ಜನವರಿಯಿಂದ ಪ್ರಯಾಣಿಕರ ಆಟೋ ಮೀಟರ್ ನೂತನ ದರ ಜಾರಿ

ಪ್ರಯಾಣಿಕರ ಆಟೋ ಮೀಟರ್ ದರ ಏರಿಕೆ ಸಂಬಂಧ ಬುಧವಾರ ಆಯೋಜಿಸಿದ್ದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿ.ಲಕ್ಷ್ಮೀಕಾಂತರೆಡ್ಡಿ, ವಸಂತ್ ಈಶ್ವರ್ ಚೌಹಾಣ್, ಮಧುರ, ರಾಮಚಂದ್ರಪ್ಪ, ನಯಾಜ್ ಪಾಷ, ಮಂಜುನಾಥ್, ಶಿವಕುಮಾರ್ ಇದ್ದರು.
ಪ್ರಯಾಣಿಕರ ಆಟೋ ಮೀಟರ್ ದರ ಏರಿಕೆ ಸಂಬಂಧ ಬುಧವಾರ ಆಯೋಜಿಸಿದ್ದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿ.ಲಕ್ಷ್ಮೀಕಾಂತರೆಡ್ಡಿ, ವಸಂತ್ ಈಶ್ವರ್ ಚೌಹಾಣ್, ಮಧುರ, ರಾಮಚಂದ್ರಪ್ಪ, ನಯಾಜ್ ಪಾಷ, ಮಂಜುನಾಥ್, ಶಿವಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ನಾಲ್ಕು ವರ್ಷಗಳಿಂದ ಹೆಚ್ಚಳವಾಗದ ಪ್ರಯಾಣಿಕರ ಆಟೋ ಮೀಟರ್ ದರ
  • ಕನಿಷ್ಠ ಮೀಟರ್ ದರ 30 ರೂ. ಅನ್ನು 6 ರೂ. ಹೆಚ್ಚಳ ಮಾಡಿ 36 ರೂ.ಗೆ ಏರಿಕೆ
  • ಪ್ರತಿ ಕಿಮೀಗೆ 18 ರೂ. ಮತ್ತು ಎರಡು ಕಿ.ಮೀಗೆ 36 ರೂ. ಪರಿಷ್ಕರಣೆ ಮಾಡಿ ಜಾರಿಗೆ ಬರುವುದಕ್ಕೆ ತೀರ್ಮಾನಿಸಲಾಯಿತು
ಮೈಸೂರು: ಪ್ರಯಾಣಿಕರ ಆಟೋ ಮೀಟರ್ ದರ ಪರಿಷ್ಕರಣೆಗೆ ಸಾರಿಗೆ ಪ್ರಾಧಿಕಾರದ ಸಭೆ ಒಪ್ಪಿಗೆ ಸೂಚಿಸಿದ್ದು, ಜನವರಿ ಒಂದರಿಂದ ನೂತನ ದರ ಜಾರಿಗೆ ಬರಲಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಪ್ರಾಧಿಕಾರದ ಸಭೆಯಲ್ಲಿ ದರ ಏರಿಕೆಗೆ ಸಮ್ಮತಿ ಸೂಚಿಸಲಾಯಿತು. ಪ್ರಯಾಣಿಕರ ಆಟೋರಿಕ್ಷಾ ದರ ಪರಿಷ್ಕರಣೆ ಮಾಡುವ ಕುರಿತು ವಿವಿಧ ಆಟೋ ಮಾಲೀಕರು, ಚಾಲಕ ಸಂಘಟನೆಗಳು ಸಲ್ಲಿಸಿದ್ದ ಮನವಿ ಕುರಿತು ಚರ್ಚಿಸಿದ ಬಳಿಕ ಪರಿಷ್ಕರಣೆಗೆ ಸಭೆ ಅನುಮೋದನೆ ನೀಡಿತು.
ಕಳೆದ ನಾಲ್ಕು ವರ್ಷಗಳಿಂದ ಪ್ರಯಾಣಿಕರ ಆಟೋ ಮೀಟರ್ ದರ ಹೆಚ್ಚಳ ಮಾಡದೆ ಚಾಲಕರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಪರಿಷ್ಕರಣೆ ಮಾಡಬೇಕು ಎನ್ನುವ ಬೇಡಿಕೆಗೆ ಕೊನೆಗೂ ಜಿಲ್ಲಾಡಳಿತ ಒಪ್ಪಿಗೆ ನೀಡಿ ಈಗ ಇರುವ ಕನಿಷ್ಠ ಮೀಟರ್ ದರ 30 ರೂ. ಅನ್ನು 6 ರೂ. ಹೆಚ್ಚಳ ಮಾಡಿ 36 ರೂ.ಗೆ ಏರಿಕೆ ಮಾಡಲಾಯಿತು.
