ಗುಡುಮಾದನಹಳ್ಳಿಯಲ್ಲಿ ತಲೆ ಎತ್ತಲಿದೆ ನಿಮ್ಹಾನ್ಸ್ ಮಾದರಿ ಆಸ್ಪತ್ರೆ

 ಗುಡಮಾದನಹಳ್ಳಿ ಗ್ರಾಮ
ಗುಡಮಾದನಹಳ್ಳಿ ಗ್ರಾಮ
Published on

ಪ್ರಮುಖ ಮುಖ್ಯಾಂಶಗಳು

  • ಒತ್ತುವರಿ ಮಾಡಿಕೊಂಡಿದ್ದ ಜಾಗ ತೆರವು * ಪ್ರತಿಭಟನೆಗೆ ಜಗ್ಗದ ತಹಸೀಲ್ದಾರ್
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವ ಕ್ಷೇತ್ರ ವರುಣ ಹೋಬಳಿ ಗುಡಮಾದನಹಳ್ಳಿ ಗ್ರಾಮದಲ್ಲಿ ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ತಲೆ ಎತ್ತಲಿದೆ.
ಸಿದ್ದರಾಮಯ್ಯ ಅವರ ಬಹುದಿನಗಳ ಕನಸು ಸಾಕಾರಗೊಳ್ಳುವ ಸಮಯ ಬಂದಿದೆ. 20 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ. ಅನಧಿಕೃತವಾಗಿ ಸ್ವಾಧೀನದಲ್ಲಿದ್ದ ರೈತರಿಗೆ ಗೇಟ್ ಪಾಸ್ ಕೊಟ್ಟ ತಾಲೂಕು ಆಡಳಿತ ಜಮೀನನ್ನು ವಶಕ್ಕೆ ಪಡೆದು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಿದೆ.
ಗುಡಮಾದನಹಳ್ಳಿ ಸರ್ವೇ ನಂ.60 ಮತ್ತು 68 ರಲ್ಲಿ 20 ಎಕರೆ ಜಮೀನು ಆಸ್ಪತ್ರೆಗಾಗಿ ಮೀಸಲಿಡಲಾಗಿತ್ತು. ಸದರಿ ಜಮೀನಿನಲ್ಲಿ ಹಲವಾರು ವರ್ಷಗಳಿಂದ ಕೆಲವು ಸ್ಥಳೀಯರು ಅನಧಿಕೃತವಾಗಿ ಸಾಗುವಳಿ ಮಾಡಿಕೊಂಡಿದ್ದರು. ಇವರನ್ನು ಎತ್ತಂಗಡಿ ಮಾಡಲು ಜಿಲ್ಲಾಡಳಿತ ಹರಸಾಹಸ ನಡೆಸಿತ್ತು. ಸಾಕಷ್ಟು ವಿರೋಧವನ್ನೂ ಎದುರಿಸಿತ್ತು. ಮುಖ್ಯಮಂತ್ರಿ ಕ್ಷೇತ್ರದಲ್ಲಿ ಮಹತ್ತರ ಯೋಜನೆ ಸಾಕಾರಗೊಳಿಸಲು ನಿರ್ಧರಿಸಿದ ತಾಲೂಕು ಆಡಳಿತ ಅನಧಿಕೃತವಾಗಿ ಸ್ವಾಧೀನದಲ್ಲಿದ್ದ ಸ್ಥಳೀಯರಿಗೆ ಶಾಕ್ ಕೊಟ್ಟಿದೆ.
ಪೊಲೀಸರ ಸಮೇತ ಹಾಜರಾದ ತಹಸೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್, ಸದರಿ ಜಮೀನು ವಶಕ್ಕೆ ಪಡೆಯಲು ಮುಂದಾದಾಗ ಪ್ರತಿಭಟನೆ ಎದುರಿಸಬೇಕಾಯಿತು. ರೈತ ಸಂಘದ ನೆರವಿನಿಂದ ಸ್ವಾಧೀನದಲ್ಲಿದ್ದ ರೈತರು ಭಾರಿ ವಿರೋಧ ವ್ಯಕ್ತಪಡಿಸಿದರು. ವಿರೋಧ ಲೆಕ್ಕಿಸದ ತಹಸೀಲ್ದಾರ್ ಮಹೇಶ್‌ಕುಮಾರ್ ಹಾಗೂ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಶೇಖರ್ ಮನವೊಲಿಸುವಲ್ಲಿ ಯಶಸ್ವಿಯಾದರು.
ಗುಡಮಾದನಹಳ್ಳಿಯ ಸರ್ವೆ ನಂ.8, 60, 68 ರಲ್ಲಿ ಆಶ್ರಯ ಯೋಜನೆಗಾಗಿ 8 ಎಕರೆ 10 ಗುಂಟೆ ಜಮೀನು ಸಹ ಕಾಯ್ದಿರಿಸಲಾಗಿದೆ. ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣದ ಜತೆಗೆ ಆಶ್ರಯ ಯೋಜನೆಯ ನಿವೇಶನಗಳ ರಚನೆಯೂ ನಡೆಯಲಿದ್ದು, ಅನಧಿಕೃತವಾಗಿ ಸ್ವಾಧೀನದಲ್ಲಿರುವ ಸ್ಥಳೀಯರಿಗೆ ಅರ್ಹತೆಗೆ ಅನುಗುಣವಾಗಿ ನಿವೇಶನ ನೀಡುವ ಭರವಸೆ ನೀಡಿದ ನಂತರ ಸ್ವಯಂಪ್ರೇರಿತವಾಗಿ ಜಮೀನು ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದರು.
ಆಸ್ಪತ್ರೆ ನಿರ್ಮಾಣದ ಉದ್ದೇಶಿತ ಜಮೀನಿನಲ್ಲಿ ಬೆಳೆಯಲಾಗಿದ್ದ ಬಾಳೆ ತೋಟ ಸಹ ಜೆಸಿಬಿ ಮೂಲಕ ತೆರುವುಗೊಳಿಸಲಾಯಿತು. ಇದಲ್ಲದೆ ಸರ್ವೇ ನಂ.60 ರಲ್ಲಿ 1 ಎಕರೆ 38 ಗುಂಟೆ ಸ್ಮಶಾನಕ್ಕಾಗಿ ಮೀಸಲಿಡಲಾಗಿದೆ. ಸರ್ವೇ ನಂ.4 ರಲ್ಲಿ 20 ಗುಂಟೆ ಜಮೀನು ಒಕ್ಕಲಿಗರ ಸಂಘದ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಉಳಿದ 2 ಎಕರೆ 20 ಗುಂಟೆ ಜಾಗದಲ್ಲಿ ಆಟದ ಮೈದಾನ ಬರಲಿದೆ. ಒಟ್ಟಾರೆ ಮುಖ್ಯಮಂತ್ರಿ ಸ್ವ ಕ್ಷೇತ್ರದಲ್ಲಿ ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ನಿರ್ಮಿಸುವ ಬಹುದಿನಗಳ ಕನಸು ಸಾಕಾರಗೊಳ್ಳಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net