗರದ ಹೊರವಲಯದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಆಸ್ಪತ್ರೆ ನಿರ್ಮಾಣದ ಬಹುಕಾಲದ ಕನಸು ನನಸಾಗುವ ಹಂತ ತಲುಪಿದೆ.
ತಾಲೂಕಿನ ಗುಡುಮಾದನಹಳ್ಳಿ ಸಮೀಪ 20 ಎಕರೆ ಪ್ರದೇಶದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದ್ದು, ಆರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಸಿದ್ಧಪಡಿಸಿರುವ ವಿಸ್ತೃತ ಯೋಜನಾ ವರದಿಗೆ ರಾಜ್ಯ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಆಸ್ಪತ್ರೆ ನಿರ್ಮಾಣಕ್ಕಾಗಿ ಅಗತ್ಯವಿದ್ದ ಭೂಮಿಯನ್ನು ಜಿಲ್ಲಾಡಳಿತವು ವೈದ್ಯಕೀಯ ಶಿಕ್ಷಣ ಇಲಾಖೆಗೆ ಅಧಿಕೃತವಾಗಿ ಹಸ್ತಾಂತರಿಸಿದ್ದು, ಯೋಜನೆ ಅನುಷ್ಠಾನದ ಪ್ರಕ್ರಿಯೆ ವೇಗ ಪಡೆದುಕೊಂಡಿದೆ.
ಆಸ್ಪತ್ರೆಯಲ್ಲಿ ಎಂಆರ್‌ಐ ಸೇರಿದಂತೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸುವ ಹಿನ್ನೆಲೆಯಲ್ಲಿ ಮುಂಬೈನ ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (ಎಇಆರ್‌ಬಿ)ಯಿಂದ ತಾಂತ್ರಿಕ ಅನುಮೋದನೆ ಕೋರಲಾಗಿದೆ. ಒಂದು ಲಕ್ಷ ಚದರ ಅಡಿಗೂ ಅಧಿಕ ವಿಸ್ತೀರ್ಣ ಹೊಂದಿರುವ ಕಟ್ಟಡವಾಗಿರುವುದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನೂ ಪಡೆಯಲಾಗುತ್ತಿದೆ. ಈ ಎರಡೂ ಅನುಮತಿಗಳು ಲಭ್ಯವಾದ ತಕ್ಷಣ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆಯಲಿದೆ.
ಬೆಂಗಳೂರಿನ ಅವಲಂಬನೆಗೆ ತೆರೆ: ಪ್ರಸ್ತುತ ಮೆದುಳು ಮತ್ತು ನರ ಸಂಬಂಧಿತ ಕಾಯಿಲೆಗಳು ಹಾಗೂ ತೀವ್ರ ಮಾನಸಿಕ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಮೈಸೂರು ಭಾಗದ ರೋಗಿಗಳನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತಿದೆ. ಇದರಿಂದ ರೋಗಿಗಳು ಹಾಗೂ ಅವರ ಕುಟುಂ ಬಸ್ಥರು ವಾರಗಳ ಕಾಲ ಬೆಂಗಳೂರಿನಲ್ಲಿ ತಂಗಬೇಕಾಗುವುದು ಮಾತ್ರವಲ್ಲದೆ ಸಾವಿರಾರು ರೂಪಾಯಿ ವೆಚ್ಚವನ್ನೂ ಭರಿಸಬೇಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿಯೇ ನಿಮ್ಹಾನ್ಸ್ ಆಸ್ಪತ್ರೆ ಸ್ಥಾಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬಂದಿತ್ತು.
ಜನರ ಈ ಬೇಡಿಕೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸ್ಪಂದಿಸಿ ಕಳೆದ ಬಾರಿಯ ಬಜೆಟ್‌ನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಆರಂಭದಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ರೈತರಿಂದ ತೀವ್ರ ರೋಧಗಳು ವ್ಯಕ್ತವಾಗಿದ್ದರೂ, ಈಗ ಬಹುತೇಕ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಯೋಜನೆ ಅನುಷ್ಠಾನದ ಹಂತಕ್ಕೆ ಬಂದಿದೆ.
