ಹೊಸ ಉದ್ಯೋಗಿಗಳು, ಉದ್ಯೋಗದಾತರಿಗೆ ಉದ್ಯೋಗ ಯೋಜನೆಯಿಂದ ಲಾಭ

ಕೃಷ್ಣಮೂರ್ತಿಪುರಂನ ಹೋಟೆಲ್ ಮಾಲೀಕರ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ಪಿಎಂವಿಬಿಆರ್‌ವೈ ಕುರಿತು ಜಾಗೃತಿ, ಸಂವಾದ ಕಾರ್ಯಕ್ರಮವನ್ನು ಇಪಿಎಫ್‌ಒ ಪ್ರಾದೇಶಿಕ ಆಯುಕ್ತ ವಿನೀತ್‌ಕುಮಾರ್ ಉದ್ಘಾಟಿಸಿದರು. ಬಿ.ಎಸ್.ಶ್ರುತಿ,  ಪ್ರಫುಲ್ ಇಟ್ಟಿ, ಸಿ.ನಾರಾಯಣಗೌಡ, ಆರ್.ರವೀಂದ್ರ ಭಟ್, ರವಿಶಾಸ್ತ್ರಿ, ಸುಬ್ರಹ್ಮಣ್ಯ ಆರ್. ತಂತ್ರಿ ಇದ್ದರು.
ಕೃಷ್ಣಮೂರ್ತಿಪುರಂನ ಹೋಟೆಲ್ ಮಾಲೀಕರ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ಪಿಎಂವಿಬಿಆರ್‌ವೈ ಕುರಿತು ಜಾಗೃತಿ, ಸಂವಾದ ಕಾರ್ಯಕ್ರಮವನ್ನು ಇಪಿಎಫ್‌ಒ ಪ್ರಾದೇಶಿಕ ಆಯುಕ್ತ ವಿನೀತ್‌ಕುಮಾರ್ ಉದ್ಘಾಟಿಸಿದರು. ಬಿ.ಎಸ್.ಶ್ರುತಿ, ಪ್ರಫುಲ್ ಇಟ್ಟಿ, ಸಿ.ನಾರಾಯಣಗೌಡ, ಆರ್.ರವೀಂದ್ರ ಭಟ್, ರವಿಶಾಸ್ತ್ರಿ, ಸುಬ್ರಹ್ಮಣ್ಯ ಆರ್. ತಂತ್ರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಿಎಂವಿಬಿಆರ್‌ವೈ ಕುರಿತು ಜಾಗೃತಿ ಮತ್ತು ಸಂವಾದ ಕಾರ್ಯಕ್ರಮ
  • ಯುವ ಉದ್ಯೋಗಿಗಳಿಗೆ 15 ಸಾವಿರ ರೂ. ಪ್ರೋತ್ಸಾಹಧನ
  • ಪ್ರತಿ ಉದ್ಯೋಗದಾತರಿಗೂ ತಿಂಗಳಿಗೆ 3,000 ರೂ. ಪ್ರೋತ್ಸಾಹಧನ
ಮೈಸೂರು: ಪ್ರಧಾನಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆಯಿಂದ (ಪಿಎಂವಿಬಿಆರ್‌ವೈ) ಹೊಸ ಉದ್ಯೋಗಿ ಮತ್ತು ಉದ್ಯೋಗದಾತರಿಬ್ಬರಿಗೂ ಅನುಕೂಲವಾಗುತ್ತದೆ ಎಂದು ಇಪಿಎಫ್‌ಒ ಪ್ರಾದೇಶಿಕ ಆಯುಕ್ತ ವಿನೀತ್‌ಕುಮಾರ್ ಹೇಳಿದರು.
ಹೋಟೆಲ್ ಮಾಲೀಕರ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ಪಿಎಂವಿಬಿಆರ್‌ವೈ ಕುರಿತು ಜಾಗೃತಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಇದು ಹೊಸ ಉದ್ಯೋಗಿಗಳು ಹಾಗೂ ಉದ್ಯೋಗವನ್ನು ನೀಡುವ ಸಂಸ್ಥೆಗಳಿಬ್ಬರಿಗೂ ಪ್ರಯೋಜನ ಕಲ್ಪಿಸುವ ಗುರಿ ಹೊಂದಿದೆ. 
ಈ ಯೋಜನೆಯು ಎರಡು ವಿಭಾಗವನ್ನು ಒಳಗೊಂಡಿದೆ. ‘ಭಾಗ-ಎ’ ಮೊದಲ ಬಾರಿಗೆ ಕೆಲಸ ಮಾಡುವವರ ಮೇಲೆ ಗಮನ ಕೇಂದ್ರೀಕರಿಸಿದರೆ, ‘ಭಾಗ-ಬಿ’ ಉದ್ಯೋಗದಾತರು ಅಥವಾ ನಿಯೋಜಕರ ಬಗ್ಗೆ ಕಾಳಜಿ ವಹಿಸಲಿದೆ ಎಂದು ಮಾಹಿತಿ ನೀಡಿದರು.

