ಮೈಸೂರು: ಸೈನಿಕ ಅಕಾಡೆಮಿ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ರಕ್ತನಿಧಿ ಕೇಂದ್ರದಲ್ಲಿ ಶುಕ್ರವಾರ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಜನ್ಮದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ ನಡೆಯಿತು. 30ಕ್ಕೂ ಹೆಚ್ಚು ಯುವಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಜನ್ಮದಿನ ಆಚರಿಸಿದರಷ್ಟೇ ಸಾಲದು, ಅವರ ಆದರ್ಶ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ರಾಷ್ಟ್ರೀಯ ಮನೋಭಾವ, ದೇಶಪ್ರೇಮ ಮೈಗೂಡಿಸಿಕೊಂಡು ವೈಚಾರಿಕವಾಗಿ ಚಿಂತಿಸಬೇಕು. ನೇತಾಜಿ ಅವರು ಹೇಳಿದಂತೆಯೇ ಪ್ರತಿಯೊಂದು ವಿಭಾಗದಲ್ಲೂ ನಡೆಯುವ ಅನ್ಯಾಯವನ್ನು ಪ್ರಶ್ನಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು.ನೇತಾಜಿ ಅವರ ವಿಚಾರಗಳು ಯುವಜನತೆಗೆ ಪ್ರೇರಣೆಯ ಕಥನಗಳಾಗಿವೆ. ಸ್ವಾಂತ್ರೃ ಹೋರಾಟದಲ್ಲಿ ರಾಜಿರಹಿತ ಹೋರಾಟ ಮಾಡಿದ್ದರು. ತಮ್ಮ ಬಾಲ್ಯದಿಂದಲೂ ಇಡೀ ದೇಶದ ಜನರ ವಿಮುಕ್ತಿಗಾಗಿ ಹೋರಾಟ ನಡೆಸಿದರು ಎಂದು ಸ್ಮರಿಸಿದರು.
ಈ ಸಂದರ್ಭ ಸೈನಿಕ ಅಕಾಡೆಮಿ ಸಂಸ್ಥಾಪಕ ಸಿ.ಎಂ.ಶ್ರೀಧರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಮುತ್ತಣ್ಣ, ಬಿಜೆಪಿ ಮುಖಂಡ ಜೋಗಿ ಮಂಜು, ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್ ಹಾಗೂ ಇತರರು ಇದ್ದರು.