ಆರು ಅಂತಸ್ತಿನ ಸುಸಜ್ಜಿತ ಆಸ್ಪತ್ರೆ: 20 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಆರು ಅಂತಸ್ತಿನ ಆಸ್ಪತ್ರೆಗೆ ಸಿದ್ಧಪಡಿಸಿರುವ ನೀಲನಕ್ಷೆಗೆ ಈಗಾಗಲೇ ಅನುಮೋದನೆ ದೊರೆತಿದೆ. ಆಸ್ಪತ್ರೆಯಲ್ಲಿ ನರರೋಗ, ನರಶಸ್ತ್ರಚಿಕಿತ್ಸೆ, ಮಾನಸಿಕ ಆರೋಗ್ಯ, ಪುನರ್ವಸತಿ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ವಿಭಾಗಗಳನ್ನು ಒಂದೇ ಕಟ್ಟಡದಲ್ಲಿ ಕಲ್ಪಿಸಲಾಗುತ್ತಿದೆ.
ನಿಮ್ಹಾನ್ಸ್'ಗೆ ಗುರುಸಿರುವ ಜಾಗ

ನೆಲ ಮಹಡಿಯಲ್ಲಿ ರೇಡಿಯಾಲಜಿ ವಿಭಾಗ, ಎಂಆರ್‌ಐ ಸೇರಿದಂತೆ ಸುಧಾರಿತ ತಪಾಸಣಾ ವ್ಯವಸ್ಥೆ, ಫಾರ್ಮಸಿ ಹಾಗೂ ತುರ್ತು ಶಸ್ತ್ರಚಿಕಿತ್ಸಾ ಘಟಕ ಇರಲಿವೆ. ಮೊದಲ ಮಹಡಿಯಲ್ಲಿ ಪುರುಷ ಮತ್ತು ಮಹಿಳೆಯರ ಮನೋವೈದ್ಯಕೀಯ ವಾರ್ಡ್‌ಗಳು, ಅಂಕಾಲಜಿ ವಾರ್ಡ್‌ಗಳು, ಹೊರರೋಗಿ ವಿಭಾಗಗಳು ಹಾಗೂ ಶೈಕ್ಷಣಿಕ ಸೌಲಭ್ಯಗಳು ನಿರ್ಮಾಣವಾಗಲಿವೆ.
ಎರಡನೇ ಮಹಡಿಯಲ್ಲಿ ನ್ಯೂರೋ ಸರ್ಜರಿ ವಿಭಾಗ, ವಿಶೇಷ ವಾರ್ಡ್‌ಗಳು, ವಿಐಪಿ ಕೊಠಡಿಗಳು ಮತ್ತು ಹೊರರೋಗಿ ಸೇವೆಗಳು ಇರಲಿವೆ. ಮೂರನೇ ಮಹಡಿಯಲ್ಲಿ ನ್ಯೂರೋ ಪುನರ್ವಸತಿ ಕೇಂದ್ರ, ನ್ಯೂರೋಲಜಿ ವಾರ್ಡ್‌ಗಳು, ಔಷಧ ಸಂಗ್ರಹ ವಿಭಾಗ ಹಾಗೂ ಸೆಮಿನಾರ್ ಕೊಠಡಿಗಳನ್ನು ನಿರ್ಮಿಸಲಾಗುವುದು.
ನಾಲ್ಕನೇ ಮಹಡಿಯಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳು, ಐಸಿಯು, ಎಚ್‌ಡಿಯು, ರಿಕವರಿ ವಾರ್ಡ್‌ಗಳು ಹಾಗೂ ಅನಸ್ತೇಷಿಯಾ ವಿಭಾಗ ಕಾರ್ಯನಿರ್ವಹಿಸಲಿವೆ. ಐದನೇ ಮಹಡಿಯಲ್ಲಿ ರಕ್ತನಿಧಿ, ಔಷಧಾಲಯ, ವೈದ್ಯರ ವಿಶ್ರಾಂತಿ ಕೊಠಡಿ, ಸಾರ್ವಜನಿಕರ ಕ್ಯಾಂಟೀನ್, ವೈದ್ಯಕೀಯ ದಾಖಲೆ ವಿಭಾಗ, ನಿರೀಕ್ಷಣಾ ಕೊಠಡಿ ಹಾಗೂ ಕಾನ್ಫರೆನ್ಸ್ ಹಾಲ್ ಇರಲಿದೆ.