ಮೈಸೂರು ನಗರದಲ್ಲಿ ಹಾಲಿ ಒಂದು ಕಿ.ಮೀ.ಗೆ 15 ರೂ., ಎರಡು ಕಿ.ಮೀಗೆ 30 ರೂ. ಇದ್ದು, 2026ರ ಜನವರಿ 1ರಿಂದ ಅನ್ವಯವಾಗುವಂತೆ ಪ್ರತಿ ಕಿಮೀಗೆ 18 ರೂ. ಮತ್ತು ಎರಡು ಕಿ.ಮೀಗೆ 36 ರೂ. ಪರಿಷ್ಕರಣೆ ಮಾಡಿ ಜಾರಿಗೆ ಬರುವುದಕ್ಕೆ ತೀರ್ಮಾನಿಸಲಾಯಿತು. ಪ್ರಾಧಿಕಾರದ ಸಭೆಯಲ್ಲಿ ಕೈಗೊಂಡ ನಿರ್ಧಾರಕ್ಕೆ ಸಂಬಂಧಿಸಿದಂತೆ ಇನ್ನು ಒಂದು ವಾರದಲ್ಲಿ ಅಧಿಕೃತವಾಗಿ ನೂತನ ದರ ಪರಿಷ್ಕರಣೆ ಆದೇಶ ಹೊರಬೀಳಲಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಪ್ರಕಟಿಸಿದರು.
ಪ್ರಾಧಿಕಾರದ ಸಭೆಯ ಆರಂಭದಲ್ಲಿ ಸದಸ್ಯ ಕಾರ್ಯದರ್ಶಿಯೂ ಆದ ಪ್ರಾದೇಶಿಕ ಜಂಟಿ ಆಯುಕ್ತ ವಸಂತ್ ಈಶ್ವರ್ ಚೌಹಾಣ್ ಅವರು, ಜಿಲ್ಲೆಯಲ್ಲಿ ಬಾಡಿಗೆ ದರವನ್ನು ಪರಿಷ್ಕರಿಸಲು ಕರುನಾಡು ಸೈನ್ಯ ಟ್ರೇಡ್ ಯೂನಿಯನ್, ಸಂಯುಕ್ತ ಕರ್ನಾಟಕ ಆಟೋ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಚಾಲಕರ ಒಕ್ಕೂಟ, ಜೈ ಕನ್ನಡಾಂಬೆ ಮಹಾಸೇವೆ ಸೇರಿದಂತೆ ಮತ್ತಿತರ ಆಟೋ ಚಾಲಕರು ಮತ್ತು ಮಾಲೀಕರ ಸಂಘದವರು ಬೇಡಿಕೆ ಇಟ್ಟಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.
ಈ ವೇಳೆ ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆಯಲ್ಲಿ ದರ ಪರಿಷ್ಕರಣೆಯನ್ನು ಯಾವಾಗನಿಂದ ಮಾಡಲಾಗಿದೆ ಎಂದು ಚಾಲಕರನ್ನು ಪ್ರಶ್ನಿಸಿದಾಗ, ಕಳೆದ ವರ್ಷ ದರ ಪರಿಷ್ಕರಣೆಗೆ ಒಪ್ಪಿಗೆ ನೀಡಿದ್ದರೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆದೇಶ ಜಾರಿಗೊಳಿಸಿಲ್ಲ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಾದೇಶಿಕ ಜಂಟಿ ಆಯುಕ್ತ ವಸಂತ್ ಈಶ್ವರ್ ಚೌಹಾಣ್, ರಾಜ್ಯ ಸರ್ಕಾರ ಒಂದು ರಾಜ್ಯ-ಒಂದು ದರ ನಿಗದಿಪಡಿಸುವ ವಿಚಾರದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿರುವ ಕಾರಣ ಆದೇಶ ಹೊರಡಿಸಿಲ್ಲ ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಸರ್ಕಾರ ನೂತನ ದರ ಜಾರಿಗೆ ತರುವವರೆಗೆ ಪ್ರಾಧಿಕಾರಕ್ಕೆ ಇರುವ ಅಧಿಕಾರವನ್ನು ಚಲಾಯಿಸಿ ದರ ಪರಿಷ್ಕರಣೆಗೆ ಅನುಮೋದನೆ ಕೊಡೋಣ. ಒಂದು ರಾಜ್ಯ-ಒಂದು ದರದ ಆದೇಶ ಬಂದರೆ ಜಾರಿಗೆ ಬರಲಿದೆ. ನಾಲ್ಕು ವರ್ಷಗಳಿಂದ ಪರಿಷ್ಕರಣೆ ಮಾಡಿಲ್ಲದ ಕಾರಣ 30 ರೂ.ನಿಂದ 36ರೂ.ಗೆ ಹೆಚ್ಚಳಕ್ಕೆ ಅನುಮೋದನೆ ನೀಡುವುದು ಸೂಕ್ತ ಎಂದು ಒಪ್ಪಿಗೆ ನೀಡಿದರು.
 ಪ್ರಾಧಿಕಾರದ ಸಭೆಯ ನಡಾವಳಿ, ಪ್ರಕ್ರಿಯೆ ಇನ್ನಿತರ ಕೆಲಸಗಳು ಮುಗಿದ ಮೇಲೆ ಇನ್ನೊಂದು ವಾರದೊಳಗೆ ಆದೇಶ ಜಾರಿಗೊಳಿಸಿ ಜನವರಿ ಒಂದರಿಂದ ಅನ್ವಯವಾಗುವಂತೆ ನೂತನ ದರ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಡಿಸಿಪಿ ಕೆ.ಎಸ್.ಸುಂದರರಾಜ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮಧುರ, ರಾಮಚಂದ್ರಪ್ಪ, ನಯಾಜ್ ಪಾಷ, ಅಧೀಕ್ಷಕರಾದ ಮಂಜುನಾಥ್, ಶಿವಕುಮಾರ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net