15 ಸಾವಿರ ರೂ. ಪ್ರೋತ್ಸಾಹಧನ : 

ಇಪಿಎಫ್‌ಒ ಅಧಿಕಾರಿ ಬಿ.ಎಸ್.ಶ್ರುತಿ ಮಾತನಾಡಿ, ಖಾಸಗಿ ವಲಯದಲ್ಲಿ ತಮ್ಮ ಮೊದಲ ಉದ್ಯೋಗವನ್ನು ಪಡೆಯುವ ಯುವ ಉದ್ಯೋಗಿಗಳಿಗೆ 15 ಸಾವಿರ ರೂ. ಪ್ರೋತ್ಸಾಹಧನ ದೊರೆಯುತ್ತದೆ. 
ಅದನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಇದನ್ನು ಎರಡು ಕಂತುಗಳಲ್ಲಿ ವಿತರಿಸಲಾಗುತ್ತದೆ. ಮೊದಲನೆಯದು 6 ತಿಂಗಳ ಉದ್ಯೋಗ ಪೂರ್ಣಗೊಳಿಸಿದ ನಂತರ ಮತ್ತು ಎರಡನೆಯದು 12 ತಿಂಗಳು ಪೂರ್ಣಗೊಳಿಸಿದ ನಂತರ ಎಂದು ಮಾಹಿತಿ ನೀಡಿದರು.
ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಕಂಪನಿಗಳಿಗೆ ಉತ್ತೇಜಿಸಲು, ಕೇಂದ್ರ ಸರ್ಕಾರವು ಎರಡು ವರ್ಷಗಳ ಅವಧಿಗೆ ಪ್ರತಿ ಉದ್ಯೋಗದಾತರಿಗೂ ತಿಂಗಳಿಗೆ 3,000 ರೂ. ಪ್ರೋತ್ಸಾಹಧನ ನೀಡುತ್ತದೆ.
 2025ರ ಆಗಸ್ಟ್ 1ರಿಂದ 2027ರ ಜುಲೈ 31ರವರೆಗೆ ಇಪಿಎಫ್‌ಒಗೆ ಸೇರಿದ ಹೊಸ ಉದ್ಯೋಗಿಗಳು (ಹಿಂದೆ ಇಪಿಎಫ್‌ಒ ಸದಸ್ಯರಾಗಿರದವರು) ಹಾಗೂ ಅವರಿಗೆ ಉದ್ಯೋಗ ನೀಡುವ ಸಂಸ್ಥೆಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ ಎಂದು ತಿಳಿಸಿದರು.
ಇದು ಕೋಟ್ಯಂತರ ಯುವಕರಿಗೆ ಮೊದಲ ಬಾರಿಗೆ ಉದ್ಯೋಗ ನೀಡುವುದರ ಜತೆಗೆ, ಮಹಿಳೆಯರಿಗೂ ಉದ್ಯೋಗಾವಕಾಶ ವಿಸ್ತರಿಸುತ್ತದೆ. ಸಾಮಾಜಿಕ ಭದ್ರತೆ ವ್ಯಾಪ್ತಿಯನ್ನೂ ಹೆಚ್ಚಿಸುತ್ತದೆ. ಉತ್ಪಾದನಾ ವಲಯವನ್ನು ಬಲಪಡಿಸಿ ಮೇಕ್ ಇನ್ ಇಂಡಿಯಾ ಗುರಿ ಸಾಧಿಸಲು ಸಹಾಯ ಮಾಡುತ್ತದೆ.
 ಆದ್ದರಿಂದ ಹೊಸ ಉದ್ಯೋಗಿಗಳು, ಉದ್ಯೋಗದಾತರರು ಈ ಯೋಜನೆ ಲಾಭ ಪಡೆದುಕೊಳ್ಳಬೇಕು. ಅದಕ್ಕಾಗಿ ಯೋಜನೆಗೆ ನೋಂದಣಿಯಾಗಬೇಕು ಎಂದು ಹೇಳಿದರು.
ಇಪಿಎಫ್‌ಒ ಅಧಿಕಾರಿ ಪ್ರಫುಲ್ ಇಟ್ಟಿ, ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ,  ಕಾರ್ಯದರ್ಶಿ ಆರ್.ರವೀಂದ್ರ ಭಟ್, ಹೋಟೆಲ್ ಮಾಲೀಕರ ಧರ್ಮದತ್ತಿಯ ಅಧ್ಯಕ್ಷ ರವಿಶಾಸ್ತ್ರಿ,  ಕಾರ್ಯದರ್ಶಿ ಸುಬ್ರಹ್ಮಣ್ಯ ಆರ್. ತಂತ್ರಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net