ಅತ್ಯಾಧುನಿಕ ಮೂಲಸೌಕರ್ಯ: ಆಸ್ಪತ್ರೆಯಲ್ಲಿ ಹೈಸ್ಪೀಡ್ ಲಿಫ್ಟ್, ಸಿಸಿಟಿವಿ ನಿಗಾ ವ್ಯವಸ್ಥೆ, ದೂರವಾಣಿ ಮತ್ತು ನೆಟ್‌ವರ್ಕಿಂಗ್ ವ್ಯವಸ್ಥೆ, ಯುಪಿಎಸ್ ಬ್ಯಾಕಪ್, ಟೆಲಿವಿಷನ್ ಸಂಪರ್ಕ, ಸೌರ ವಿದ್ಯುತ್ ವ್ಯವಸ್ಥೆ, ಎಚ್‌ವಿಎಸಿ, ಮೆಡಿಕಲ್ ಗ್ಯಾಠ್ಛ್ಛ ಪೈಪ್‌ಲೈನ್ ಸೇರಿದಂತೆ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಅಳವಡಿಸಲಾಗುತ್ತಿದೆ.
ಆಸ್ಪತ್ರೆ ಕಾರ್ಯಾರಂಭಗೊಂಡ ಬಳಿಕ ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ರೋಗಿಗಳಿಗೆ ಬೆಂಗಳೂರಿಗೆ ತೆರಳುವ ಅಗತ್ಯ ಗಣನೀಯವಾಗಿ ಕಡಿಮೆಯಾಗಲಿದ್ದು, ವಿಶೇಷ ನರರೋಗ ಮತ್ತು ಮಾನಸಿಕ ಆರೋಗ್ಯ ಚಿಕಿತ್ಸೆಯು ಸ್ಥಳೀಯ ಮಟ್ಟದಲ್ಲೇ ಸುಲಭವಾಗಿ ಲಭ್ಯವಾಗಲಿದೆ.
ನಗರದ ಹೊರ ವಲಯದಲ್ಲಿ ನಿಮ್ಹಾನ್ಸ್ ಮಾದರಿ ಆಸ್ಪತ್ರೆ ನಿರ್ಮಾಣ ಸಂಬಂಧ ಡಿಪಿಆರ್‌ಗೆ ಈಗಾಗಲೇ ಸರ್ಕಾರದ ಅನುಮೋದನೆ ನೀಡಿದೆ. ಪರಮಾಣು ಶಕ್ತಿ ನಿಯಂತ್ರಣ ಮಂಡಳಿ ಹಾಗೂ ಕೆಪಿಸಿಬಿ ಒಪ್ಪಿಗೆ ದೊರೆಯುವುದು ಮಾತ್ರ ಬಾಕಿ ಉಳಿದಿದೆ. ಈ ಅನುಮತಿ ದೊರೆತ ಕೂಡಲೇ ಕಾಮಗಾರಿ ಆರಂಭಿಸಲಾಗುವುದು.
ಗುರುಪ್ರಸಾದ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ವಿಭಾಗ.
ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಅನುಕೂಲಕೋಸ್ಕರ ನಿಮ್ಹಾನ್ಸ್ ಮಾದರಿ ಆಸ್ಪತ್ರೆಯನ್ನು ನಗರದ ಹೊರ ವಲಯದಲ್ಲಿ ನಿರ್ಮಾಣ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ. ಈ ಆಸ್ಪತ್ರೆಯು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವ್ಯಾಪ್ತಿಗೆ ಬರಲಿದೆ. ಆಸ್ಪತ್ರೆ ಪ್ರಾರಂಭವಾದರೆ ಸಾಕಷ್ಟು ರೋಗಿಗಳಿಗೆ ಸ್ಥಳೀಯವಾಗಿ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಲಿದೆ.
ದಾಕ್ಷಾಯಿಣಿ, ಡೀನ್, ಮೈಸೂರು ವೈದ್ಯಕೀಯ ಕಾಲೇಜು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net